

ಇಂದೋರ್: ಸರಣಿಯ ಮೊದಲ ಪಂದ್ಯ ಒಂದೂ ಎಸೆತ ಕಾಣದೆ ರದ್ದುಗೊಂಡ ಬಳಿಕ ಭಾರತ ಹಾಗೂ ಪ್ರವಾಸಿ ಶ್ರೀಲಂಕಾ ತಂಡಗಳು ಸರಣಿಯ 2ನೇ ಪಂದ್ಯದಲ್ಲಿ ಮಂಗಳವಾರ ಕಾದಾಡಲಿವೆ. ವೈಯಕ್ತಿಕ ನೆಲೆಯಲ್ಲಿ ಈ ಸರಣಿ ಶಿಖರ್ ಧವನ್ ಪಾಲಿಗೆ ಪ್ರಮುಖವಾಗಿದ್ದು, ಭರ್ಜರಿ ಲಯದಲ್ಲಿರುವ ಕೆಎಲ್ ರಾಹುಲ್ಗಿಂತ ಮುಂದಿನ ಟಿ20 ವಿಶ್ವಕಪ್ಗೆ ಆರಂಭಿಕನ ಸ್ಥಾನಕ್ಕೆ ತಾನೇ ಸೂಕ್ತ ಎಂದು ನಿರೂಪಿಸುವ ಗುರಿ ಅವರ ಮುಂದಿದೆ. ಆದರೆ, ಗುವಾಹಟಿ ಟಿ20 ಪಂದ್ಯ ರದ್ದಾಗಿರುವ ಕಾರಣ ಅವರಿಗೆ ತಮ್ಮ ನಿರ್ವಹಣೆಯ ಮೂಲಕ ಗಮನಸೆಳೆಯಲು ಸರಣಿಯಲ್ಲಿ ಕೇವಲ 2 ಪಂದ್ಯ ಮಾತ್ರವೇ ಬಾಕಿ ಇದೆ.
ಹೋಳ್ಕರ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಎರಡೂ ತಂಡಗಳೂ ಸರಣಿ ಮುನ್ನಡೆಗಾಗಿ ಹೋರಾಟ ನಡೆಸಲಿವೆ. ಇದರೊಂದಿಗೆ ಧವನ್ ತಮ್ಮ ಸ್ಥಾನವನ್ನು ಗಟ್ಟಿಮಾಡಿಕೊಳ್ಳುವ ನಿಟ್ಟಿನಲ್ಲೂ ಪ್ರಯತ್ನಿಸಲಿದ್ದಾರೆ. 34 ವರ್ಷದ ಧವನ್ ಈವರೆಗೂ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಭಾರತದ ಆರಂಭಿಕ ಆಟಗಾರನಾಗಿದ್ದರು. ಆದರೆ, 27 ವರ್ಷದ ಕೆಎಲ್ ರಾಹುಲ್ ನಿಧಾನವಾಗಿ ಆರಂಭಿಕ ಆಟಗಾರನ ಸ್ಥಾನವನ್ನೂ ಸೂಕ್ತವಾಗಿ ನಿಭಾಯಿಸುತ್ತಿರುವ ಕಾರಣ, ದೆಹಲಿ ಬ್ಯಾಟ್ಸ್
ಮನ್ಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಬೇಕಾದಲ್ಲಿ ದೊಡ್ಡ ಮಟ್ಟದ ನಿರ್ವಹಣೆ ತೋರುವ ಅಗತ್ಯ ಹಿಂದೆಂದಿಗಿಂತ ಹೆಚ್ಚಾಗಿ ಕಾಣುತ್ತಿದೆ. ಟಿ20ಯಲ್ಲಿ ಧವನ್ರ ಸ್ಟ್ರೈಕ್ರೇಟ್ ಕೂಡ ಕಳವಳಕಾರಿಯಾಗಿದೆ.
