

ದುಬೈ: ಏಷ್ಯಾಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಸಾಂಪ್ರದಾಯಿಕ ಎದುರಾಳಿಗಳಾದ ಹಾಲಿ ಚಾಂಪಿಯನ್ ಭಾರತ ಹಾಗೂ ಪಾಕಿಸ್ತಾನ ತಂಡಗಳು ಫೈನಲ್ ನಲ್ಲಿ ಎದುರಾಗಲಿವೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಹೈವೋಲ್ಟೇಜ್ ಪಂದ್ಯ ಮೈದಾನದ ಒಳಗೆ ಹಾಗೂ ಹೊರಗಿನ ಘಟನೆಗಳಿಂದ ಮತ್ತಷ್ಟು ಕಾವು ಪಡೆದುಕೊಂಡಿದೆ. ಟೂರ್ನಿಯಲ್ಲಿ ಅಜೇಯವಾಗಿ ಪ್ರಶಸ್ತಿ ಸುತ್ತಿಗೇರಿರುವ ಸೂರ್ಯಕುಮಾರ್ ಬಳಗ ಪ್ರಶಸ್ತಿ ಉಳಿಸಿಕೊಳ್ಳುವ ಹಂಬಲದಲ್ಲಿದೆ. 2017ರ ಚಾಂಪಿಯನ್ಸ್ ಟ್ರೋಫಿ ಬಳಿಕ ಉಭಯ ತಂಡಗಳು ಎದುರಾಗಲಿರುವ ಪ್ರತಿಷ್ಠಿತ ಟೂರ್ನಿಯ ಫೈನಲ್ ಪಂದ್ಯ ಇದಾಗಿದೆ.
ಎಂಟು ಬಾರಿಯ ಚಾಂಪಿಯನ್ ಭಾರತ ತಂಡ 11ನೇ ಬಾರಿಗೆ ಏಷ್ಯಾಕಪ್ ಫೈನಲ್ ಆಡಲಿದ್ದು, ಪಾಕ್ ಎದುರು ಕಣಕ್ಕಿಳಿಯಲಿರುವ ಮೊದಲ ದೃಷ್ಟಾಂತ ಇದಾಗಿದೆ. 2023ರ ಏಕದಿನ ವಿಶ್ವಕಪ್ ಫೈನಲ್ ಬಳಿಕ ಆಡಿದ ಬಹುರಾಷ್ಟ್ರಗಳು ಒಳಗೊಂಡ ಎಲ್ಲ ಸೀಮಿತ ಓವರ್ ಟೂರ್ನಿಯಲ್ಲಿ ಭಾರತವೇ ಚಾಂಪಿಯನ್ ಆಗಿದ್ದು, ಗೆಲುವಿನ ಫೇವರಿಟ್ ಎನಿಸಿದೆ. ಹಾಲಿ ವಿಶ್ವ ಟಿ20 ಚಾಂಪಿಯನ್ ಭಾರತ 2024ರ ವಿಶ್ವಕಪ್ ಫೈನಲ್ ಬಳಿಕ ಆಡಿರುವ 25 ಟಿ20 ಪಂದ್ಯಗಳಲ್ಲಿ 3ರಲ್ಲಿ ಮಾತ್ರ ಸೋಲು ಅನುಭವಿಸಿದೆ. ಅಂಕಿ-ಅಂಶಗಳಲ್ಲಿ ಭಾರತವೇ ಪ್ರಾಬಲ್ಯ ಸಾಧಿಸಿದರೂ. ಪಾಕಿಸ್ತಾನ ವಿರುದ್ಧದ ಪಂದ್ಯವೂ ಆಟಗಾರರಿಗೆ ಮಾನಸಿಕವಾಗಿಯೂ ಸವಾಲೊಡ್ಡಲಿದೆ. ಇಂಡೋ-ಪಾಕ್ ನಡುವಿನ ಪಂದ್ಯಗಳು ಹಿಂದಿನಂತೆ ತೀವ್ರ ಪೈಪೋಟಿಯಿಂದ ಕೂಡಿರುವುದಿಲ್ಲ ಎಂದಿರುವ ಸೂರ್ಯಕುಮಾರ್ ಫೈನಲ್ನಲ್ಲೂ ಇದನ್ನು ಸಮರ್ಥಿಸಿಕೊಳ್ಳುವಂಥ ಪ್ರದರ್ಶನ ನೀಡುವ ಚಾಲೆಂಜ್ ಹೊಂದಿದ್ದಾರೆ.
