2ನೇ ಟೆಸ್ಟ್​ಗೆ ತಂಡ ಸಂಯೋಜನೆ ಗೊಂದಲದಲ್ಲಿ ಭಾರತ; ಯಾರು ಇನ್​? ಯಾರು ಔಟ್​?

ind comb web
Published on

ವಿಶಾಖಪಟ್ಟಣ: ಹೈದರಾಬಾದ್​ನಲ್ಲಿ ಆಂಗ್ಲರ ಬಾಜ್​ಬಾಲ್​ ಆಟದ ಎದುರು ಕಂಡ ಸೋಲು ಒಂದೆಡೆಯಾದರೆ, ಮತ್ತೊಂದೆಡೆ ಪ್ರಮುಖ ಆಟಗಾರರಾದ ರವೀಂದ್ರ ಜಡೇಜಾ ಮತ್ತು ಕನ್ನಡಿಗ ಕೆಎಲ್​ ರಾಹುಲ್​ ಗಾಯದಿಂದಾಗಿ ಅಲಭ್ಯರಾಗಿರುವ ಹೊಡೆತ ಇನ್ನೊಂದೆಡೆ. ಇವೆರಡರಿಂದಾಗಿ ಭಾರತಕ್ಕೆ ಎರಡನೇ ಟೆಸ್ಟ್​ ಪಂದ್ಯಕ್ಕೆ ಆಡುವ 11ರ ಬಳಗ ಅಂತಿಮಗೊಳಿಸುವುದು ಸವಾಲೆನಿಸಿದೆ. ಪ್ರವಾಸಿ ಇಂಗ್ಲೆಂಡ್​ ತಂಡ ಬಾಜ್​ಬಾಲ್​ಗೆ ಸೂಕ್ತ ತಿರುಗೇಟು ನೀಡಬಲ್ಲಂಥ ತಂಡ ಸಂಯೋಜನೆಯನ್ನು ರೂಪಿಸುವುದು ನಾಯಕ ರೋಹಿತ್​ ಶರ್ಮ ಮತ್ತು ಕೋಚ್​ ರಾಹುಲ್​ ದ್ರಾವಿಡ್​ಗೆ ತಲೆನೋವಾಗಿ ಪರಿಣಮಿಸಿದೆ.

ರಾಹುಲ್​ ಮತ್ತು ಜಡೇಜಾ ಬದಲಿಗೆ ರಜತ್​ ಪಾಟೀದಾರ್​ ಮತ್ತು ಕುಲದೀಪ್​ ಯಾದವ್​ ಅವರನ್ನು ಕಣಕ್ಕಿಳಿಸುವುದು ಸೂಕ್ತ ಆಯ್ಕೆಯಾಗಿ ಕಾಣಿಸುತ್ತಿದೆ. ಆದರೆ ಆಂಗ್ಲರ ಬಾಜ್​ಬಾಲ್​ಗೆ ಸೆಡ್ಡು ಹೊಡೆಯಬೇಕಾದರೆ ಭಾರತ ತಂಡ ಇಷ್ಟೇ ಬದಲಾವಣೆ ಮಾಡಿದರೆ ಸಾಲದು. ಭಾರತ ಕೂಡ ಆಂಗ್ಲರ ಆಕ್ರಮಣಕ್ಕೆ ಪ್ರತಿಆಕ್ರಮಣ ನಡೆಸುವಂಥ ತಂಡವನ್ನೇ ರೂಪಿಸಬೇಕಾಗಿದೆ.

ಇಂಗ್ಲೆಂಡ್​ ತಂಡ ಹೈದರಾಬಾದ್​ನಲ್ಲಿ ಓರ್ವ ವೇಗಿಯ ಜತೆಗೆ ತ್ರಿವಳಿ ಸ್ಪಿನ್ನರ್​ಗಳನ್ನು ಒಳಗೊಂಡ ಕೇವಲ ನಾಲ್ವರು ಬೌಲರ್​ಗಳ ಕಾರ್ಯತಂತ್ರದೊಂದಿಗೆ ಯಶಸ್ಸು ಸಾಧಿಸಿತ್ತು. ಹೀಗಾಗಿ ಭಾರತ ತಂಡ ಕೂಡ ಕೇವಲ ಓರ್ವ ವೇಗಿಯೊಂದಿಗೆ ಕಣಕ್ಕಿಳಿಯುವ ಚಿಂತನೆಯಲ್ಲಿದೆ. ಆಗ ಉಪನಾಯಕ ಜಸ್​ಪ್ರೀತ್​ ಬುಮ್ರಾ ಸ್ಥಾನ ಉಳಿಸಿಕೊಂಡರೆ, ಮೊಹಮದ್​ ಸಿರಾಜ್​ ಹೊರಗುಳಿಯಬೇಕಾಗುತ್ತದೆ.

ಸಿರಾಜ್​ ಸ್ಥಾನದಲ್ಲಿ ಸ್ರಾರ್ಜ್​ ಖಾನ್​ ಅಥವಾ ವಾಷಿಂಗ್ಟನ್​ ಸುಂದರ್​ರನ್ನು ಕಣಕ್ಕಿಳಿಸಿ ಮಧ್ಯಮ ಕ್ರಮಾಂಕವನ್ನು ಬಲಪಡಿಸುವ ಯೋಜನೆ ಭಾರತದ್ದಾಗಿದೆ. ವಾಷಿಂಗ್ಟನ್​ 4ನೇ ಸ್ಪಿನ್ನರ್​ ಆಗಿಯೂ ಉಪಯುಕ್ತರಾಗಬಲ್ಲರು.

