ಚಿನ್ನಸ್ವಾಮಿ ಕ್ರೀಡಾಂಗಣದ ಹೊಸ ಫ್ಲಡ್​ಲೈಟ್ ಟವರ್ ಇಂದು ಉದ್ಘಾಟನೆ, ಏನಿದರ ವಿಶೇಷತೆ?

flood light web
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೊಸದಾಗಿ 4.8 ಕೋಟಿ ರೂಪಾಯಿ ವೆಚ್ಚದಲ್ಲಿ ಅಳವಡಿಸಲಾಗಿರುವ ಯೂನಿಪೋಲ್ ಫ್ಲಡ್‌ಲೈಟ್ ಟವರ್‌ಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಉದ್ಘಾಟಿಸಲಿದ್ದಾರೆ. ಕ್ರೀಡಾ ಸಚಿವ ನಾರಾಯಣ ಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ತಿಳಿಸಿದೆ.

1969ರಲ್ಲಿ ನಿರ್ಮಾಣಗೊಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಹಿಂದೆ 1995ರಲ್ಲಿ ಮೊದಲ ಬಾರಿಗೆ ಫ್ಲಡ್‌ಲೈಟ್ ಅಳವಡಿಸಲಾಗಿತ್ತು. 1996ರ ಏಕದಿನ ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ನಡುವೆ ನಡೆದ ಕ್ವಾರ್ಟರ್​ಫೈನಲ್ ಇದರಡಿಯಲ್ಲಿ ನಡೆದ ಮೊದಲ ಹೊನಲು ಬೆಳಕಿನ ಪಂದ್ಯವಾಗಿತ್ತು. ಬಳಿಕ 2011ರ ವಿಶ್ವಕಪ್ ವೇಳೆ ಫ್ಲಡ್​ಲೈಟ್‌ನ ಬಲ್ಬ್‌ಗಳನ್ನಷ್ಟೇ ಬದಲಾಯಿಸಲಾಗಿತ್ತು.

ಮೊಬೈಲ್​ ಟವರ್​ ರೀತಿಯ ಜಾಲರಿ (ಲ್ಯಾಟಿಸ್) ಸ್ವರೂಪದಲ್ಲಿದ್ದ 4 ಫ್ಲಡ್​​ಲೈಟ್ ಟವರ್‌ಗಳನ್ನು ಯೂನಿಪೋಲ್ (ಏಕಕಂಬ) ಮಾದರಿಯ ಆಧುನಿಕ ತಂತ್ರಜ್ಞಾನಕ್ಕೆ ಬದಲಾಯಿಸಲಾಗಿದೆ. ಹೆಚ್ಚುವರಿ ಹ್ಯಾಲೈಡು ದೀಪಗಳನ್ನೂ ಇದಕ್ಕೆ ಅಳವಡಿಸಲಾಗಿದೆ. ಅಗತ್ಯ ಸಂದರ್ಭಗಳಲ್ಲಿ ಇದಕ್ಕೆ ಎಲ್‌ಇಡಿ ಬಲ್ಬ್‌ಗಳನ್ನೂ ಅಳವಡಿಸಬಹುದಾಗಿದೆ. ಆಟದ ವೇಳೆ ಕಣ್ಣು ಕೋರೈಸುವುದು ತಪ್ಪಲಿದೆ. ನೆರಳಿನ ಸಮಸ್ಯೆಯೂ ಎದುರಾಗುವುದಿಲ್ಲ.

ಸುಮಾರು 50 ಮೀಟರ್ ಎತ್ತರದ ಹೊಸ ಫ್ಲಡ್‌ಲೈಟ್ ಸ್ತಂಬಗಳು ಮೈಲ್ಡ್ ಸ್ಟೀಲ್‌ನದ್ದಾಗಿದ್ದು, ತುಕ್ಕು ನಿರೋಧಕವಾಗಿವೆ. ಇದರಲ್ಲಿ ಲಿಫ್ಟ್​ ವ್ಯವಸ್ಥೆಯೂ ಇರುವ ಕಾರಣ, ಬಲ್ಬ್ ಬದಲಾವಣೆಯೂ ಸುಲಭವಾಗಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net