

Inzamam-ul-Haq: ಪ್ರಸಕ್ತ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆತಿಥೇಯರಾಗಿ ಅಖಾಡಕ್ಕಿಳಿದ ಪಾಕಿಸ್ತಾನ ತಂಡ, ಮೊದಲೆರೆಡು ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸುವ ಮೂಲಕ ಚಾಂಪಿಯನ್ಸ್ ಕನಸನ್ನು ನುಚ್ಚುನೂರು ಮಾಡಿಕೊಂಡಿತು. ಇದೇ ಪಾಕ್ ತಂಡಕ್ಕೆ ಮುಳುವಾಗಿ ಪರಿಣಮಿಸಿತು. ತಮ್ಮದೇ ದಿಗ್ಗಜ ಕ್ರಿಕೆಟಿಗರು ಸೇರಿದಂತೆ ಮಾಜಿ ಆಟಗಾರರು ಮೊಹಮ್ಮದ್ ರಿಜ್ವಾನ್ ತಂಡವನ್ನು ವ್ಯಾಪಕವಾಗಿ ಟೀಕಿಸಿದರು. ಇನ್ನು ಟೀಮ್ ಇಂಡಿಯಾದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ಪಾಕ್ ವೈಫಲ್ಯತೆಯನ್ನು ಎತ್ತಿಹಿಡಿದು ಮಾತನಾಡಿದ್ದರು. ಅದೇ ಈಗ ಪಾಕ್ ಕ್ರಿಕೆಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸಿದ ಪಾಕಿಸ್ತಾನ, ಭಾರತ ವಿರುದ್ಧ ತನ್ನ ಎರಡನೇ ಪಂದ್ಯವನ್ನೂ ಸೋತು ತವರಿನತ್ತ ಮುಖಮಾಡಿತು. ಇದನ್ನೇ ಟೀಕಿಸಿದ ಸುನಿಲ್ ಗವಾಸ್ಕರ್, "ಪಾಕ್ ತಂಡ ಬಲಿಷ್ಠವಾಗಿಲ್ಲ. ಭಾರತದ ಬಿ ತಂಡವೇ ಪಾಕಿಸ್ತಾನಕ್ಕೆ ಸವಾಲು ಹಾಕಬಲ್ಲದು" ಎಂದು ಹೇಳಿಕೆ ನೀಡಿದ್ದರು. ಗವಾಸ್ಕರ್ ಮಾತಿಗೆ ಕೆರಳಿದ ಇಂಜಮಾಮ್ ಉಲ್-ಹಕ್, ಆಡುವ ಮಾತಿನ ಮೇಲೆ ನಿಗಾ ಇರಲಿ ಎಂದು ಸುನಿಲ್ ಗವಾಸ್ಕರ್ ವಿರುದ್ಧ ಕಿಡಿಕಾರಿದ್ದಾರೆ.
ಪಾಕಿಸ್ತಾನಿ ಕಾರ್ಯಕ್ರಮವೊಂದರಲ್ಲಿ ಈ ಕುರಿತಾಗಿ ಮಾತನಾಡಿದ ಇಂಜಮಾಮ್, "ಸುನಿಲ್ ಗವಾಸ್ಕರ್ ನಾಲಿಗೆ ಹರಿಬಿಡುವ ಮುನ್ನ ಎಚ್ಚರ ವಹಿಸಬೇಕು. ನಿಮ್ಮ ತಂಡ ಗೆದ್ದಿದೆ ಖುಷಿ ನಿಜ. ಹಾಗಂತ ಇನ್ನೊಂದು ತಂಡದ ಬಗ್ಗೆ ಚರ್ಚಿಸುವಾಗ ಗೌರವ ಉಳಿಸಿಕೊಳ್ಳಬೇಕು. ಗವಾಸ್ಕರ್ ಸಾಹೇಬರು ಅಂಕಿಅಂಶಗಳನ್ನು ನೋಡಬೇಕು. ಅವರು ಹಿರಿಯರು. ನಾವು ಗೌರವಿಸುವ ವ್ಯಕ್ತಿ. ಇನ್ನೊಂದು ದೇಶದ ಕುರಿತಂತೆ ಮಾತನಾಡುವಾಗ ಎಚ್ಚರದಿಂದ ಮಾತನಾಡಬೇಕು. ನಿಮ್ಮ ತಂಡ ಉತ್ತಮ ಪ್ರದರ್ಶನ ನೀಡಿದೆ. ಅವರನ್ನು ಹೊಗಳಲು ನಿಮಗೆ ಎಲ್ಲ ಹಕ್ಕು ಇದೆ. ಆದಾಗ್ಯೂ, ಮತ್ತೊಂದು ತಂಡದ ಬಗ್ಗೆ ಸುಖಾಸುಮ್ಮನೆ ಹೇಳಿಕೆಗಳನ್ನು ನೀಡುವುದು ಸರಿಯಲ್ಲ" ಎಂದಿದ್ದಾರೆ.
ಇತ್ತೀಚೆಗಷ್ಟೇ ವಿವಾದಾತ್ಮಕ ಹೇಳಿಕೆ ನೀಡಿದ್ದ ಇಂಜಮಾಮ್, ವಿಶ್ವದ ಎಲ್ಲ ಅಗ್ರ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆಡುತ್ತಾರೆ. ಹಲವು ಬಾರಿ, ವಿದೇಶಿ ಆಟಗಾರರು ರಾಷ್ಟ್ರೀಯ ಪಂದ್ಯಗಳಿಗಿಂತ ಐಪಿಎಲ್ ಪಂದ್ಯಗಳನ್ನು ಬಯಸುತ್ತಾರೆ. ಆದರೆ, ಭಾರತೀಯ ಆಟಗಾರರು ಬೇರೆ ಯಾವುದೇ ಲೀಗ್‌ನಲ್ಲಿ ಆಡುವುದಿಲ್ಲ. ಎಲ್ಲ ಕ್ರಿಕೆಟ್ ಮಂಡಳಿಗಳು ಕೂಡ ಇದನ್ನೇ ಪಾಲಿಸಬೇಕು. ತಮ್ಮ ತಂಡಗಳ ಆಟಗಾರರು ಐಪಿಎಲ್‌ನಲ್ಲಿ ಆಡುವುದನ್ನು ತಡೆಯಬೇಕು ಮತ್ತು ಐಪಿಎಲ್ ಅನ್ನು ಬಹಿಷ್ಕರಿಸಬೇಕು ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಇಂಜಮಾಮ್-ಉಲ್-ಹಕ್ ಆಗ್ರಹಿಸಿದ್ದರು. ಈ ಹೇಳಿಕೆಗೆ ಭಾರೀ ವಿರೋಧಗಳು ವ್ಯಕ್ತವಾಯಿತು,(ಏಜೆನ್ಸೀಸ್).