ಇನ್ನು ಎಡಗೈ ಸ್ಪಿನ್ನರ್​ ಸೌರಭ್​ ಕುಮಾರ್​ ಆಡುವ 11ರ ಬಳಗ ಸೇರಬಲ್ಲ ಕರಿಗುದುರೆಯಾಗಿದ್ದಾರೆ. ಜಡೇಜಾರಂತೆ ಸೌರಭ್​ ಕೂಡ ಬ್ಯಾಟಿಂಗ್​ನಲ್ಲೂ ಉಪಯುಕ್ತರಾಗಬಲ್ಲರು. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಕೆಲ ಶತಕ ಸಿಡಿಸಿರುವ ಸೌರಭ್​, ಇತ್ತೀಚೆಗೆ ಚತುರ್ದಿನ ಟೆಸ್ಟ್​ನಲ್ಲಿ ಇಂಗ್ಲೆಂಡ್​ ಲಯನ್ಸ್​ ತಂಡವನ್ನು ಸ್ಪಿನ್​ ದಾಳಿಯ ಮೂಲಕ ಕಾಡಿದ್ದರು. ಹೀಗಾಗಿ ಆಂಗ್ಲರ ಎಡಗೈ ಸ್ಪಿನ್​ ಅಸ್ತ್ರಕ್ಕೆ ಭಾರತವೂ ಎಡಗೈ ಸ್ಪಿನ್ನರ್​ಗಳ ಮೂಲಕವೇ ತಿರುಮಂತ್ರ ಹಾಕಲು ಯೋಜಿಸಿದೆ.

ಗಿಲ್​ಗೆ ಆರಂಭಿಕನ ಸ್ಥಾನ?

ಚೇತೇಶ್ವರ ಪೂಜಾರ ಅವರಿಂದ ತೆರವಾದ 3ನೇ ಕ್ರಮಾಂಕದಲ್ಲಿ ಆಡಲು ಶುಭಮಾನ್​ ಗಿಲ್​ ಸ್ವತಃ ಆಸಕ್ತಿ ತೋರಿದ್ದರು. ಆದರೆ ಈ ಕ್ರಮಾಂಕದಲ್ಲಿ ಅವರಿಂದ ಇದುವರೆಗೆ ನಿರೀಕ್ಷಿತ ನಿರ್ವಹಣೆ ಬಂದಿಲ್ಲ. ಹೀಗಾಗಿ ಅವರಿಗೆ ಮತ್ತೆ ಆರಂಭಿಕನ ಸ್ಥಾನ ನೀಡಿ, ನಾಯಕ ರೋಹಿತ್​ ಶರ್ಮ 3ನೇ ಕ್ರಮಾಂಕದಲ್ಲಿ ಆಡುವ ಚಿಂತನೆಯೂ ನಡೆದಿದೆ. ರೋಹಿತ್​ ಸ್ಪಿನ್​ ಬೌಲಿಂಗ್​ ಎದುರು ಉತ್ತಮವಾಗಿ ಆಡುವುದರಿಂದ 3ನೇ ಕ್ರಮಾಂಕದಲ್ಲಿ ಆಡುವುದು ಅವರಿಗೆ ಕಷ್ಟವಾಗದು.

4 ಸ್ಪಿನ್ನರ್ಸ್​ಗೆ ಇಂಗ್ಲೆಂಡ್​ ಆದ್ಯತೆ?

ತ್ರಿವಳಿ ಸ್ಪಿನ್ನರ್ಸ್​ ಕಣಕ್ಕಿಳಿಸಿ ಹೈದರಾಬಾದ್​ನಲ್ಲಿ ಕಂಡ ಯಶಸ್ಸಿನಿಂದ ವಿಶ್ವಾಸ ಹೆಚ್ಚಿಸಿಕೊಂಡಿರುವ ಇಂಗ್ಲೆಂಡ್​ ತಂಡ ವಿಶಾಖಪಟ್ಟಣದಲ್ಲಿ ನಡೆಯಲಿರುವ 2ನೇ ಟೆಸ್ಟ್​ನಲ್ಲಿ ನಾಲ್ವರು ಸ್ಪಿನ್ನರ್​ಗಳನ್ನು ಆಡಿಸುವ ಚಿಂತನೆಯಲ್ಲಿದೆ. ತಂಡದ ಕೋಚ್​ ಬ್ರೆಂಡನ್​ ಮೆಕ್ಕಲಂ ಈ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ. ವೀಸಾ ಸಮಸ್ಯೆ ಎದುರಿಸಿದ್ದ ಪಾಕ್​ ಮೂಲದ ಸ್ಪಿನ್ನರ್​ ಶೋಯಿಬ್​ ಬಶೀರ್​ 2ನೇ ಟೆಸ್ಟ್​ಗೆ ಮುನ್ನ ತಂಡ ಸೇರಿಕೊಂಡಿದ್ದು, ವಿಶಾಖಪಟ್ಟಣದಲ್ಲಿ 4ನೇ ಸ್ಪಿನ್ನರ್​ ಆಗಿ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಪಿಚ್​ ಸ್ಪಿನ್​ ಸ್ನೇಹಿಯಾಗಿದ್ದರೆ ನಾವೂ ಎಲ್ಲ 4 ಸ್ಪಿನ್ನರ್​ಗಳನ್ನು ಆಡಿಸಲು ಹಿಂದೇಟು ಹಾಕುವುದಿಲ್ಲ ಎಂದು ಮೆಕ್ಕಲಂ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net