ವಿಂಬಲ್ಡನ್​ಗೆ ವಿಮೆ ಲಾಭ!: ಟೂರ್ನಿ ರದ್ದಾದರೂ ಸಾವಿರ ಕೋಟಿ ರೂ. ಗಳಿಕೆ

wibaldan april
Published on

ಲಂಡನ್: ಕರೊನಾ ಮಹಾಮಾರಿಯಿಂದಾಗಿ ಈ ವರ್ಷದ ವಿಂಬಲ್ಡನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ರದ್ದುಗೊಂಡಿದೆ. ಇದರ ನಡುವೆಯೂ ಟೂರ್ನಿಯ ಸಂಘಟಕರು ಬರೋಬ್ಬರಿ ಸಾವಿರ ಕೋಟಿ ರೂ. ಲಾಭ ಗಳಿಸಿದ್ದಾರೆ. ಇದಕ್ಕೆ ಕಾರಣವಾಗಿದ್ದು ವಿಮೆ! ಸಾಂಕ್ರಾಮಿಕ ಪಿಡುಗಿನ ಸಂಬಂಧ 17 ವರ್ಷಗಳ ಹಿಂದೆ ಮಾಡಿಸಿದ್ದ ವಿಮೆ ಪಾಲಿಸಿಯಿಂದಾಗಿ ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಕ್ಲಬ್ (ಎಇಎಲ್​ಟಿಸಿ) ಈಗ ನಿಟ್ಟುಸಿರು ಬಿಡುವಂತಾಗಿದೆ.

ಹಸಿರು ಹುಲ್ಲಿನ ಕೋರ್ಟ್​ನಲ್ಲಿ ನಡೆಯುವ ವಿಂಬಲ್ಡನ್ ಟೆನಿಸ್ ಟೂರ್ನಿ 2ನೇ ಮಹಾಯುದ್ಧದ ಬಳಿಕ ಇದೇ ಮೊದಲ ಬಾರಿಗೆ ರದ್ದುಗೊಂಡಿದೆ. ಮೂಲ ವೇಳಾಪಟ್ಟಿಯ ಪ್ರಕಾರ ಈ ವರ್ಷದ 134ನೇ ಆವೃತ್ತಿಯ ಟೂರ್ನಿ ಜೂನ್ 29ರಿಂದ ಜುಲೈ 13ರವರೆಗೆ ನಡೆಯಬೇಕಾಗಿತ್ತು. ಎಇಎಲ್​ಟಿಸಿ 2003ರಲ್ಲಿ ಸಾಂಕ್ರಾಮಿಕ ಪಿಡುಗಿನ ವಿಮೆಯನ್ನು ಆರಂಭಿಸಿತ್ತು ಮತ್ತು ಅಲ್ಲಿಂದ ಪ್ರತಿ ವರ್ಷ 15 ಕೋಟಿ ರೂ. (2 ದಶಲಕ್ಷ ಡಾಲರ್) ವಿಮಾ ಮೊತ್ತ ಪಾವತಿಸುತ್ತಿತ್ತು. ಅಂದರೆ ಇದುವರೆಗೆ ಒಟ್ಟಾರೆ 260 ಕೋಟಿ ರೂ. (34 ದಶಲಕ್ಷ ಡಾಲರ್) ವಿಮೆ ಮೊತ್ತವನ್ನು ಪಾವತಿಸಿದೆ. ಆದರೆ ಈ ಬಾರಿ ಕರೊನಾ ಸಾಂಕ್ರಾಮಿಕ ಪಿಡುಗಿನಿಂದ ಟೂರ್ನಿ ರದ್ದಾಗಿರುವ ಕಾರಣದಿಂದ ಎಇಎಲ್​ಟಿಸಿಗೆ ವಿಮೆ ಪಾಲಿಸಿಯಿಂದ 1076 ಕೋಟಿ ರೂ. (141 ದಶಲಕ್ಷ ಡಾಲರ್) ಪರಿಹಾರ ಮೊತ್ತ ಲಭಿಸಿದೆ.

’ವಿಮೆ ಮಾಡಿಸಿರುವುದು ನಮ್ಮ ಅದೃಷ್ಟ. ಇದರಿಂದ ನೆರವಾಗಿದೆ. ಆದರೆ ಇದು ಎಲ್ಲ ಸಮಸ್ಯೆಗೆ ಪರಿಹಾರ ಅಲ್ಲ’ ಎಂದು ಎಇಎಲ್​ಟಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಚರ್ಡ್ ಲೂಯಿಸ್ ತಿಳಿಸಿದ್ದಾರೆ.

ಈ ವರ್ಷದ ವಿಂಬಲ್ಡನ್ ಟೂರ್ನಿಯಿಂದ ಸಂಘಟಕರು 2,370 ಕೋಟಿ ರೂ. (250 ದಶಲಕ್ಷ ಪೌಂಡ್) ಆದಾಯದ ನಿರೀಕ್ಷೆಯಲ್ಲಿದ್ದರು ಎನ್ನಲಾಗಿದೆ. ಅದರಲ್ಲಿ ಈಗ ಸುಮಾರು ಅರ್ಧದಷ್ಟು ನಷ್ಟವನ್ನು ವಿಮಾ ಮೊತ್ತ ತಪ್ಪಿಸಿದೆ.

