

ನವದೆಹಲಿ: ಚೀನಾ ಸೇರಿದಂತೆ ವಿಶ್ವದೆಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿರುವ ಮಾರಕ ಕರೊನಾ ವೈರಸ್, ಪ್ರತಿಷ್ಠಿತ ಕ್ರೀಡಾಕೂಟಗಳಿಗೆ ಅಡ್ಡಿಯುಂಟು ಮಾಡಿದೆ. ಈವರೆಗೂ ಚೀನಾದಲ್ಲಿ ಮಾತ್ರವೇ ವ್ಯಾಪಕವಾಗಿ ಹಬ್ಬಿದ್ದ ಕರೊನಾ ಸೋಂಕು, ಈಗ ದಕ್ಷಿಣ ಕೊರಿಯಾ, ಜಪಾನ್ ಹಾಗೂ ಇಟಲಿಗೂ ಹಬ್ಬಿದ್ದು ಕೆಲವು ಸಾವುಗಳೂ ವರದಿಯಾಗಿವೆ. ಇದರಿಂದಾಗಿ ಎಚ್ಚೆತ್ತಿರುವ ಕ್ರೀಡಾವಲಯ ಬಹುಮುಖ್ಯ ಟೂರ್ನಿಗಳನ್ನು ರದ್ದು ಮಾಡುವ ನಿರ್ಧಾರ ಮಾಡಿದೆ.
ಅದರೊಂದಿಗೆ ಮುಂಬರುವ 2020 ಯುರೋ ಕಪ್ ಫುಟ್ಬಾಲ್, ಟೋಕಿಯೋ ಒಲಿಂಪಿಕ್ಸ್ನಂಥ ಪ್ರತಿಷ್ಠಿತ ಕ್ರೀಡಾಕೂಟಗಳೂ ರದ್ದುಗೊಳ್ಳುವ ಭೀತಿಯಲ್ಲಿವೆ.
ಬ್ಯಾಡ್ಮಿಂಟನ್ಗೆ ತಟ್ಟಿದ ಬಿಸಿ: ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಸಂಪಾದಿಸುವ ನಿಟ್ಟಿನಲ್ಲಿ ಪ್ರಮುಖ ಟೂರ್ನಿ ಗಳಾಗಿದ್ದ ಬ್ಯಾಡ್ಮಿಂಟನ್ನ ಜರ್ಮನ್ ಓಪನ್ ಹಾಗೂ ಪೋಲಿಶ್ ಓಪನ್ ಟೂರ್ನಿ ಮಾರಕ ಕರೊನಾ ವೈರಸ್ ಕಾರಣದಿಂದಾಗಿ ಮುಂದೂಡಿಕೆಯಾಗಿದೆ. ಮಾರ್ಚ್ 3ರಿಂದ 8ರವರೆಗೆ ಜರ್ಮನ್ ಓಪನ್ ಟೂರ್ನಿ ನಡೆಯಬೇಕಿತ್ತು. ಆದರೆ, ಈ ಟೂರ್ನಿ ನಡೆಯುತ್ತಿಲ್ಲ ಎಂದು ವಿಶ್ವ ಬ್ಯಾಡ್ಮಿಂಟನ್ ಸಂಸ್ಥೆ ಖಚಿತಪಡಿಸಿದ್ದು, ಮುಂದೂಡಿಕೆ ಅಥವಾ ಟೂರ್ನಿ ರದ್ದು ಆಗಿದೆಯೇ ಎನ್ನುವ ಬಗ್ಗೆ ಮಾಹಿತಿ ನೀಡಿಲ್ಲ. ಇನ್ನು ಪೊಲೀಶ್ ಓಪನ್ ಟೂರ್ನಿ ಮಾರ್ಚ್ 26 ರಿಂದ 29ರವರೆಗೆ ನಡೆಯಲಿದೆ. ಆದರೆ, ಈ ಟೂರ್ನಿ ಒಲಿಂಪಿಕ್ಸ್ನ ಅರ್ಹತಾ ಟೂರ್ನಿ ಆಗಿರುವುದಿಲ್ಲ. ಇನ್ನು ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಓಪನ್ ಟೂರ್ನಿ ಮಾರ್ಚ್ ತಿಂಗಳಿನಲ್ಲಿಯೇ ನಡೆಯಲಿದ್ದು, ಸದ್ಯದ ಮಟ್ಟಿಗೆ ಈ ಟೂರ್ನಿ ಎಂದಿನ ವೇಳಾಪಟ್ಟಿಯಲ್ಲಿಯೇ ನಡೆಯಲಿದೆ ಎಂದು ತಿಳಿಸಿದೆ.
ಒಲಿಂಪಿಕ್ಸ್ ನಡೆಯುವ ವಿಶ್ವಾಸದಲ್ಲಿ ಭಾರತ
ಕರೊನಾ ವೈರಸ್ನಿಂದಾಗಿ ಟೋಕಿಯೋ ಒಲಿಂಪಿಕ್ಸ್ ರದ್ದುಗೊಳ್ಳುವ ಭೀತಿ ವ್ಯಕ್ತವಾಗಿರುವ ನಡುವೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಒಲಿಂಪಿಕ್ಸ್ ಎಂದಿನ ವೇಳಾಪಟ್ಟಿಯಲ್ಲಿ ನಡೆಯುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಮೇ ತಿಂಗಳ ಒಳಗಾಗಿ ಕರೊನಾ ವೈರಸ್ಅನ್ನು ನಿಯಂತ್ರಣ ಮಾಡಲು ಸಾಧ್ಯವಾಗದೇ ಇದ್ದಲ್ಲಿ, ಒಲಿಂಪಿಕ್ಸ್ ರದ್ದಾಗುವ ಭೀತಿ ಇದೆ ಎಂದು ಐಒಸಿಯ ಹಿರಿಯ ಸದಸ್ಯ ಡಿಕ್ ಪೌಂಡ್ ಹೇಳಿದ್ದರು. ‘ವೈರಸ್ನ ಹಾವಳಿ ಚೀನಾದಲ್ಲಿ ವ್ಯಾಪಕವಾಗಿದೆ. ಟೋಕಿಯೋದಲ್ಲಿಲ್ಲ. ಎಲ್ಲ ಪರಿಸ್ಥಿತಿಯನ್ನು ನಾವು ದಿಟ್ಟವಾಗಿ ಎದುರಿಸಬೇಕಿದೆ. ಜುಲೈ 24ರಂದೇ ಟೋಕಿಯೋ ಒಲಿಂಪಿಕ್ಸ್ ಆರಂಭವಾಗುವ ವಿಶ್ವಾಸ ನನಗಿದೆ’ ಎಂದು ಹೇಳಿದ್ದಾರೆ.
