ಒಲಿಂಪಿಕ್ಸ್ ಅರ್ಹತಾ ಮಾನದಂಡ ಬದಲು?

olampic mar 20
Published on

ಟೋಕಿಯೊ: ಮುಂಬರುವ ಟೋಕಿಯೊ ಒಲಿಂಪಿಕ್ಸ್ ಆಯೋಜನೆಯ ಬಗ್ಗೆ ಅನಿಶ್ಚಿತತೆಗಳು ಹರಡಿರುವ ನಡುವೆ ಕೂಟಕ್ಕೆ ಪೂರ್ವಭಾವಿಯಾಗಿ ನಿಗದಿಯಾಗಿದ್ದ ಬಹುತೇಕ ಎಲ್ಲ ಅರ್ಹತಾ ಕೂಟಗಳು ರದ್ದುಗೊಂಡಿವೆ. ಇದರಿಂದಾಗಿ ಕೂಟಕ್ಕೆ ಶೇ. 43ರಷ್ಟು ಕ್ರೀಡಾಪಟುಗಳು ಅರ್ಹತೆ ಸಂಪಾದಿಸುವುದು ಇನ್ನೂ ಬಾಕಿ ಉಳಿದಿದ್ದು, ಸದ್ಯ ಅರ್ಹತಾ ಕೂಟಗಳೇ ನಡೆಯುವುದು ಅನುಮಾನವೆನಿಸಿರುವುದರಿಂದ ಅವರ ಅರ್ಹತೆ ಹೇಗೆ ಎಂಬ ಬಗ್ಗೆ ಗೊಂದಲಗಳು ಹರಡಿವೆ.

ಒಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳಬೇಕಿರುವ 11 ಸಾವಿರ ಕ್ರೀಡಾಪಟುಗಳ ಪೈಕಿ ಶೇ. 57ರಷ್ಟು ಕ್ರೀಡಾಪಟುಗಳ ಮಾತ್ರ ಸದ್ಯ ಅರ್ಹತೆ ಖಚಿತಪಡಿಸಿಕೊಂಡಿದ್ದಾರೆ. ಉಳಿದಂತೆ 4,700 ಕ್ರೀಡಾಪಟುಗಳ ಅರ್ಹತೆ ಇನ್ನೂ ಖಚಿತವಾಗಿಲ್ಲ. ಹೀಗಾಗಿ ಕ್ರೀಡಾಕೂಟದ ಅರ್ಹತೆಯ ಮಾನದಂಡವನ್ನೇ ಬದಲಾವಣೆ ಮಾಡುವ ಬಗ್ಗೆ ಅಂತಾರಾಷ್ಟೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಚಿಂತನೆ ನಡೆಸಿದೆ. ಟೋಕಿಯೊ ಒಲಿಂಪಿಕ್ಸ್ ಜುಲೈ 24ರಿಂದ ಆಗಸ್ಟ್ 9ರವರೆಗೆ ನಡೆಯಬೇಕಿದೆ.

ಸದ್ಯ ವ್ಯಾಪಕವಾಗಿ ಹರಡಿರುವ ಕರೊನಾ ಸೋಂಕಿನಿಂದಾಗಿ ಕೆಲ ದೇಶಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ನಡೆಸುವುದು ಕಷ್ಟವಾಗಿದೆ. ಇದರಿಂದಾಗಿ, ಒಲಿಂಪಿಕ್ಸ್ ಮುಂದೂಡದಿರುವ ಐಒಸಿಯ ನಿರ್ಧಾರವನ್ನು ‘ಸಂವೇದನೆ ರಹಿತ ಮತ್ತು ಬೇಜವಾಬ್ದಾರಿ’ ಎಂದು ಟೀಕಿಸಲಾಗುತ್ತಿದೆ.