2002ರಲ್ಲಿ ಹರಡಿದ್ದ ಸಾರ್ಸ್ ವೈರಸ್​ನ ಭೀತಿಯಿಂದಾಗಿ ವಿಂಬಲ್ಡನ್ ಸಂಘಟಕರು ಸಾಂಕ್ರಾಮಿಕ ಪಿಡುಗಿನ ವಿಮೆಯನ್ನು ಮಾಡಿಸಿದ್ದರು ಎನ್ನಲಾಗಿದೆ. ಅದು ಈಗ ಕರೊನಾ ಸೋಂಕಿನ ಸಮಯದಲ್ಲಿ ಎಇಎಲ್​ಟಿಸಿ ಕೈಹಿಡಿದಿದೆ. ಇತ್ತೀಚೆಗೆ ರದ್ದುಗೊಂಡ ಬ್ರಿಟಿಷ್ ಓಪನ್ ಗಾಲ್ಪ್ ಟೂರ್ನಿಗೂ ಸಾಂಕ್ರಾಮಿಕ ಪಿಡುಗಿನ ವಿಮೆಯಿಂದ ಲಾಭವಾಗಿತ್ತು.

ಐಪಿಎಲ್​ಗಿಲ್ಲ ಇಂಥ ಅದೃಷ್ಟ!

ಈ ವರ್ಷದ ಐಪಿಎಲ್ ಟೂರ್ನಿ ಒಂದು ವೇಳೆ ರದ್ದುಗೊಂಡರೆ ವಿಮೆಯಿಂದ ಯಾವುದೇ ಹಣ ಬರುವುದಿಲ್ಲ. ಯಾಕೆಂದರೆ ಐಪಿಎಲ್​ಗೂ ಬಿಸಿಸಿಐ ವಿಮೆ ಮಾಡಿಸಿದ್ದರೂ ಅದರಲ್ಲಿ ವಿಂಬಲ್ಡನ್​ನಂತೆ ಸಾಂಕ್ರಾಮಿಕ ಪಿಡುಗಿನ ವಿಮೆ ಒಳಗೊಂಡಿರುವುದಿಲ್ಲ ಎನ್ನಲಾಗಿದೆ. ಮಳೆ ಮತ್ತಿತರ ಪ್ರಕೃತಿ ವಿಕೋಪ ಮತ್ತು ಅಪಘಾತ, ಭಯೋತ್ಪಾದಕ ದಾಳಿ ಭೀತಿಗಳಿಗೆ ಬಿಸಿಸಿಐ ವಿಮೆ ಮಾಡಿಸಿದ್ದರೂ, ಅದರಲ್ಲಿ ಸಾಂಕ್ರಾಮಿಕ ಪಿಡುಗಿನ ನಿಬಂಧನೆ ಒಳಪಟ್ಟಿಲ್ಲ ಎನ್ನಲಾಗಿದೆ. ಇದರಿಂದಾಗಿ ಐಪಿಎಲ್ ರದ್ದುಗೊಂಡರೆ ಬಿಸಿಸಿಐ ಮತ್ತು ಫ್ರಾಂಚೈಸಿಗಳಿಗೆ ಬರೋಬ್ಬರಿ 3,800 ಕೋಟಿ ರೂ.ಗೂ ಅಧಿಕ ನಷ್ಟವಾಗಲಿದೆ. ಇನ್ನು ಟೂರ್ನಿಯ ನೇರಪ್ರಸಾರದ ಹಕ್ಕು ಪಡೆದಿರುವ ಪ್ರಸಾರ ವಾಹಿನಿ ಸ್ಟಾರ್ ಸ್ಪೋರ್ಟ್ಸ್​ಗೂ 3,269 ಕೋಟಿ ರೂ. ನಷ್ಟವಾಗಲಿದೆ. ವಿವೋಗೆ ನೀಡಲಾಗಿ ರುವ ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವದಿಂದಲೂ ಬಿಸಿಸಿಐ 400 ಕೋಟಿ ರೂ. ನಷ್ಟ ಅನುಭವಿಸಲಿದೆ. ಜತೆಗೆ ಕೇಂದ್ರಿಯ ಪ್ರಾಯೋಜಕತ್ವದಿಂದ 200 ಕೋಟಿ ರೂ. ಕಳೆದುಕೊಳ್ಳಲಿದೆ. ಇನ್ನು 8 ಫ್ರಾಂಚೈಸಿಗಳೂ ತಂಡ ಪ್ರಾಯೋಜಕತ್ವದಿಂದ 450-500 ಕೋಟಿ ರೂ. ನಷ್ಟ ಅನುಭವಿಸಲಿದ್ದರೆ, ಟಿಕೆಟ್ ಮಾರಾಟದಿಂದ ಅಂದಾಜು 250 ಕೋಟಿ ರೂ. ನಷ್ಟ ಅನುಭವಿಸಲಿವೆ. ಭಾರತದಲ್ಲಿ ಸಾಂಕ್ರಾಮಿಕ ಪೀಡಿಗಿಗೆ ವಿಮೆ ನೀಡುವ ಪಾಲಿಸಿಗಳು ಇಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net