

ಮುಂಬೈ: ನಿರೀಕ್ಷೆಗೂ ಮೀರಿ ಭರ್ಜರಿ ಆರಂಭ ಕಂಡಿರುವ ಕನ್ನಡಿಗ ಮಯಾಂಕ್ ಅಗರ್ವಾಲ್ ಸಾರಥ್ಯದ ಪಂಜಾಬ್ ಕಿಂಗ್ಸ್ ಹಾಗೂ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿರುವ ಕೋಲ್ಕತ ನೈಟ್‌ರೈಡರ್ಸ್ ತಂಡಗಳು ಐಪಿಎಲ್-15ರ ಹಣಾಹಣಿಯಲ್ಲಿ ಶುಕ್ರವಾರ ಎದುರಾಗಲಿವೆ. ಬ್ಯಾಟರ್‌ಗಳ ಪಾಲಿಗೆ ಸ್ವರ್ಗದಂತಿರುವ ವಾಂಖೆಡೆ ಸ್ಟೇಡಿಯಂನಲ್ಲಿ ಮತ್ತೊಮ್ಮೆ ಬ್ಯಾಟರ್‌ಗಳು ಅಬ್ಬರಿಸಲು ಸಜ್ಜಾಗಿದ್ದಾರೆ. ಮರೀನ್ ಡ್ರೈವ್ ತಟದಲ್ಲಿರುವ ಮೈದಾನದಲ್ಲಿ ಇಬ್ಬನಿ ಸಮಸ್ಯೆ ಮುಂದುವರಿಯಲಿದ್ದು, ಟಾಸ್ ಗೆದ್ದವರೇ ಬಾಸ್ ಆಗುವುದು ನಿಶ್ಚಿತವಾಗಲಿದೆ. ಕನ್ನಡಿಗ ಅನಿಲ್ ಕುಂಬ್ಳೆ ಮಾರ್ಗದರ್ಶನದ ಪಂಜಾಬ್ ತಂಡ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಎದುರು ಭರ್ಜರಿ ಗೆಲುವು ದಾಖಲಿಸಿತ್ತು. ಮತ್ತೊಂದೆಡೆ, ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸಿಎಸ್‌ಕೆ ತಂಡವನ್ನು ಮಣಿಸಿದ್ದ ಕೆಕೆಆರ್, ಬುಧವಾರ ಆರ್‌ಸಿಬಿ ಎದುರು ಮುಗ್ಗರಿಸಿತ್ತು. ಇದೀಗ ಶ್ರೇಯಸ್ ಅಯ್ಯರ್ ಪಡೆ ಗೆಲುವಿನ ಹಳಿಗೇರುವ ತವಕದಲ್ಲಿದೆ.
ಟೀಮ್ ನ್ಯೂಸ್: ಪಂಜಾಬ್ ಕಿಂಗ್ಸ್: ಕಗಿಸೊ ರಬಾಡ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ. ಕಳೆದ ಪಂದ್ಯದಲ್ಲಿ ಕೇವಲ 3 ವಿದೇಶಿ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡಲಾಗಿತ್ತು. ರಬಾಡ ಆಗಮನದಿಂದಾಗಿ ಸಂದೀಪ್ ಶರ್ಮ ಹೊರಗುಳಿಯಲಿದ್ದಾರೆ.
ಕೋಲ್ಕತ ನೈಟ್‌ರೈಡರ್ಸ್: ವಿದೇಶಿ ಆಟಗಾರರಾದ ಪ್ಯಾಟ್ ಕಮ್ಮಿನ್ಸ್, ಆರನ್ ಫಿಂಚ್ ಈ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ. ಆರ್‌ಸಿಬಿ ಎದುರು ಬೌಂಡರಿ ಗೆರೆ ಬಳಿ ಬಿದ್ದು ಭುಜದ ನೋವು ಅನುಭವಿಸಿದ ಆಲ್ರೌಂಡರ್ ಆಂಡ್ರೆ ರಸೆಲ್ ಕೇವಲ 3 ಓವರ್‌ಗಳನ್ನಷ್ಟೇ ಎಸೆದಿದ್ದರು. ಒಂದು ವೇಳೆ ರಸೆಲ್ ಅಲಭ್ಯರಾದರೆ ಮೊಹಮದ್ ನಬಿ ಅಥವಾ ಚಮಿಕ ಕರುಣರತ್ನೆ ಹನ್ನೊಂದರ ಬಳಗಕ್ಕೆ ಸೇರ್ಪಡೆಯಾಗಲಿದ್ದಾರೆ.
ಮುಖಾಮುಖಿ: 29
ಕೆಕೆಆರ್: 19
ಪಂಜಾಬ್: 10
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ : ಸ್ಟಾರ್ ಸ್ಪೋರ್ಟ್ಸ್