

ಮುಂಬೈ: ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ ನೈಟ್‌ರೈಡರ್ಸ್ ತಂಡಗಳು ಐಪಿಎಲ್ 15ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಶನಿವಾರ ಎದುರಾಗಲಿವೆ. ಎಂಎಸ್ ಧೋನಿ ಅವರಿಂದ ಸಿಎಸ್‌ಕೆ ತಂಡದ ನಾಯಕತ್ವ ಚುಕ್ಕಾಣಿ ಪಡೆದುಕೊಂಡಿರುವ ರವೀಂದ್ರ ಜಡೇಜಾ ತಂಡವನ್ನು ಗೆಲುವಿನ ಲಯದಲ್ಲಿ ಮುನ್ನಡೆಸಲು ಸಜ್ಜಾಗಿದ್ದರೆ, ಕೆಕೆಆರ್ ತಂಡ ಕಳೆದ ಆವೃತ್ತಿಯ ಫೈನಲ್‌ನಲ್ಲಿ ಅನುಭವಿಸಿದ ಸೋಲಿಗೆ ಹೊಸ ನಾಯಕ ಶ್ರೇಯಸ್ ಅಯ್ಯರ್ ಸಾರಥ್ಯದಲ್ಲಿ ಸೇಡು ತೀರಿಸಿಕೊಳ್ಳುವ ಮೂಲಕ ಲೀಗ್‌ನಲ್ಲಿ ಶುಭಾರಂಭ ಕಾಣುವ ನಿರೀಕ್ಷೆಯಲ್ಲಿದೆ. ಕಳೆದ ಆವೃತ್ತಿಯಲ್ಲಿ ಉಭಯ ತಂಡಗಳ 3 ಮುಖಾಮುಖಿಯಲ್ಲೂ ಸಿಎಸ್‌ಕೆ ತಂಡವೇ ಗೆಲುವು ದಾಖಲಿಸಿತ್ತು. ಉಭಯ ತಂಡಗಳಿಗೂ ಮೊದಲ ಪಂದ್ಯಕ್ಕೆ ಪ್ರಮುಖ ವಿದೇಶಿ ಆಟಗಾರರು ಅಲಭ್ಯರಾಗುತ್ತಿದ್ದಾರೆ. 2 ದಿನಗಳ ಹಿಂದಷ್ಟೇ ಸಿಎಸ್‌ಕೆ ತಂಡದ ಹೊಸ ನಾಯಕನಾಗಿ ನೇಮಕಗೊಂಡಿರುವ ಆಲ್ರೌಂಡರ್ ರವೀಂದ್ರ ಜಡೇಜಾ ನಾಯಕತ್ವದ ಸವಾಲಿಗೆ ತರಾತುರಿಯಲ್ಲಿ ಸಜ್ಜಾಗಿದ್ದಾರೆ.
* ಸಿಎಸ್‌ಕೆಗೆ ಅನುಭವಿಗಳೇ ಆಸರೆ
ಡ್ಯಾಡ್ ಆರ್ಮಿ ಎನಿಸಿಕೊಂಡಿರುವ ಸಿಎಸ್‌ಕೆ ತಂಡ ಈ ಬಾರಿಯೂ ಅನುಭವಿಗಳಿಂದಲೇ ಕೂಡಿದೆ. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಋತುರಾಜ್ ಗಾಯಕ್ವಾಡ್ ಕಣಕ್ಕಿಳಿಯಲು ಸಿದ್ಧವಾಗಿದ್ದಾರೆ. ಇವರೊಂದಿಗೆ ಕಿವೀಸ್‌ನ ಡೆವೊನ್ ಕಾನ್‌ವೇ ಇನಿಂಗ್ಸ್ ಆಂಭಿಸಲಿದ್ದಾರೆ. ಮೊಯಿನ್ ಅಲಿ ಅಲಭ್ಯತೆಯಿಂದಾಗಿ ಕನ್ನಡಿಗ ರಾಬಿನ್ ಉತ್ತಪ್ಪ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಬಳಿಕ ಅಂಬಟಿ ರಾಯುಡು, ರವೀಂದ್ರ ಜಡೇಜಾ, ಶಿವಂ ದುಬೆ, ಡ್ವೇನ್ ಬ್ರಾವೊ, ಮಾಜಿ ನಾಯಕ ಎಂಎಸ್ ಧೋನಿ ಒಳಗೊಂಡ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ. ಆಡಂ ಮಿಲ್ನೆ ವೇಗದ ಬೌಲಿಂಗ್ ವಿಭಾಗದ ಸಾರಥ್ಯ ವಹಿಸಲಿದ್ದಾರೆ. ಕ್ರೀಸ್ ಜೋರ್ಡಾನ್ ಹಾಗೂ ಆಲ್ರೌಂಡರ್ ಡ್ವೇನ್ ಬ್ರಾವೊ ಮಿಲ್ನೆಗೆ ಸಾಥ್ ನೀಡಲಿದ್ದಾರೆ.
