ಸತತ 8ನೇ ಪಂದ್ಯದಲ್ಲೂ ಗೆಲುವಿನ ಖಾತೆ ತೆರೆಯಲು ಮುಂಬೈ ವಿಫಲ; ಲಖನೌ ಎದುರು 36 ರನ್ ಸೋಲು

ipl-15 mumbai and punjab match for web
Published on

ಮುಂಬೈ: ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ (103*ರನ್, 62 ಎಸೆತ, 12 ಬೌಂಡರಿ, 4 ಸಿಕ್ಸರ್) ಶತಕದಬ್ಬರ ಮತ್ತು ಬೌಲರ್‌ಗಳ ಸಂಘಟಿತ ನಿರ್ವಹಣೆ ಫಲವಾಗಿ ಲಖನೌ ಸೂಪರ್‌ಜೈಂಟ್ಸ್ ತಂಡ ಐಪಿಎಲ್-15ರ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು 36 ರನ್‌ಗಳಿಂದ ಸೋಲಿಸಿತು. ಇದರಿಂದ ಲೀಗ್‌ನಲ್ಲಿ 5ನೇ ಜಯ ದಾಖಲಿಸಿದ ಎಲ್‌ಎಸ್‌ಜಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿತು. ಮತ್ತೊಂದೆಡೆ, ರೋಹಿತ್ ಶರ್ಮ ಪಡೆ ಸತತ 8ನೇ ಪಂದ್ಯದಲ್ಲೂ ಗೆಲುವಿನ ಖಾತೆ ತೆರೆಯಲು ವಿಫಲವಾಯಿತು. ಟೂರ್ನಿ ಅರ್ಧದಾರಿ ಸವೆದರೂ ಸೋಲಿನ ಸರಣಿ ಮುಂದುವರಿಸಿದ ಮುಂಬೈ ತಂಡ ಲೀಗ್‌ನಲ್ಲಿ ತನ್ನ ಹೋರಾಟವನ್ನು ಅಧಿಕೃತವಾಗಿ ಮುಕ್ತಾಯಗೊಳಿಸಿತು.

ವಾಂಖೆಡೆ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಖನೌ ತಂಡ ರಾಹುಲ್ ಏಕಾಂಗಿ ನಿರ್ವಹಣೆ ಫಲವಾಗಿ 6 ವಿಕೆಟ್‌ಗೆ 168 ರನ್ ಕಲೆಹಾಕಿತು. ಮುಂಬೈ ವಿರುದ್ಧದ ಹಿಂದಿನ ಮುಖಾಮುಖಿಯಲ್ಲೂ ರಾಹುಲ್ ಅಜೇಯ 103 ರನ್ ಬಾರಿಸಿದ್ದರು. ಪ್ರತಿಯಾಗಿ ಮುಂಬೈ ಇಂಡಿಯನ್ಸ್ ತಂಡ 8 ವಿಕೆಟ್‌ಗೆ 132 ರನ್ ದಾಖಲಿಸಲಷ್ಟೇ ಶಕ್ತವಾಯಿತು. ಈ ಮೂಲಕ ಎಲ್‌ಎಸ್‌ಜಿ ಟೂರ್ನಿಯ ಎರಡೂ ಮುಖಾಮುಖಿಯಲ್ಲಿ ಮುಂಬೈ ತಂಡವನ್ನು ಮಣಿಸಿದಂತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net