ಅಮೆರಿಕ ಸಹಿತ ಹೆಚ್ಚಿನ ದೇಶಗಳಲ್ಲಿ ತಂಡದ ಆಯ್ಕೆಯನ್ನು ಟ್ರಯಲ್ಸ್ ಮೂಲಕ ನಡೆಸಲಾಗುತ್ತದೆ. ಆದರೆ ಸದ್ಯ ಎಲ್ಲ ಕ್ರೀಡಾ ಚಟುವಟಿಕೆಗಳನ್ನು ಸ್ಥಗಿತ ಮಾಡಲಾಗಿರುವುದರಿಂದ, ಆಯ್ಕೆ ಟ್ರಯಲ್ಸ್ ಕೂಡ ನಡೆಸುವುದು ಅಸಾಧ್ಯವಾಗಿದೆ.

ಇದರಿಂದ ಒಲಿಂಪಿಕ್ಸ್​ನಲ್ಲಿ ದೇಶವನ್ನು ಪ್ರತಿನಿಧಿಸುವ ಕ್ರೀಡಾಪಟುಗಳ ಆಯ್ಕೆ ಹೇಗೆ ಎಂಬ ಗೊಂದಲ ಮೂಡಿದೆ. ಹಿಂದಿನ ನಿರ್ವಹಣೆ, ರ್ಯಾಂಕಿಂಗ್, ದಾಖಲೆಗಳನ್ನು ಪರಿಗಣಿಸಿ ತಂಡವನ್ನು ಆಯ್ಕೆ ಮಾಡಿದರೆ ವಿವಾದಗಳು ಹುಟ್ಟಿಕೊಳ್ಳುವ ಸಾಧ್ಯತೆಯೂ ಇರುತ್ತವೆ. -ಪಿಟಿಐ

ಮುಂದಿನ ವರ್ಷಕ್ಕೆ ಒಲಿಂಪಿಕ್ಸ್?

ಒಲಿಂಪಿಕ್ಸ್ ಮುಂದೂಡುವ ಯಾವುದೇ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ (ಐಒಸಿ) ಮಂಗಳವಾರ ಸ್ಪಷ್ಟಪಡಿಸಿದ್ದರೂ, ಮತ್ತೊಂದೆಡೆ ಟೋಕಿಯೊ ಒಲಿಂಪಿಕ್ಸ್ ಅನ್ನು ಮುಂದಿನ ವರ್ಷಕ್ಕೆ ಮುಂದೂಡುವ ಸಾಧ್ಯತೆಗಳ ಬಗ್ಗೆ ಚಿಂತನೆಗಳು ನಡೆಯುತ್ತಿವೆ. ವಿಮಾ ನಿಯಮಗಳು ಮತ್ತಿತರ ಆರ್ಥಿಕ ಹಿತದೃಷ್ಟಿಯಿಂದಾಗಿ ಐಒಸಿಗೆ ಸದ್ಯ ಒಲಿಂಪಿಕ್ಸ್ ರದ್ದು ಅಥವಾ ಮುಂದೂಡಿಕೆ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನಡುವೆ ಮುಂದಿನ ವರ್ಷ ಜುಲೈ-ಆಗಸ್ಟ್ ಸಮಯದಲ್ಲೇ ಒಲಿಂಪಿಕ್ಸ್ ಆಯೋಜನೆಯ ಸಾಧ್ಯತೆ ಬಗ್ಗೆ ಪರಿಶೀಲನೆ ನಡೆದಿದೆ. ಮುಂದಿನ ವರ್ಷ ಹಲವು ಕ್ರೀಡೆಗಳ ವಿಶ್ವ ಚಾಂಪಿಯನ್​ಷಿಪ್​ಗಳು ಈಗಾಗಲೆ ನಿಗದಿಯಾಗಿದ್ದು, ಅವುಗಳನ್ನು 2023ಕ್ಕೆ ಮುಂದೂಡುವ ಅವಕಾಶದ ಬಗ್ಗೆ ಪರಿಶೀಲನೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net