

ಶಿವಮೊಗ್ಗ: ದೇಶೀಯ ಕ್ರಿಕೆಟ್‌ನಲ್ಲಿ ಮಹಿಳಾ ಆಟಗಾರರನ್ನು ಪ್ರೋತ್ಸಾಹಿಸುವ ದಿಸೆಯಲ್ಲಿ ಬಿಸಿಸಿಐ ಎರಡು ವರ್ಷಗಳಿಂದ 15 ವರ್ಷದೊಳಗಿನ ಅಂತರ ರಾಜ್ಯ ಮಹಿಳಾ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುತ್ತಿದ್ದು, ಈ ಬಾರಿ ಶಿವಮೊಗ್ಗದಲ್ಲಿ ನ. 21ರಿಂದ 29ರವರೆಗೆ ಪಂದ್ಯಾವಳಿ ನಡೆಯಲಿದೆ ಎಂದು ಕೆಎಸ್‌ಸಿಎ ಶಿವಮೊಗ್ಗ ವಲಯ ಮಾಜಿ ಸಂಚಾಲಕ, ಎಂಎಲ್‌ಸಿ ಡಿ.ಎಸ್.ಅರುಣ್ ಹೇಳಿದರು.
ವಿವಿಧ ರಾಜ್ಯಗಳ 36 ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿವೆ. ತಲಾ ಆರು ತಂಡಗಳಂತೆ ಆರು ಗುಂಪುಗಳಾಗಿ ವಿಂಗಡಿಸಿದ್ದು, ‘ಎ’ ಗುಂಪಿನ ತಂಡಗಳ ಪಂದ್ಯಾವಳಿಗಳು ನವುಲೆ ಕೆಎಸ್‌ಸಿಎ ಕ್ರೀಡಾಂಗಣ 1 ಮತ್ತು 2 ಹಾಗೂ ಜೆಎನ್‌ಎನ್‌ಸಿಇ ಟರ್ಫ್ ಅಂಕಣಗಳಲ್ಲಿ ನಡೆಯಲಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಎ’ ಗುಂಪಿನಲ್ಲಿ ಬಿಹಾರ, ತಮಿಳುನಾಡು, ಹರಿಯಾಣ, ಕೇರಳ, ನಾಗಾಲ್ಯಾಂಡ್ ಮತ್ತು ಹೈದರಾಬಾದ್ ತಂಡಗಳಿವೆ. ಪ್ರತಿ ದಿನ ಮೂರು ಪಂದ್ಯಗಳಂತೆ ಒಟ್ಟಾರೆ 15 ಪಂದ್ಯಗಳು ನಡೆಯಲಿವೆ. ಬಿಳಿ ಬಣ್ಣದ ಬಾಲ್‌ನಲ್ಲಿ ಆಟಗಾರರು ಬಣ್ಣದ ಪೋಷಾಕಿನಲ್ಲಿ ಆಡುವರು. ಪ್ರತಿ ತಂಡವು 35 ಓವರ್ ಮಿತಿಯಲ್ಲಿ ಪಂದ್ಯಾವಳಿ ಆಡಲಿವೆ. ಪ್ರತಿದಿನ ಬೆಳಗ್ಗೆ 9ರಿಂದ ಪಂದ್ಯಗಳು ಪ್ರಾರಂಭವಾಗಲಿವೆ. ಕರ್ನಾಟಕ ತಂಡ ‘ಬಿ’ ಗುಂಪಿನಲ್ಲಿದ್ದು ಡೆಹ್ರಾಡೂನ್‌ನಲ್ಲಿ ದೆಹಲಿ, ಬರೋಡ, ಅಸ್ಸಾಂ, ಚಂಡೀಗಢ ಮತ್ತು ತ್ರಿಪುರ ರಾಜ್ಯಗಳ ನಡುವೆ ಸೆಣಸಾಟ ನಡೆಸಲಿದೆ ಎಂದರು.
ವಲಯ ಸಂಚಾಲಕ ಎಚ್.ಎಸ್.ಸದಾನಂದ ಮಾತನಾಡಿ, ಬಿಸಿಸಿಐನ ತೀರ್ಪುಗಾರರು ಮತ್ತು ವೀಕ್ಷಕರ ನೇತೃತ್ವದಲ್ಲಿ ಪಂದ್ಯಾವಳಿ ನಡೆಯಲಿದೆ. ಪಂದ್ಯಾವಳಿ ವೀಕ್ಷಿಸಲು ರಾಷ್ಟ್ರೀಯ ಮಹಿಳಾ ತಂಡದ ಆಯ್ಕೆದಾರರು ಕೂಡ ಆಗಮಿಸುವರು. ಶಿವಮೊಗ್ಗ ವಲಯ ಪಂದ್ಯಾವಳಿಗೆ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಿದರು.
21ರಂದು ಬೆಳಗ್ಗೆ 8.30ಕ್ಕೆ ನವುಲೆ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಮಹಾನಗರ ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್ ಮೊದಲ ಪಂದ್ಯಕ್ಕೆ ಚಾಲನೆ ನೀಡುವರು. ಎಂಎಲ್‌ಸಿ ಡಿ.ಎಸ್.ಅರುಣ್ ಉಪಸ್ಥಿತರಿರುವರು. ಅದೇ ದಿನ ಜೆಎನ್‌ಎನ್‌ಸಿಇ ಮೈದಾನದಲ್ಲಿ ನಡೆಯುವ ಪಂದ್ಯವನ್ನು ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಉದ್ಘಾಟಿಸುವರು. ಕಾಲೇಜಿನ ಪ್ರಾಚಾರ್ಯ ಡಾ. ವೈ.ವಿಜಯ ಕುಮಾರ್ ಉಪಸ್ಥಿತರಿರುವರು ಎಂದರು. ವಲಯ ಅಧ್ಯಕ್ಷ ಎನ್.ರಾಜೇಂದ್ರ ಕಾಮತ್, ಮಾಜಿ ವಲಯ ಸಂಚಾಲಕ ಡಿ.ಆರ್.ನಾಗರಾಜ್, ಮಾಧ್ಯಮ ಪ್ರಮುಖ ಗೋಪಾಲಕೃಷ್ಣ ಸುದ್ದಿಗೋಷ್ಠಿಯಲ್ಲಿದ್ದರು.