* ಶ್ರೇಯಸ್‌ಗೆ ನಾಯಕತ್ವದ ಸವಾಲು
ಭವಿಷ್ಯದ ಟೀಮ್ ಇಂಡಿಯಾ ನಾಯಕತ್ವದ ರೇಸ್‌ನಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಮತ್ತೊಂದು ಹೆಸರು ಶ್ರೇಯಸ್ ಅಯ್ಯರ್. ನಾಯಕತ್ವ ಗುಣಗಳನ್ನು ಅನಾವರಣಗೊಳಿಸುವ ದೃಷ್ಟಿಯಿಂದ ಶ್ರೇಯಸ್ ಪಾಲಿಗೆ ಈ ಲೀಗ್ ವೈಯಕ್ತಿಕವಾಗಿ ಸವಾಲಾಗಿದೆ. ಬಹುತೇಕ ಹೊಸ ತಂಡವಾಗಿ ಕಣಕ್ಕಿಳಿಯಲಿದೆ. ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿರುವ ಅಜಿಂಕ್ಯ ರಹಾನೆಗೆ ಸ್ಫೋಟಿಸಲು ಉತ್ತಮ ಅವಕಾಶ ಲಭಿಸಿದೆ. ಕಳೆದ ಆವೃತ್ತಿಯ 2ನೇ ಚರಣದಲ್ಲಿ ಸ್ಫೋಟಿಸಿದ ಪರಿಣಾಮ ರಾಷ್ಟ್ರೀಯ ತಂಡದಲ್ಲೂ ಸ್ಥಾನ ಗಿಟ್ಟಿಸಿಕೊಂಡ ವೆಂಕಟೇಶ್ ಅಯ್ಯರ್ ಹಾಗೂ ರಹಾನೆ ಇನಿಂಗ್ಸ್ ಆರಂಭಿಸುವ ನಿರೀಕ್ಷೆಯಿದೆ. ಶ್ರೇಯಸ್ ಅಯ್ಯರ್, ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್, ಆಂಡ್ರೆ ರಸೆಲ್ ತಂಡದ ಭರವಸೆಯ ಬ್ಯಾಟರ್‌ಗಳಾಗದ್ದಾರೆ. ಪ್ಯಾಟ್ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ಯುವ ಬೌಲರ್ ಶಿವಂ ಮಾವಿ ಹಾಗೂ ಉಮೇಶ್ ಯಾದವ್ ಹೆಚ್ಚಿನ ಜವಾಬ್ದಾರಿ ವಹಿಸಬೇಕಾಗಿದೆ.
ಟೀಮ್ ನ್ಯೂಸ್:
ಸಿಎಸ್‌ಕೆ: ಆಲ್ರೌಂಡರ್ ಮೊಯಿನ್ ಅಲಿ ಅನುಪಸ್ಥಿತಿಯಲ್ಲಿ ಡೆವೊನ್ ಕಾನ್‌ವೇ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವರು. ಮುಂಬೈ ಬೌಲರ್‌ಗಳಾದ ತುಷಾರ್ ದೇಶಪಾಂಡೆ ಅಥವಾ ಪ್ರಶಾಂತ್ ಸೋಲಂಕಿ ನಡುವೆ ಪೈಪೋಟಿ ಏರ್ಪಟ್ಟಿದೆ. ಕಳೆದ ಆವೃತ್ತಿಯ ಫೈನಲ್‌ನಲ್ಲಿ ಆಡಿದ್ದ ಋತುರಾಜ್ ಗಾಯಕ್ವಾಡ್, ರಾಬಿನ್, ರಾಯುಡು, ಜಡೇಜಾ, ಧೋನಿ, ಬ್ರಾವೊ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಂಭಾವ್ಯ ತಂಡ: ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್‌ವೇ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ರವೀಂದ್ರ ಜಡೇಜಾ (ನಾಯಕ), ಎಂಎಸ್ ಧೋನಿ (ವಿಕೀ), ಶಿವಂ ದುಬೆ, ಡ್ವೇನ್ ಬ್ರಾವೊ, ತುಷಾರ್ ದೇಶಪಾಂಡೆ/ಪ್ರಶಾಂತ್ ಸೋಲಂಕಿ, ಕ್ರಿಸ್ ಜೋರ್ಡಾನ್, ಆಡಂ ಮಿಲ್ನೆ.
