

ಮೆಲ್ಬೋರ್ನ್: ಆಸ್ಟ್ರೆಲಿಯಾ ತಂಡ ಪ್ರವಾಸಿ ಪಾಕಿಸ್ತಾನ ವಿರುದ್ಧ ಮಂಗಳವಾರದಿಂದ ಬಾಕ್ಸಿಂಗ್ ಡೇ ಆಡಲು ಸಜ್ಜಾಗಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಗೆದ್ದಿರುವ ಆಸೀಸ್, 2ನೇ ಟೆಸ್ಟ್ನಲ್ಲೂ ಗೆಲುವಿನ ಓಟ ಮುಂದುವರಿಸುವ ಹಂಬಲದಲ್ಲಿದ್ದರೆ, ಪಾಕಿಸ್ತಾನ ತಂಡ ಕಾಂಗರೂ ನೆಲದಲ್ಲಿ ಸತತ 15 ಟೆಸ್ಟ್ ಸೋಲಿನ ಸರಪಳಿ ಮುರಿಯುವ ತವಕದಲ್ಲಿದೆ. ಕೆಲ ಆಟಗಾರರ ಗಾಯದ ಸಮಸ್ಯೆ ಪಾಕಿಸ್ತಾನ ತಂಡಕ್ಕೆ ಮತ್ತಷ್ಟು ಹೊಡೆತ ನೀಡಿದೆ. ಆಸೀಸ್ ಮೊದಲ ಟೆಸ್ಟ್ನಲ್ಲಿ ಆಡಿದ 11ರ ಬಳಗವನ್ನೇ ಕಣಕ್ಕಿಳಿಸಲಿದೆ.
ಪಂದ್ಯ ಆರಂಭ: ಬೆಳಗ್ಗೆ 5.00, ನೇರಪ್ರಸಾರ: ಡಿಸ್ನಿ+ಹಾಟ್ಸ್ಟಾರ್.
ಬಾಕ್ಸಿಂಗ್ ಡೇ ಎಂದರೆ...
ಪ್ರತಿ ವರ್ಷ ಡಿ. 26ರಂದು ಆರಂಭಗೊಳ್ಳುವ ಟೆಸ್ಟ್ಗೆ "ಬಾಕ್ಸಿಂಗ್ ಡೇ ಟೆಸ್ಟ್' ಎನ್ನಲಾಗುತ್ತದೆ. ಆದರೆ, ಬಾಕ್ಸಿಂಗ್ ಆಟಕ್ಕೂ "ಬಾಕ್ಸಿಂಗ್ ಡೇ'ಗೂ ಸಂಬಂಧವಿಲ್ಲ. ಕ್ರಿಸ್ಮಸ್ ಹಬ್ಬದ ದಿನ ಪಡೆಯುವ ಗಿಫ್ಟ್ "ಬಾಕ್ಸ್'ಗಳನ್ನು ಮರುದಿನ ತೆರೆಯುವುದರಿಂದ ಕಾಮನ್ವೆಲ್ತ್ ದೇಶಗಳಲ್ಲಿ ಆ ದಿನವನ್ನು "ಬಾಕ್ಸಿಂಗ್ ಡೇ' ಎನ್ನಲಾಗುತ್ತದೆ. 1950ರಲ್ಲಿ ಮೊದಲ ಬಾರಿಗೆ ಮೆಲ್ಬೋರ್ನ್ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ನಡೆದಿತ್ತು. ಆಸೀಸ್ನಲ್ಲಿ 1980ರಿಂದ ಪ್ರತಿವರ್ಷ ಮೆಲ್ಬೋರ್ನ್ ಮೈದಾನದಲ್ಲೇ ಬಾಕ್ಸಿಂಗ್ ಡೇ ಟೆಸ್ಟ್ ನಡೆಯುವ ಸಂಪ್ರದಾಯವಿದೆ. ಇತ್ತೀಚೆಗಿನ ವರ್ಷಗಳಲ್ಲಿ ದ. ಆಫ್ರಿಕಾದಲ್ಲೂ ಬಾಕ್ಸಿಂಗ್ ಡೇಯಂದು ಟೆಸ್ಟ್ ನಡೆಯುತ್ತಿದೆ.