

ಬೆಂಗಳೂರು: ನಿಗದಿತ ಓವರ್ಗಳಲ್ಲಿ ಗಮನಾರ್ಹ ನಿರ್ವಹಣೆ ತೋರುತ್ತಿರುವ ಕನ್ನಡಿಗ ಕೆಎಲ್ ರಾಹುಲ್ ಮುಂಬರುವ ನ್ಯೂಜಿಲೆಂಡ್ ಪ್ರವಾಸದ ಟೆಸ್ಟ್ ಸರಣಿಗೂ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆಗಳಿವೆ. ನ್ಯೂಜಿಲೆಂಡ್ ಪ್ರವಾಸದ ಏಕದಿನ ಹಾಗೂ ಟೆಸ್ಟ್ ತಂಡಗಳಿಗೆ ಭಾನುವಾರ ಸಿಲಿಕಾನ್ ಸಿಟಿಯಲ್ಲಿ ರಾಷ್ಟ್ರೀಯ ತಂಡದ ಆಯ್ಕೆ ನಡೆಯಲಿದೆ. ಕಳೆದ ವರ್ಷ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ತೋರಿದ ಕಳಪೆ ನಿರ್ವಹಣೆಯಿಂದಾಗಿ ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಿಂದ ರಾಹುಲ್ ಹೊರಗುಳಿದಿದ್ದರು. ಮತ್ತೊಂದೆಡೆ, ಫಿಟ್ನೆಸ್ ಸಾಬೀತು ಪಡಿಸಿದರೆ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಏಕದಿನ ತಂಡಕ್ಕೆ ವಾಪಸಾಗಲಿದ್ದಾರೆ. ಟಿ20, ಏಕದಿನ ಕ್ರಿಕೆಟ್ನಲ್ಲಿ ಸ್ಥಿರ ನಿರ್ವಹಣೆ ತೋರುವ ಮೂಲಕ ರಾಹುಲ್ ಆಯ್ಕೆ ಸಮಿತಿಯ ಗಮನಸೆಳೆದಿದ್ದಾರೆ. ಪ್ರಸಕ್ತ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭರ್ಜರಿ ನಿರ್ವಹಣೆ ತೋರುತ್ತಿರುವ ರಾಹುಲ್ ಮೇಲೆ ನಾಯಕ ವಿರಾಟ್ ಕೊಹ್ಲಿಯೂ ಸಾಕಷ್ಟು ವಿಶ್ವಾಸ ಹೊಂದಿದ್ದಾರೆ. ಯುವ ಬ್ಯಾಟ್ಸ್ಮನ್ಗಳಾದ ಪೃಥ್ವಿ ಷಾ ಹಾಗೂ ಶುಭಮಾನ್ ಗಿಲ್ಗಿಂತಲೂ ರಾಹುಲ್ ಹೆಚ್ಚು ಅವಕಾಶ ಹೊಂದಿದ್ದಾರೆ.
ನ್ಯೂಜಿಲೆಂಡ್ನಲ್ಲಿ ವೇಗಿಗಳಿಗೆ ನೆರ ವಾಗುವ ಪಿಚ್ಗಳಿರುವುದರಿಂದ ನವದೀಪ್ ಸೈನಿಗೂ ಚಾನ್ಸ್ ಒಲಿದರೆ ಅಚ್ಚರಿಯಿಲ್ಲ. ಟೆಸ್ಟ್ ತಂಡದಲ್ಲಿ 3ನೇ ಸ್ಪಿನ್ನರ್ ಎನಿಸಿರುವ ಕುಲದೀಪ್ ಯಾದವ್ ಬದಲಿಗೆ ಸೈನಿ ಹೆಸರು ಪರಿಗಣಿಸಲಾಗುತ್ತಿದೆ. ಇಬ್ಬರು ಸ್ಪಿನ್ನರ್ಗಳು (ಆರ್.ಅಶ್ವಿನ್, ರವೀಂದ್ರ ಜಡೇಜಾ) ತಂಡದಲ್ಲಿದ್ದರೂ ಹನ್ನೊಂದರ ಬಳಗದಲ್ಲಿ ಒಬ್ಬರಿಗಷ್ಟೇ ಅವಕಾಶವಿರುತ್ತದೆ. ಇದರಿಂದ ಕುಲದೀಪ್ ಬದಲಿಗೆ ಸೈನಿ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಅವಕಾಶ ಹೊಂದಿದ್ದಾರೆ.
