ಸೋಲಿನ ಸರದಾರರಿಗೆ ಎಲ್‌ಎಸ್‌ಜಿ ಚಾಲೆಂಜ್

ipl-15 lsg and mumbai match preview for web
Published on

ಮುಂಬೈ: ಸಪ್ತ ಸೋಲುಗಳಿಂದ ಕಂಗೆಟ್ಟು ಪ್ಲೇಆಫ್ ಆಸೆಯನ್ನು ಬಹುತೇಕ ಕೈಚೆಲ್ಲಿರುವ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಅಂಕಪಟ್ಟಿಯಲ್ಲಿ ಮೇಲೇರುವ ತವಕದಲ್ಲಿರುವ ಲಖನೌ ಸೂಪರ್‌ಜೈಂಟ್ಸ್ ತಂಡಗಳು ಐಪಿಎಲ್-15ರಲ್ಲಿ ಸೋಮವಾರ ನಡೆಯಲಿರುವ ಹಣಾಹಣಿಯಲ್ಲಿ ಎದುರಾಗಲಿವೆ. ಟೂರ್ನಿ ಶೇ. 40 ಸಾಗಿದ್ದರೂ ಇದುವರೆಗೆ ಗೆಲುವಿನ ಖಾತೆ ತೆರೆಯಲು ಮುಂಬೈಗೆ ಸಾಧ್ಯವಾಗಿಲ್ಲ. ನಾಯಕ ರೋಹಿತ್ ಶರ್ಮ ಹಾಗೂ ದುಬಾರಿ ಆಟಗಾರ ಇಶಾನ್ ಕಿಶನ್ ಸತತ ವೈಫಲ್ಯವೇ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಟೂರ್ನಿಯ ಮೊದಲ ಚರಣದ ಪಂದ್ಯದಲ್ಲಿ ಮುಂಬೈ ತಂಡವನ್ನು 18 ರನ್‌ಗಳಿಂದ ಸೋಲಿಸಿದ್ದ ಕೆಎಲ್ ರಾಹುಲ್ ಪಡೆ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ.

* ಟೀಮ್ ನ್ಯೂಸ್

ಎಲ್‌ಎಸ್‌ಜಿ: ಹಿಂದಿನ ಪಂದ್ಯದಲ್ಲಿ ಆರ್‌ಸಿಬಿ ಎದುರು ಸೋಲನುಭವಿಸಿದ್ದ ಎಲ್‌ಎಸ್‌ಜಿ ತಂಡದಲ್ಲಿ 1 ಬದಲಾವಣೆಯ ನಿರೀಕ್ಷೆ ಇದೆ. ನಿರೀಕ್ಷಿತ ಬ್ಯಾಟಿಂಗ್ ನಿರ್ವಹಣೆ ತೋರದಿರುವ ಮನೀಷ್ ಪಾಂಡೆ ಬದಲು ಮನನ್ ವೊಹ್ರಾ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಮುಂಬೈ: ಗೆಲುವಿನ ಕಾಂಬಿನೇಷನ್ ಕಂಡುಕೊಳ್ಳಲು ಪರದಾಡುತ್ತಿರುವ ತಂಡದಲ್ಲಿ ಹೆಚ್ಚಿನ ಬದಲಾವಣೆಯಾದರೆ ಅಚ್ಚರಿ ಇಲ್ಲ. ಕಳೆದ ಪಂದ್ಯದಲ್ಲಿ ಧೋನಿ ಎದುರು ಕೊನೇ ಓವರ್‌ನಲ್ಲಿ ದುಬಾರಿಯಾಗಿದ್ದ ಜೈದೇವ್ ಉನಾದ್ಕತ್‌ಗೆ ಕೊಕ್ ನಿರೀಕ್ಷಿಸಲಾಗಿದ್ದು, ಯುವ ವೇಗಿ ಅರ್ಜುನ್ ತೆಂಡುಲ್ಕರ್ ಅವಕಾಶ ಪಡೆಯಬಹುದು ಅಥವಾ ಬಸಿಲ್ ಥಂಪಿ ಮತ್ತೆ ಕಣಕ್ಕಿಳಿಯಬಹುದು. ಸತತ ವೈಲ್ಯ ಕಾಣುತ್ತಿರುವ ಕೈರಾನ್ ಪೊಲ್ಲಾರ್ಡ್‌ಗೆ ಕೊಕ್ ನೀಡಿದರೆ, ಟಿಮ್ ಡೇವಿಡ್ ಆಡಬಹುದು.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಮುಖಾಮುಖಿ: 1

ಎಲ್‌ಎಸ್‌ಜಿ: 1

ಮುಂಬೈ: 0

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net