

ಪುಣೆ: ಆರಂಭಿಕ ಋತುರಾಜ್ ಗಾಯಕ್ವಾಡ್ (99ರನ್, 57 ಎಸೆತ, 6 ಬೌಂಡರಿ, 6 ಸಿಕ್ಸರ್) ಶತಕವಂಚಿತ ಬ್ಯಾಟಿಂಗ್ ಹಾಗೂ ಡೆವೊನ್ ಕಾನ್‌ವೇ (85*ರನ್, 55 ಎಸೆತ, 8 ಬೌಂಡರಿ, 4 ಸಿಕ್ಸರ್) ನೀಡಿದ ಸಮರ್ಥ ಬೆಂಬಲ ಹಾಗೂ ಎಡಗೈ ವೇಗಿ ಮುಕೇಶ್ ಚೌಧರಿ (46ಕ್ಕೆ 4) ಮಾರಕ ದಾಳಿ ನೆರವಿನಿಂದ ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಐಪಿಎಲ್-15ರ ತನ್ನ ನಿರ್ಣಾಯಕ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 13 ಮಣಿಸಿತು. ಇದರಿಂದ 3ನೇ ಜಯ ದಾಖಲಿಸಿದ ಸಿಎಸ್‌ಕೆ ಪ್ಲೇಆಫ್ ರೇಸ್‌ನಲ್ಲಿ ಉಳಿಯಿತು. ಪ್ರಸಕ್ತ ಆವೃತ್ತಿಯ ಧೋನಿ ಮುನ್ನಡೆಸಿದ ಮೊದಲ ಪಂದ್ಯದಲ್ಲೇ ಸಿಎಸ್‌ಕೆ ಗೆಲುವಿನ ನಗೆ ಬೀರಿತು.
ಎಂಸಿಎ ಸ್ಟೇಡಿಯಂ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ, ಋತುರಾಜ್-ಕಾನ್‌ವೇ ಜೋಡಿ ಮೊದಲ ವಿಕೆಟ್‌ಗೆ 182 ರನ್ ಪೇರಿಸಿದ ನೆರವಿನಿಂದ 2 ವಿಕೆಟ್‌ಗೆ 202 ರನ್ ಕಲೆಹಾಕಿತು. ಪ್ರತಿಯಾಗಿ ಮುಕೇಶ್ ಚೌಧರಿ ದಾಳಿಗೆ ನಲುಗಿದ ಸನ್‌ರೈಸರ್ಸ್ ಬಳಿಕ ನಿಕೋಲಸ್ ಪೂರನ್ (64*ರನ್, 33 ಎಸೆತ, 3 ಬೌಂಡರಿ, 6 ಸಿಕ್ಸರ್) ಪ್ರತಿಹೋರಾಟದ ನಡುವೆಯೂ 6 ವಿಕೆಟ್‌ಗೆ 189 ರನ್‌ಗಳಿಸಲಷ್ಟೇ ಶಕ್ತವಾಯಿತು.