

ಮುಂಬೈ: ಇದುವರೆಗೂ ಬ್ಯಾಟರ್‌ಗಳ ಅಬ್ಬರಕ್ಕೆ ವೇದಿಕೆಯಾಗುತ್ತಿದ್ದ ಹಾಲಿ ಐಪಿಎಲ್‌ನಲ್ಲಿ ಭಾನುವಾರ ಬೌಲರ್‌ಗಳೇ ನಿರ್ಣಾಯಕ ಪಾತ್ರ ವಹಿಸಿದ್ದು ವಿಶೇಷ. ಟಾಸ್ ಜಯಿಸಿದ ತಂಡ ಮರುಯೋಚನೆ ಇಲ್ಲದೆ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುತ್ತಿರುವ ಪರಿಪಾಠ ಮುಂದುವರಿಸಿದರೂ ದಿನದ ಎರಡೂ ಪಂದ್ಯಗಳಲ್ಲೂ ಚೇಸಿಂಗ್ ಮಾಡಿದ ತಂಡಗಳೇ ಮುಗ್ಗರಿಸಿದವು. ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟರ್ ಶಿಮ್ರೋನ್ ಹೆಟ್ಮೆಯರ್ (59*ರನ್, 36 ಎಸೆತ, 1 ಬೌಂಡರಿ, 6 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ ಹಾಗೂ ಯಜುವೇಂದ್ರ ಚಾಹಲ್ (41ಕ್ಕೆ 4), ಟ್ರೆಂಟ್ ಬೌಲ್ಟ್ (30ಕ್ಕೆ 2) ಮಾರಕ ದಾಳಿ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ ಲಖನೌ ಸೂಪರ್‌ಜೈಂಟ್ಸ್ ಎದುರು 3 ರನ್‌ಗಳಿಂದ ರೋಚಕ ಜಯ ದಾಖಲಿಸಿತು.
ವಾಂಖೆಡೆ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ 6 ವಿಕೆಟ್‌ಗೆ 165 ರನ್ ಪೇರಿಸಿತು. ಪ್ರತಿಯಾಗಿ ಎಲ್‌ಎಸ್‌ಜಿ ತಂಡ 8 ವಿಕೆಟ್‌ಗೆ 162 ರನ್‌ಗಳಿಸಿ ಸೋಲೊಪ್ಪಿಕೊಂಡಿತು. ಹ್ಯಾಟ್ರಿಕ್ ಗೆಲುವಿನೊಂದಿಗೆ ಬೀಗಿದ್ದ ಲಖನೌ ಮತ್ತೆ ನಿರಾಸೆ ಅನುಭವಿಸಿದರೆ, ರಾಜಸ್ಥಾನ 3ನೇ ಜಯದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ರಾಜಸ್ಥಾನ ರಾಯಲ್ಸ್: 6 ವಿಕೆಟ್‌ಗೆ 165 (ಜೋಸ್ ಬಟ್ಲರ್ 13, ದೇವದತ್ ಪಡಿಕಲ್ 29, ಶಿಮ್ರೋನ್ ಹೆಟ್ಮೆಯರ್ 59*, ಆರ್.ಅಶ್ವಿನ್, 28, ಜೇಸನ್ ಹೋಲ್ಡರ್ 50ಕ್ಕೆ 2, ಕೆ.ಗೌತಮ್ 30ಕ್ಕೆ 2), ಲಖನೌ ಸೂಪರ್‌ಜೈಂಟ್ಸ್: 8 ವಿಕೆಟ್‌ಗೆ 162 (ಕ್ವಿಂಟನ್ ಡಿಕಾಕ್ 39, ದೀಪಕ್ ಹೂಡಾ 25, ಕೃನಾಲ್ ಪಾಂಡ್ಯ 22, ಮಾರ್ಕಸ್ ಸ್ಟೋಯಿನಿಸ್ 38*, ಚಮೀರಾ 13, ಯಜುವೇಂದ್ರ ಚಾಹಲ್ 41ಕ್ಕೆ 4, ಟ್ರೆಂಟ್ ಬೌಲ್ಟ್ 30ಕ್ಕೆ 2).