

ಪುಣೆ: ಅಂತಿಮ ನಾಲ್ಕರ ಘಟ್ಟಕ್ಕೇರಲು ಕೂದಲೆಳೆ ಅವಕಾಶ ಉಳಿಸಿಕೊಂಡಿರುವ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ ನೈಟ್‌ರೈಡರ್ಸ್ ತಂಡಗಳು ಐಪಿಎಲ್-15ರ ನಿರ್ಣಾಯಕ ಹಣಾಹಣಿಯಲ್ಲಿ ಶನಿವಾರ ಎದುರಾಗಲಿವೆ. ಉಭಯ ತಂಡಗಳ ಪಾಲಿಗೆ ಈ ಪಂದ್ಯ ಮಾಡು ಇಲ್ಲವೆ ಮಡಿಯಂತಿದ್ದು, ಗೆದ್ದರಷ್ಟೇ ಮುಂದಿನ ಹಂತದ ಹೋರಾಟ ಜೀವಂತವಾಗಿರಲಿದೆ. ಮೊದಲ ಹಣಾಹಣಿಯಲ್ಲಿ ಸನ್‌ರೈಸರ್ಸ್ ಎದುರು ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವುದರ ಜತೆಗೆ ಪ್ಲೇಆಫ್ ರೇಸ್‌ನಲ್ಲಿ ಉಳಿಯುವ ಅವಕಾಶ ಕೆಕೆಆರ್ ಮುಂದಿದೆ.
* ಪುಟಿದೇಳುವುದೇ ಸನ್‌ರೈಸರ್ಸ್ ?
ಆರಂಭಿಕ ಎರಡು ಸೋಲುಗಳ ಬಳಿಕ ಸತತ 5 ಜಯ ದಾಖಲಿಸಿ ಬಲಿಷ್ಠ ತಂಡವಾಗಿ ಹೊರಹೊಮ್ಮಿದ್ದ ಸನ್‌ರೈಸರ್ಸ್, ಇದೀಗ ಸತತ 4 ಸೋಲುಗಳಿಂದ ಕಂಗೆಟ್ಟಿದೆ. 10 ಪಾಯಿಂಟ್ಸ್ ಹೊಂದಿರುವ ಸನ್‌ರೈಸರ್ಸ್, ಉಳಿದಿರುವ ಮೂರು ಪಂದ್ಯಗಳಲ್ಲೂ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಕೇನ್ ವಿಲಿಯಮ್ಸನ್ ಪಡೆಯ ರನ್‌ರೇಟ್ ಕೂಡ ಮೈನಸ್ ಆಗಿದ್ದು, ಗೆಲುವಿನ ಜತೆಗೆ ರನ್‌ರೇಟ್ ಸುಧಾರಣೆ ಕಡೆಗೂ ಗಮನಹರಿಸಬೇಕಿದೆ. ವಾಷಿಂಗ್ಟನ್ ಸುಂದರ್ ಹಾಗೂ ಟಿ.ನಟರಾಜನ್ ಗಾಯ ಸಮಸ್ಯೆಯಿಂದಾಗಿ ಅಗತ್ಯವಿದ್ದ ವೇಳೆ ಅಲಭ್ಯರಾಗಿದ್ದೇ ತಂಡಕ್ಕೆ ಹಿನ್ನಡೆ ತಂದುಕೊಟ್ಟಿದೆ. ಟೂರ್ನಿಯಲ್ಲಿ ಅತ್ಯಂತ ವೇಗಿ ಎನಿಸಿಕೊಂಡಿರುವ ಉಮ್ರಾನ್ ಮಲಿಕ್ ವಿಕೆಟ್ ಬೇಟೆಯ ಫಾರ್ಮ್ ಕಳೆದುಕೊಂಡಿದ್ದಾರೆ. ಡೆತ್ ಓವರ್‌ಗಳಲ್ಲಿ ದುಬಾರಿಯಾಗುತ್ತಿರುವುದೇ ಭಾರಿ ಪೆಟ್ಟು ನೀಡುತ್ತಿದೆ.
