

ಅಹಮದಾಬಾದ್: 6 ವರ್ಷಗಳ ಬಳಿಕ ಪ್ರಶಸ್ತಿ ಸುತ್ತಿಗೇರುವ ಉತ್ಸಾಹದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್-15ರ ಎರಡನೇ ಕ್ವಾಲಿಫೈಯರ್ ಹೋರಾಟದಲ್ಲಿ ಮಾಜಿ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಮುಂಬೈನಿಂದ ಆರಂಭಗೊಂಡು ಪುಣೆ, ಬಳಿಕ ಕೋಲ್ಕತ ಸುತ್ತಿ ಅಹಮದಾಬಾದ್‌ಗೆ ಐಪಿಎಲ್ ರೋಚಕತೆ ತಲುಪಿದೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಆರ್‌ಸಿಬಿ-ರಾಜಸ್ಥಾನ ನಡುವಿನ ಕದನ ಕ್ರಿಕೆಟ್ ಪ್ರಿಯರ ಕುತೂಹಲ ಕೆರಳಿಸಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ತಂಡ ಟೈಟಾನ್ಸ್‌ಗೆ ಶರಣಾಗಿತ್ತು. ಇದೀಗ 14 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಲು ಮತ್ತೊಂದು ಅವಕಾಶ ಒದಗಿಬಂದಿದೆ.
*ಆತ್ಮವಿಶ್ವಾಸದಲ್ಲಿ ಆರ್‌ಸಿಬಿ
ಅದೃಷ್ಟದಾಟದಲ್ಲಿ ಪ್ಲೇಆಫ್ ಹಂತಕ್ಕೇರಿದರೂ ಎಲಿಮಿನೇಟರ್ ಹೋರಾಟದಲ್ಲಿ ಭರ್ಜರಿ ಗೆಲುವಿನ ನಗೆ ಬೀರಿರುವ ಫಾಫ್ ಡು ಪ್ಲೆಸಿಸ್ ಬಳಗ ಆತ್ಮವಿಶ್ವಾಸದಲ್ಲಿದೆ. ಸ್ಟಾರ್ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಪ್ಲೆಸಿಸ್ ಕೈಕೊಟ್ಟರೂ ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್ ಸಾಹಸದಿಂದಾಗಿ ಲಖನೌಗೆ ಬೃಹತ್ ಸವಾಲು ನೀಡಿತ್ತು. ಒತ್ತಡದ ನಡುವೆಯೂ ರಜತ್ ಅದ್ಭುತ ಇನಿಂಗ್ಸ್ ಕಟ್ಟುವ ಮೂಲಕ ಎಲ್ಲರ ಗಮನಸೆಳೆದಿದ್ದರು. ಸ್ಪಿನ್ನರ್ ವನಿಂದು ಹಸರಂಗ ಕೊಂಚ ದುಬಾರಿಯಾಗಿದ್ದರೆ, ಸ್ಲಾಗ್ ಓವರ್‌ಗಳಲ್ಲಿ ಹರ್ಷಲ್ ಪಟೇಲ್ ಹಾಗೂ ಜೋಶ್ ಹ್ಯಾಸಲ್‌ವುಡ್ ಜೋಡಿ ಲಖನೌ ಬ್ಯಾಟರ್‌ಗಳಿಗೆ ಕಡಿವಾಣ ಹೇರಿತ್ತು. ಹೊಸ ಚೆಂಡಿನಲ್ಲಿ ಮೊಹಮದ್ ಸಿರಾಜ್ ಗಮನಸೆಳೆದಿದ್ದರು.
* ಬದಲಿ ಆಟಗಾರನಾಗಿ ಬಂದು ಮಿಂಚಿದ ರಜತ್
ಆಟಗಾರರ ಮೆಗಾ ಹರಾಜಿನಲ್ಲಿ ಬಿಕರಿಯಾಗದೆ ಉಳಿದಿದ್ದ ರಜತ್ ಪಾಟಿದಾರ್, ಕರ್ನಾಟಕದ ಲವನೀತ್ ಸಿಸೋಡಿಯ ಗಾಯದ ಸಮಸ್ಯೆಯಿಂದ ಹೊರಬಿದ್ದ ಹಿನ್ನೆಲೆಯಲ್ಲಿ ಆರ್‌ಸಿಬಿ ತಂಡವನ್ನು ಕೂಡಿಕೊಂಡಿದ್ದರು. ಹೀಗೆ ಬದಲಿ ಆಟಗಾರನಾಗಿ ತಂಡ ಸೇರಿದ್ದರೂ ಹನ್ನೊಂದರ ಬಳಗದಲ್ಲಿ ಆಡುವ ಅವಕಾಶ ಪಡೆದ ಪಾಟಿದಾರ್, ಎಲಿಮಿನೇಟರ್ ಹಣಾಹಣಿಯಲ್ಲಿ ಅಬ್ಬರದ ಬ್ಯಾಟಿಂಗ್‌ನಿಂದ ಕ್ರಿಕೆಟ್ ಜಗತ್ತಿನ ಗಮನಸೆಳೆದರು. ಇದಕ್ಕೂ ಮೊದಲು ಟೈಟಾನ್ಸ್ ಎದುರು 52 ರನ್ ಬಾರಿಸಿದ್ದೆ ಪ್ರಸಕ್ತ ಲೀಗ್‌ನಲ್ಲಿ ಅವರು ಗಳಿಸಿದ್ದ ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು.