ಪ್ರೇಕ್ಷಕರಿಗೆ ಫೇಸ್ವಾಸ್ಕ್, ಹ್ಯಾಂಡ್ವಾಷ್!
ವೈರಸ್ ಹಬ್ಬುವುದನ್ನು ತಡೆಯುವ ಸಲುವಾಗಿ ಥಾಯ್ಲೆಂಡ್ ಮೊಟೊ ಜಿಪಿ ನೋಡುವ ಪ್ರೇಕ್ಷಕರು ಹಾಗೂ ಪಾಲ್ಗೊಳ್ಳುವ ತಂಡಗಳ ಸದಸ್ಯರಿಗೆ ಫೇಸ್ವಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಜರ್ ವಿತರಿಸಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ. ಮಾ. 20ರಿಂದ 22ರವರೆಗೆ ರೇಸ್ ನಡೆಯಲಿದೆ. ಅದರೊಂದಿಗೆ ರೇಸ್ಟ್ರಾ್ಯಕ್ಗೆ ಪ್ರವೇಶಿಸುವ ಮಾರ್ಗದಲ್ಲಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗುತ್ತದೆ.
ಎಎಫ್ಸಿ ಲೀಗ್ ಮುಂದೂಡಿಕೆ
ಎಎಫ್ಸಿ ಏಷ್ಯನ್ ಚಾಂಪಿಯನ್ಸ್ ಲೀಗ್ನ ಆರು ಪಂದ್ಯಗಳನ್ನು ವೈರಸ್ನ ಕಾರಣದಿಂದಾಗಿ ಮುಂದೂಡಿಕೆ ಮಾಡಲಾಗಿದೆ ಎಂದು ಎಎಫ್ಸಿ ತಿಳಿಸಿದೆ. ಇದು ಇರಾನ್ನ ನಾಲ್ಕು ಕ್ಲಬ್ಗಳ ಮೇಲೆ ಪರಿಣಾಮ ಬೀರಿದೆ. ಮುಂದಿನ ತಿಂಗಳು ನಡೆಯಬೇಕಿರುವ ವಿಶ್ವಕಪ್ ಅರ್ಹತಾ ಪಂದ್ಯಗಳು, ಚೀನಾ, ದಕ್ಷಿಣ ಕೊರಿಯಾ, ವಿಯೆಟ್ನಾಂ ಹಾಗೂ ಆಸ್ಟ್ರೇಲಿಯಾ ಒಳಗೊಂಡ ಒಲಿಂಪಿಕ್ ಅರ್ಹತಾ ಪಂದ್ಯಗಳೂ ಮರುನಿಗದಿಯಾಗಿವೆ. ಚೀನಾದ ಫುಟ್ಬಾಲ್ ಕ್ಲಬ್ಗಳಲ್ಲಿದ್ದ ಪ್ರಮುಖ ವಿದೇಶಿ ಆಟಗಾರರು ಈಗಾಗಲೇ ಕೆಲ ಯುರೋಪ್ನ ತಂಡಗಳಿಗೆ ವರ್ಗಾವಣೆಯಾಗಿದ್ದಾರೆ.
ಆತಂಕದಲ್ಲಿ ಫಾಮುಲಾ 1
ಮಾರ್ಚ್ 15ರಿಂದ 2020ರ ಫಾಮುಲಾ ಒನ್ ವಿಶ್ವ ಚಾಂಪಿಯನ್ಷಿಪ್ ಆರಂಭವಾಗಲಿದೆ. ಈಗಾಗಲೇ ಕೆಲ ತಂಡಗಳು ಬಾರ್ಸಿಲೋನಾದಲ್ಲಿ ಟೆಸ್ಟಿಂಗ್ನಲ್ಲಿ ಭಾಗಿಯಾಗಿದ್ದು, ‘ಕರೊನಾ ವೈರಸ್ ಬಗ್ಗೆ ಗಮನ ನೀಡಿರುವುದು ನಿಜ. ಆದರೆ, ಸದ್ಯ ಆತಂಕ ಹೊಂದಿಲ್ಲ’ ಎಂದು ತಿಳಿಸಿದ್ದಾರೆ. ಮೆಲ್ಬೋರ್ನ್ನಲ್ಲಿ ವರ್ಷದ ಮೊದಲ ಎಫ್1 ನಡೆಯಲಿದ್ದರೆ, ಈಗಾಗಲೇ ಚೀನಾ ಗ್ರಾ್ಯನ್ ಪ್ರೀಯನ್ನು ವೇಳಾಪಟ್ಟಿಯಿಂದ ಕೈಬಿಡಲಾಗಿದೆ.
ಕರೊನಾ ಕಾಡಿದ ಪ್ರಮುಖ ಟೂರ್ನಿಗಳು