ಇನ್ನೊಂದೆಡೆ ರಾಹುಲ್ ತಮ್ಮ ಎದುರಿಗಿದ್ದ ಎಲ್ಲ ಅವಕಾಶವನ್ನೂ ಉತ್ತಮವಾಗಿ ಬಳಸಿಕೊಂಡಿದ್ದು, ವೆಸ್ಟ್ ಇಂಡೀಸ್ ವಿರುದ್ಧದ ತಲಾ ಮೂರು ಪಂದ್ಯಗಳ ಏಕದಿನ ಹಾಗೂ ಟಿ20 ಸರಣಿಯಲ್ಲಿ 1 ಶತಕ ಹಾಗೂ ಮೂರು ಅರ್ಧಶತಕ ಬಾರಿಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಕೂಡ, ಶ್ರೀಲಂಕಾ ಸರಣಿಯ ಬಳಿಕ ರೋಹಿತ್ ಶರ್ಮ ತಂಡಕ್ಕೆ ವಾಪಸಾಗುತ್ತಾರೆ. ಆಗ ಧವನ್ ಹಾಗೂ ರಾಹುಲ್ ನಡುವಲ್ಲಿ ಯಾರನ್ನು ಆರಂಭಿಕರನ್ನಾಗಿ ಆಡಿಸುವ ವಿಚಾರವಾಗಿ ಕಠಿಣ ಸಮಯ ಏರ್ಪಡಲಿದೆ ಎಂದು ಹೇಳಿದ್ದಾರೆ. ಶ್ರೀಲಂಕಾ ತಂಡ ಕಳೆದ 12 ವರ್ಷಗಳಿಂದ ಭಾರತವನ್ನು ಭಾರತದಲ್ಲಿಯೇ ಯಾವ ಮಾದರಿಯ ದ್ವಿಪಕ್ಷೀಯ ಸರಣಿಯಲ್ಲೂ ಸೋಲಿಸಿಲ್ಲ. ತವರಿನಲ್ಲಿ ಭಾರತವನ್ನು ಸೋಲಿಸಬೇಕಾದಲ್ಲಿ, ಭರ್ಜರಿ ನಿರ್ವಹಣೆ ತೋರುವ ಅಗತ್ಯವಿದೆ.
ನಾನು ಸಾಕಷ್ಟು ಟೆಸ್ಟ್ ಕ್ರಿಕೆಟ್ ಆಡಿಲ್ಲ. ಆದರೆ, ಸೀಮಿತ ಓವರ್ಗಳ ಸರಣಿಯನ್ನು ಹೆಚ್ಚಾಗಿ ಆಡಿದ್ದೇನೆ. ಕಳೆದ ಸರಣಿಯನ್ನು ಆಸ್ಟ್ರೇಲಿಯಾ ವಿರುದ್ಧ ಆಡಿದ್ದೆ. ಅಲ್ಲಿ ಉತ್ತಮವಾಗಿ ಆಡಿದ್ದರೂ, ನಿರೀಕ್ಷಿತ ಮಟ್ಟ ಮುಟ್ಟಿರಲಿಲ್ಲ. ಆದರೆ, ಈ ಸರಣಿಯಲ್ಲಿ ಅತ್ಯುತ್ತಮ ನಿರ್ವಹಣೆ ನೀಡುವ ವಿಶ್ವಾಸವಿದೆ. ಭಾರತವನ್ನು ಭಾರತದಲ್ಲಿಯೇ ಸೋಲಿಸಬೇಕಾದರೆ, ಯುವ ಅಟಗಾರರೊಂದಿಗೆ ಅನುಭವಿ ಆಟಗಾರರು ತಮ್ಮ ನಿರ್ವಹಣೆ ತೋರಬೇಕು.
| ಕುಸಲ್ ಪೆರೇರಾ ಶ್ರೀಲಂಕಾ ಬ್ಯಾಟ್ಸ್ಮನ್
ಕಳೆದ ವರ್ಷ ಸಾಕಷ್ಟು ಗಾಯಗಳಿಗೆ ಒಳಗಾಗಿದ್ದೆ. ಆದರೆ, ಇದು ಆಟದ ಭಾಗ. ಈ ಹೊಸ ವರ್ಷದಲ್ಲಿ ಹೊಸ ಆರಂಭ ವನ್ನು ಪಡೆಯುವ ವಿಶ್ವಾಸ ನನಗಿದೆ. ಸಾಕಷ್ಟು ರನ್ಗಳನ್ನು ಬಾರಿಸಿ ತಂಡದ ಗಮನಸೆಳೆಯುವ ಆಸೆ ಇದೆ. ನನಗಾಗಿ ಹಾಗೂ ತಂಡಕ್ಕಾಗಿ ಸಾಕಷ್ಟು ರನ್ ಬಾರಿಸಿ ವಿಶ್ವಕಪ್ ಗೆಲ್ಲಬೇಕು ಎನ್ನುವುದು ನನ್ನ ಗುರಿ.
| ಶಿಖರ್ ಧವನ್ ಟೀಮ್ ಇಂಡಿಯಾ ಆಟಗಾರ