*ಪುಟಿದೇಳುವ ವಿಶ್ವಾಸದಲ್ಲಿ ರಾಯಲ್ಸ್
ಮೊದಲ ಕ್ವಾಲಿೈಯರ್‌ನಲ್ಲಿ ಬೌಲರ್‌ಗಳ ವೈಫಲ್ಯದಿಂದ ನಿರಾಸೆ ಅನುಭವಿಸಿದ್ದ ರಾಜಸ್ಥಾನ ತಂಡ, 2008ರ ಬಳಿಕ ಮೊದಲ ಬಾರಿಗೆ ಫೈನಲ್ ಪ್ರವೇಶಿಸುವ ಅವಕಾಶ ಹೊಂದಿದೆ. ಸತತ 5 ಇನಿಂಗ್ಸ್‌ಗಳಲ್ಲಿ ವಿಲರಾಗಿದ್ದ ಜೋಸ್ ಬಟ್ಲರ್ ಹಿಂದಿನ ಪಂದ್ಯದಲ್ಲಿ ಫಾರ್ಮ್ ಕಂಡುಕೊಂಡಿದ್ದಾರೆ. ಆದರೆ, ಇತರ ಬ್ಯಾಟರ್‌ಗಳಿಂದ ಬ್ಲಟರ್‌ಗೆ ಅಗತ್ಯ ಸಾಥ್ ಸಿಗಬೇಕಿದೆ. ಕೇವಲ 30 ರನ್‌ಗಳ ಆಸುಪಾಸಿಗೆ ಸುಸ್ತಾಗುತ್ತಿರುವ ನಾಯಕ ಸಂಜು ಸ್ಯಾಮ್ಸನ್ ದೊಡ್ಡ ಇನಿಂಗ್ಸ್ ಕಟ್ಟಲು ವಿಫಲರಾಗುತ್ತಿದ್ದರೆ, ಆರಂಭಿಕ ಯಶಸ್ವಿ ಜೈಸ್ವಾಲ್, ದೇವದತ್ ಪಡಿಕಲ್, ಶಿಮ್ರೊನ್ ಹೆಟ್ಮೆಯರ್‌ರಂಥ ಬ್ಯಾಟರ್‌ಗಳು ಆಸರೆಯಾಗಬೇಕಿದೆ. ಟ್ರೆಂಟ್ ಬೌಲ್ಟ್, ಪ್ರಸಿದ್ಧ ಕೃಷ್ಣ ದುಬಾರಿಯಾಗುತ್ತಿದ್ದರೆ, ಯಜುವೇಂದ್ರ ಚಾಹಲ್ ಹಾಗೂ ಆರ್.ಅಶ್ವಿನ್ ನಂಬಿಕೆ ಉಳಿಸಿಕೊಂಡಿದ್ದಾರೆ.
ಟೀಮ್ ನ್ಯೂಸ್:
ಆರ್‌ಸಿಬಿ: ಬಹುತೇಕ ಹಿಂದಿನ ಪಂದ್ಯದಲ್ಲಿ ಆಡಿದ ತಂಡವೇ ಕಣಕ್ಕಿಳಿಯಲಿದೆ. ಹರ್ಷಲ್ ಪಟೇಲ್ ಪೂರ್ಣ ಫಿಟ್ ಇಲ್ಲದಿದ್ದರೂ, ಮರಳಿ ಕಣಕ್ಕಿಳಿಯುವ ನಿರೀಕ್ಷೆ ಇದೆ.
ರಾಜಸ್ಥಾನ: ಮೊದಲ ಕ್ವಾಲಿಫೈಯರ್ ಪಂದ್ಯದ ಸೋಲಿನ ನಡುವೆಯೂ ಅದೇ ತಂಡವನ್ನು ಉಳಿಸಿಕೊಳ್ಳುವ ಸಾಧ್ಯತೆಗಳಿವೆ.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಮುಖಾಮುಖಿ: 26, ಆರ್‌ಸಿಬಿ: 13, ರಾಜಸ್ಥಾನ: 11, ರದ್ದು: 2
ಲೀಗ್ ಮುಖಾಮುಖಿ: 2, ಆರ್‌ಸಿಬಿ: 1, ರಾಜಸ್ಥಾನ: 1