ಕೊನೆಗೂ ಶುರುವಾಯ್ತು ಅಂತಾರಾಷ್ಟ್ರೀಯ ಕ್ರಿಕೆಟ್

test
Published on

ಸೌಥಾಂಪ್ಟನ್: ಕರೊನಾ ಹಾವಳಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಾರದಿರುವ ನಡುವೆ ಕೊನೆಗೂ 117 ದಿನಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಪುನರಾರಂಭಗೊಂಡಿದೆ. ಆತಿಥೇಯ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಬುಧವಾರದ ಮೊದಲ ದಿನದಾಟದಲ್ಲಿ ಭೋಜನ ವಿರಾಮದವರೆಗೆ ಮಳೆ ಅಡಚಣೆ ತಂದಿತು. ನಂತರ ಟಾಸ್ ನಡೆದಿದ್ದು, ಇಂಗ್ಲೆಂಡ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ. ಆದರೆ 3 ಓವರ್​ ಆಟ ನಡೆಯುವಷ್ಟರಲ್ಲಿ ಮಂದಬೆಳಕಿನಿಂದಾಗಿ ಮತ್ತೆ ಆಟ ಸ್ಥಗಿತಗೊಂಡಿತು. ಮಳೆ-ಮಂದ ಬೆಳಕಿನ ಅಡಚಣೆಯಿಂದ ಮೊದಲ ದಿನದಾಟದಲ್ಲಿ 17.4 ಓವರ್​ಗಳ ಆಟವಷ್ಟೇ ನಡೆದಿದ್ದು, ಇಂಗ್ಲೆಂಡ್​ 1 ವಿಕೆಟ್​ಗೆ 35 ರನ್​ ಗಳಿಸಿದೆ.

ಈ ಪಂದ್ಯದ ಮೂಲಕ 117 ದಿನಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಶುರುವಾಗಿದೆ. ಮಾರ್ಚ್ 13ರಂದು ಸಿಡ್ನಿಯಲ್ಲಿ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ನಡುವೆ ನಡೆದ ಏಕದಿನ ಪಂದ್ಯ ಕೊನೆಯ ಅಂತಾರಾಷ್ಟ್ರೀಯ ಕಾದಾಟ. ಇನ್ನು 128 ದಿನಗಳ ಬಳಿಕ ಟೆಸ್ಟ್ ಕ್ರಿಕೆಟ್ ಶುರುವಾಗಿದೆ. ಮಾರ್ಚ್ 2ರಂದು ನ್ಯೂಜಿಲೆಂಡ್-ಭಾರತ ನಡುವಿನ ಅಂತಿಮ ಟೆಸ್ಟ್ ಪಂದ್ಯ ಮುಕ್ತಾಯ ಕಂಡ ಬಳಿಕ ಯಾವುದೇ ಟೆಸ್ಟ್ ನಡೆದಿರಲಿಲ್ಲ. ಇನ್ನು 114 ದಿನಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯ ಆರಂಭಗೊಂಡಿದೆ. ಮಾರ್ಚ್ 16ರಂದು ಶ್ರೀಲಂಕಾದಲ್ಲಿ 2 ಪ್ರಥಮ ದರ್ಜೆ ಪಂದ್ಯಗಳು ಕೊನೆಯದಾಗಿ ನಡೆದಿತ್ತು.

ವೇಗಿ ಕೇಮಾರ್ ರೋಚ್ ಎಸೆದ ಪಂದ್ಯದ ಮೊದಲ ಎಸೆತವನ್ನು ಆರಂಭಿಕ ರೋರಿ ಬರ್ನ್ಸ್ ಎದುರಿಸಿದರು. ಬಳಿಕ ಇಂಗ್ಲೆಂಡ್ ಖಾತೆ ತೆರಯುವ ಮುನ್ನವೇ ಡೊಮಿನಿಕ್ ಸಿಬ್ಲೆ ಬೌಲ್ಡ್ ಆಗಿ ಗ್ಯಾಬ್ರಿಯೆಲ್‌ಗೆ ವಿಕೆಟ್ ಒಪ್ಪಿಸಿದರು. ಆಲ್ರೌಂಡರ್ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡದ 81ನೇ ಟೆಸ್ಟ್ ನಾಯಕರೆನಿಸಿದ್ದಾರೆ. ಕಾಯಂ ನಾಯಕ ಜೋ ರೂಟ್ 2ನೇ ಮಗುವಿನ ನಿರೀಕ್ಷೆಯಲ್ಲಿ ಪಂದ್ಯದಿಂದ ಹೊರಗುಳಿದಿದ್ದಾರೆ. ಟಾಸ್ ವೇಳೆ ಸುರಕ್ಷತೆಯ ದೃಷ್ಟಿಯಿಂದ ಕ್ಯಾಮರಾಮನ್ ಇರಲಿಲ್ಲ. ಬದಲಾಗಿ ತಂತ್ರಜ್ಞಾನದ ಬಳಕೆಯ ಮೂಲಕ ಟಾಸ್ ಚಿತ್ರೀಕರಿಸಲಾಯಿತು.

ತಂಡಗಳು: ಇಂಗ್ಲೆಂಡ್: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲೆ, ಜೋಯಿ ಡೆನ್ಲಿ, ಜಾಕ್ ಕ್ರೌಲಿ, ಬೆನ್ ಸ್ಟೋಕ್ಸ್ (ನಾಯಕ), ಒಲಿ ಪೋಪ್, ಜೋಸ್ ಬಟ್ಲರ್ (ವಿ.ಕೀ), ಡೊಮಿನಿಕ್ ಬೆಸ್, ಜೋಫ್ರಾ ಆರ್ಚರ್, ಮಾರ್ಕ್ ವುಡ್, ಜೇಮ್ಸ್ ಆಂಡರ್‌ಸನ್.

ವೆಸ್ಟ್ ಇಂಡೀಸ್: ಜಾನ್ ಕ್ಯಾಂಪ್‌ಬೆಲ್, ಕ್ರೇಗ್ ಬ್ರಾಥ್‌ವೇಟ್, ಶಮರಾಹ್ ಬ್ರೂಕ್ಸ್, ಶೈ ಹೋಪ್ಸ್, ರೋಸ್ಟನ್ ಚೇಸ್, ಜೆರ್ಮೈನ್ ಬ್ಲ್ಯಾಕ್‌ವುಡ್, ಶೇನ್ ಡೋವ್ರಿಚ್ (ವಿ.ಕೀ), ಜೇಸನ್ ಹೋಲ್ಡರ್ (ನಾಯಕ), ಅಲ್ಜಾರಿ ಜೋಸೆಫ್​, ಕೇಮಾರ್ ರೋಚ್, ಶನನ್ ಗ್ಯಾಬ್ರಿಯೆಲ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net