* ಕೆಕೆಆರ್‌ಗಿದು ಕಡೇ ಚಾನ್ಸ್
ಟೂರ್ನಿಯುದ್ದಕ್ಕೂ ಅಸ್ಥಿರ ನಿರ್ವಹಣೆಯಿಂದ ಬಳಲುತ್ತಿರುವ ಕೆಕೆಆರ್ ತಂಡಕ್ಕಿದು ಕಡೇ ಅವಕಾಶವಾಗಿದೆ. ಲೀಗ್‌ನಲ್ಲಿ ಬಹುತೇಕ ತನ್ನ ಹೋರಾಟ ಮುಕ್ತಾಯಗೊಳಿಸಿದ್ದು, ಗೆದ್ದರೂ ಇತರ ತಂಡಗಳು ಸೋಲಬೇಕೆಂದು ಪ್ರಾರ್ಥಿಸಬೇಕಿದೆ. ಒಂದು ವೇಳೆ ಗೆದ್ದರಷ್ಟೇ ಕೆಕೆಆರ್‌ಗೆ ಕೊಂಚ ಅವಕಾಶವಿದ್ದು, ಸೋತರೆ 3ನೇ ತಂಡವಾಗಿ ಲೀಗ್‌ನಿಂದ ಅಧಿಕೃತವಾಗಿ ಹೊರಬೀಳಲಿದೆ. ಪ್ರಮುಖ ವೇಗಿ ಪ್ಯಾಟ್ ಕಮ್ಮಿನ್ಸ್ ಅಲಭ್ಯತೆಯೂ ತಂಡಕ್ಕೆ ಹಿನ್ನಡೆ ತಂದಿದೆ.
ಟೀಮ್ ನ್ಯೂಸ್
ಸನ್‌ರೈಸರ್ಸ್: ಬೌಲಿಂಗ್ ವಿಭಾಗದಲ್ಲಿ ಕೆಲ ಬದಲಾವಣೆಯಾಗುವ ಸಾಧ್ಯತೆಗಳಿವೆ. ಜೆ.ಸುಚಿತ್ ಬದಲಿಗೆ ವಾಷಿಂಗ್ಟನ್ ಸುಂದರ್ ವಾಪಸಾಗುವ ಸಾಧ್ಯತೆಗಳಿದ್ದು, ಮಾರ್ಕೋ ಜಾನ್ಸೆನ್, ಜಲಕ್ ಫಾರೂಖಿ, ರೊಮಾರಿಯೊ ಶೆರ್ಡ್ ಈ ಮೂವರಲ್ಲಿ ಒಬ್ಬರು ಆಡಲಿದ್ದಾರೆ. ನಟರಾಜನ್ ಸ್ಥಾನ ಪಡೆದರೆ ಕಾರ್ತಿಕ್ ತ್ಯಾಗಿ ಹೊರಬೀಳಲಿದ್ದಾರೆ.
ಕಳೆದ ಪಂದ್ಯ: ಆರ್‌ಸಿಬಿ ಎದುರು 67 ರನ್‌ಗಳಿಂದ ಸೋಲು
ಕೆಕೆಆರ್: ಪ್ಯಾಟ್ ಕಮ್ಮಿನ್ಸ್ ಅವರ ಜಾಗವನ್ನು ಉಮೇಶ್ ಯಾದವ್ ಅಥವಾ ಶಿವಂ ಮಾವಿ ತುಂಬಬಹುದು.
ಕಳೆದ ಪಂದ್ಯ: ಮುಂಬೈ ವಿರುದ್ಧ 52 ರನ್ ಜಯ.
*100: ಶ್ರೇಯಸ್ ಅಯ್ಯರ್‌ಗೆ ಇದು 100ನೇ ಐಪಿಎಲ್ ಪಂದ್ಯವಾಗಿರಲಿದೆ.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಮುಖಾಮುಖಿ: 22, ಕೆಕೆಆರ್: 14, ಸನ್‌ರೈಸರ್ಸ್: 8
ಮೊದಲ ಮುಖಾಮುಖಿ: ಸನ್‌ರೈಸರ್ಸ್ ತಂಡಕ್ಕೆ 7 ವಿಕೆಟ್ ಜಯ.