

ಮುಂಬೈ: ಸರ್ವಾಂಗೀಣ ನಿರ್ವಹಣೆ ತೋರಿದ ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಲಖನೌ ಸೂಪರ್ ಜೈಂಟ್ಸ್ ತಂಡ ಐಪಿಎಲ್-15ರಲ್ಲಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿತು. ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ (80ರನ್, 52 ಎಸೆತ, 9 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಹಾಗೂ ಬೌಲರ್‌ಗಳಾದ ರವಿ ಬಿಷ್ಣೋಯಿ (22ಕ್ಕೆ 2) ಮಾರಕ ದಾಳಿ ನೆರವಿನಿಂದ 6 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿತು. ರಿಷಭ್ ಪಂತ್ ಸಾರಥ್ಯದ ಡೆಲ್ಲಿಗೆ ಸತತ 2ನೇ ಸೋಲು ಇದಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಸ್ಫೋಟಕ ಬ್ಯಾಟರ್ ಪೃಥ್ವಿ ಷಾ (61 ರನ್, 34 ಎಸೆತ, 9 ಬೌಂಡರಿ, 2 ಸಿಕ್ಸರ್) ಬಿರುಸಿನ ಆರಂಭದ ನಡುವೆಯೂ ದಿಢೀರ್ ಕುಸಿತ ಕಂಡಿತು. ಬಳಿಕ ನಾಯಕ ರಿಷಭ್ ಪಂತ್ (39*ರನ್, 36 ಎಸೆತ, 3 ಬೌಂಡರಿ, 2 ಸಿಕ್ಸರ್) ಹಾಗೂ ಸರ್ಫಾಜ್ ಖಾನ್ (36*ರನ್, 28 ಎಸೆತ, 3 ಬೌಂಡರಿ) ಜೋಡಿ ಮುರಿಯದ 4ನೇ ವಿಕೆಟ್‌ಗೆ 75 ರನ್ ಕಲೆಹಾಕಿದ ಪರಿಣಾಮ 3 ವಿಕೆಟ್‌ಗೆ 149 ರನ್ ಕಲೆಹಾಕಿತು. ಪ್ರತಿಯಾಗಿ ಎಲ್‌ಎಸ್‌ಜಿ ತಂಡ 19.4 ಓವರ್‌ಗಳಲ್ಲಿ 4 ವಿಕೆಟ್‌ಗೆ 155 ರನ್‌ಗಳಿಸಿ ಜಯದ ನಗೆ ಬೀರಿತು.
ಡೆಲ್ಲಿ ಕ್ಯಾಪಿಟಲ್ಸ್: 3 ವಿಕೆಟ್‌ಗೆ 149 (ಪೃಥ್ವಿ ಷಾ 61, ರಿಷಭ್ ಪಂತ್ 39, ರ್ಸ್ರಾಜ್ ಖಾನ್ 36*, ರವಿ ಬಿಷ್ಣೋಯಿ 22ಕ್ಕೆ 2, ಕೆ.ಗೌತಮ್ 23ಕ್ಕೆ 1), ಲಖನೌ ಸೂಪರ್ ಜೈಂಟ್ಸ್: 19.4 ಒವರ್‌ಗಳಲ್ಲಿ 4 ವಿಕೆಟ್‌ಗೆ 155 (ಕ್ವಿಂಟನ್ ಡಿಕಾಕ್ 80, ಕೆಎಲ್ ರಾಹುಲ್ 24, ಕೃನಾಲ್ ಪಾಂಡ್ಯ 19*, ಆಯುಷ್ ಬಡೋನಿ 10*, ಕುಲದೀಪ್ ಯಾದವ್ 31ಕ್ಕೆ 2, ಲಲಿತ್ ಯಾದವ್ 21ಕ್ಕೆ 1, ಶಾರ್ದೂಲ್ ಠಾಕೂರ್ 29ಕ್ಕೆ 1).