ಪಾಂಡ್ಯ ಫೇಲಾದ್ರೆ, ಸೂರ್ಯಕುಮಾರ್ಗೆ ಚಾನ್ಸ್: ಏಕದಿನ ತಂಡದ ಆಯ್ಕೆ ಸಂಬಂಧ ಹಾರ್ದಿಕ್ ಪಾಂಡ್ಯ ಲಭ್ಯತೆಯೇ ಕಗ್ಗಂಟಾಗಿ ಉಳಿದಿದೆ. ಒಂದು ವೇಳೆ ಪಾಂಡ್ಯ ಫಿಟ್ನೆಸ್ ಸಾಬೀತು ಪಡಿಸಿದರೆ ಆಯ್ಕೆ ಸುಗಮವಾಗಲಿದೆ. ವೈಯಕ್ತಿಕ ಟ್ರೖೆನರ್ ಎಸ್.ರಜನಿಕಾಂತ್ ಸಲಹೆ ಮೇರೆಗೆ ಹಾರ್ದಿಕ್ ಪಾಂಡ್ಯ ನ್ಯೂಜಿಲೆಂಡ್ ಪ್ರವಾಸ ಕೈಗೊಂಡ ಭಾರತ ಎ ತಂಡದಿಂದ ಹೊರಗುಳಿದಿದ್ದರು. ಒಂದು ವೇಳೆ ಫಿಟ್ನೆಸ್ ಟೆಸ್ಟ್ ನಲ್ಲಿ ಹಾರ್ದಿಕ್ ಪಾಂಡ್ಯ ವಿಫಲರಾದರೆ ಮುಂಬೈ ರಣಜಿ ತಂಡದ ನಾಯಕ ಸೂರ್ಯಕುಮಾರ್ ಯಾದವ್ಗೆ ನಿಗದಿತ ಓವರ್ಗಳಲ್ಲಿ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ.
ಕೇದಾರ್ ಬದಲಿಗೆ ರಹಾನೆ?: ಆಲ್ರೌಂಡರ್ ಕೋಟಾದಡಿ ತಂಡದಲ್ಲಿದ್ದರೂ ಬೌಲಿಂಗ್ನಿಂದ ದೂರವೇ ಉಳಿದಿರುವ ಕೇದಾರ್ ಜಾಧವ್ ಬದಲಿಗೆ ಅಜಿಂಕ್ಯ ರಹಾನೆ ಹೆಸರು ಚಾಲ್ತಿ ಬಂದಿದೆ. ‘ಜಾಧವ್ 2023ರ ಏಕದಿನ ವಿಶ್ವಕಪ್ ಆಡುವುದು ಅನುಮಾನ. ಇತ್ತೀಚೆಗೆ ಬೌಲಿಂಗ್ ಕೂಡ ಮಾಡುತ್ತಿಲ್ಲ. ಟಿ20 ತಂಡದಲ್ಲೂ ಜಾಧವ್ ಸ್ಥಾನ ಪಡೆದಿಲ್ಲ. ಜಾಧವ್ ಬದಲಿಗೆ ಸೂರ್ಯಕುಮಾರ್ ಯಾದವ್ ಅಥವಾ ರಹಾನೆ ಆಯ್ಕೆ ಪರಿಗಣಿಸಲಾಗುತ್ತಿದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.