

ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್ಐ) ಹೊಸ ಆಡಳಿತ ಮಂಡಳಿ ಚುನಾಯಿತಗೊಂಡ ಮೂರೇ ದಿನಗಳಲ್ಲಿ ಕೇಂದ್ರ ಕ್ರೀಡಾ ಸಚಿವಾಲಯದಿಂದ ಅಮಾನತುಗೊಂಡಿರುವುದರಿಂದ ಅದರ ಆಡಳಿತವನ್ನು ನೋಡಿಕೊಳ್ಳಲು ಮೂವರು ಸದಸ್ಯರ ತಾತ್ಕಾಲಿಕ ಸಮಿತಿಯನ್ನು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಬುಧವಾರ ನೇಮಿಸಿದೆ.
ಭಾರತೀಯ ವುಶು ಸಂಸ್ಥೆಯ ಅಧ್ಯಕ್ಷ ಭೂಪಿಂದರ್ ಸಿಂಗ್ ಬಾಜ್ವಾ ಆ್ಯಡ್-ಹಾಕ್ ಸಮಿತಿಯ ಚೇರ್ಮನ್ ಆಗಿದ್ದರೆ, ಕರ್ನಾಟಕದ ಮಾಜಿ ಹಾಕಿ ಆಟಗಾರ ಎಂಎಂ ಸೋಮಯ್ಯ ಮತ್ತು ಮಾಜಿ ಷಟ್ಲರ್ ಮಂಜುಷಾ ಕನ್ವರ್ ಸಮಿತಿಯ ಇನ್ನಿಬ್ಬರು ಸದಸ್ಯರಾಗಿದ್ದಾರೆ. ಕ್ರೀಡಾ ಸಚಿವಾಲಯದ ಸೂಚನೆಯ ಮೇರೆಗೆ ಐಒಎ, ಡಬ್ಲ್ಯುಎ್ಐ ದೈನಂದಿನ ವ್ಯವಹಾರಗಳನ್ನು ನೋಡಿಕೊಳ್ಳಲು ತಾತ್ಕಾಲಿಕ ಸಮಿತಿಯನ್ನು ರಚಿಸಿದೆ.
1980ರ ಮಾಸ್ಕೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದ ಆಟಗಾರರಾಗಿರುವ ಸೋಮಯ್ಯ, 1988ರ ಸಿಯೋಲ್ ಒಲಿಂಪಿಕ್ಸ್ನಲ್ಲಿ ತಂಡದ ನಾಯಕರೂ ಆಗಿದ್ದರು. ಒಟ್ಟು 3 ಒಲಿಂಪಿಕ್ಸ್ ಆಡಿರುವ 64 ವರ್ಷದ ಸೋಮಯ್ಯ, ಅರ್ಜುನ ಪ್ರಶಸ್ತಿ ಪುರಸತರೂ ಆಗಿದ್ದಾರೆ.