ಕೆಕೆಆರ್: ಪ್ಯಾಟ್ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ಟಿಮ್ ಸೌಥಿ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಒಂದು ವೇಳೆ ಆಲ್ರೌಂಡರ್‌ಗೆ ಮಣೆ ಹಾಕಿದರೆ ಮೊಹಮದ್ ನಬಿ ಕಣಕ್ಕಿಳಿಯಬಹುದು. ಉಮೇಶ್ ಯಾದವ್ ಸ್ಥಾನ ಪಡೆಯುವ ಸಾಧ್ಯತೆಗಳಿದ್ದು, ವರುಣ್ ಚಕ್ರವರ್ತಿ ತಂಡದ ಟ್ರಂಪ್ ಕಾರ್ಡ್ ಆಗಲಿದ್ದಾರೆ.
ಸಂಭಾವ್ಯ ತಂಡ: ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ, ನಿತೀಶ್ ರಾಣಾ, ಶ್ರೇಯಸ್ ಅಯ್ಯರ್ (ನಾಯಕ), ಸ್ಯಾಮ್ ಬಿಲ್ಲಿಂಗ್ಸ್ (ವಿಕೀ), ಆಂಡ್ರೆ ರಸೆಲ್, ಮೊಹಮದ್ ನಬಿ/ಟಿಮ್ ಸೌಥಿ, ಸುನೀಲ್ ನಾರಾಯಣ್, ಶಿವಂ ಮಾವಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ.
*ಕೆಕೆಆರ್‌ಗೆ ವಾಂಖೆಡೆ ಕಗ್ಗಂಟು
ಕೆಕೆಆರ್ ತಂಡ 2012ರ ಮೇ ತಿಂಗಳಲ್ಲಿ ಕಡೇ ಬಾರಿಗೆ ವಾಂಖೆಡೆ ಮೈದಾನದಲ್ಲಿ ಗೆಲುವು ದಾಖಲಿಸಿದೆ. ಅಲ್ಲಿಂದ ಈಚೆಗೆ ಆಡಿದ 8 ಪಂದ್ಯಗಳಲ್ಲೂ ಕೆಕೆಆರ್ ಸೋಲನುಭವಿಸಿದೆ. ಕಳೆದ ಆವೃತ್ತಿಯಲ್ಲಿ ಸಿಎಸ್‌ಕೆ ಎದುರು ಆಡಿದ ಪಂದ್ಯದಲ್ಲಿ ಕೆಕೆಆರ್ 18 ರನ್‌ಗಳಿಂದ ಸೋತಿತ್ತು. ವಾಂಖೆಡೆ ಸ್ಟೇಡಿಯಂನಲ್ಲಿ ಸತತ ಸೋಲಿನ ಸುಳಿಯಲ್ಲಿ ಸಿಲುಕಿರುವ ಕೆಕೆಆರ್, ಸ್ಥಳೀಯ ಆಟಗಾರ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಗೆಲುವಿನ ಹಳಿಗೇರುವ ವಿಶ್ವಾಸದಲ್ಲಿದೆ.
ಮುಖಾಮುಖಿ: 26, ಸಿಎಸ್‌ಕೆ: 17, ಕೆಕೆಆರ್: 8, ರದ್ದು: 1
ಪಂದ್ಯ ಆರಂಭ: ರಾತ್ರಿ 7.30, ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್