ಅಭಿಷೇಕ್ ಶರ್ಮ ಆರು ಇನಿಂಗ್ಸ್‌ಗಳಲ್ಲಿ 309 ರನ್ ಗಳಿಸುವ ಮೂಲಕ ಟೂರ್ನಿಯ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ. ಅಭಿಷೇಕ್‌ರನ್ನು ಆರಂಭದಲ್ಲಿಯೇ ಪಾಕ್ ಕಟ್ಟಿಹಾಕಿದರೆ ಭಾರತ ಒತ್ತಡದಲ್ಲಿ ಸಿಲುಕುವ ಅಪಾಯವಿದೆ. ಉಪನಾಯಕ ಶುಭಮಾನ್ ಗಿಲ್ ಟೂರ್ನಿಯಲ್ಲಿ ಅಸ್ಥಿರ ನಿರ್ವಹಣೆ ತೋರಿದ್ದು, ಲಯಕ್ಕೆ ಮರಳಬೇಕಿದೆ. 19 ವಯೋಮಿತಿ ಟೂರ್ನಿಯಿಂದಲೂ ಶಹೀನ್ ಷಾ ಅಫ್ರಿದಿ ಎಸೆತಗಳನ್ನು ಎದುರಿಸಿರುವ ಗಿಲ್‌ಗೆ ಮತ್ತೊಮ್ಮೆ ಶಹೀನ್ ಸವಾಲೊಡ್ಡಲಿದ್ದಾರೆ. ಎಡಗೈ ವೇಗಿಗಳ ಎದುರು ಗಿಲ್ ದಾಖಲೆ ಉತ್ತಮವಾಗಿಲ್ಲ. ಲಂಕಾ ವಿರುದ್ಧದ ಔಪಚಾರಿಕ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಭರವಸೆ ಮೂಡಿಸಿದ್ದು, ತಿಲಕ್ ವರ್ಮ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗಿದ್ದಾರೆ.
ಲೀಗ್ ಹಾಗೂ ಸೂಪರ್-4ನಲ್ಲಿ ಸೋಲು ಅನುಭವಿಸಿರುವ ಪಾಕಿಸ್ತಾನ ಸತತ ಮೂರನೇ ಭಾನುವಾರ ಭಾರತವನ್ನು ಎದುರಿಸಲಿದ್ದು, ಹ್ಯಾಟ್ರಿಕ್ ಸೋಲಿನ ಮುಖಭಂಗ ತಪ್ಪಿಸುವ ಸವಾಲು ಹೊಂದಿದೆ. ಪಾಕ್ ಎದುರಿನ ಹಿಂದಿನ 7 ಮುಖಾಮುಖಿಗಳಲ್ಲಿ ಭಾರತವೇ ಮೇಲುಗೈ ಸಾಧಿಸಿದೆ. ಅಭಿಷೇಕ್‌ಗೆ ಸಮಾನ ಎಂದು ಹೋಲಿಸಲ್ಪಟ್ಟಿದ್ದ ಸೈಮ್ ಆಯುಬ್ ಟೂರ್ನಿಯಲ್ಲಿ 4 ಬಾರಿ ಡಕೌಟ್ ಆಗಿದ್ದಾರೆ. ವರುಣ್ ಚಕ್ರವರ್ತಿ ಹಾಗೂ ಕುಲದೀಪ್ ಯಾದವ್ ಓವರ್‌ಗಳು ಪಂದ್ಯದ ಲಿತಾಂಶ ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರವಹಿಸಲಿವೆ. ಪಾಕಿಸ್ತಾನ 2022ರ ಆವೃತ್ತಿಯ ಸೂಪರ್-4ನಲ್ಲಿ ಕೊನೆಯದಾಗಿ ಏಷ್ಯಾಕಪ್‌ನಲ್ಲಿ ಭಾರತ ಎದುರು ಗೆಲುವು ಸಾಧಿಸಿತ್ತು.
ಟೀಮ್ ನ್ಯೂಸ್
ಭಾರತ: ಪ್ರಶಸ್ತಿ ಉಳಿಸಿಕೊಳ್ಳುವ ತವಕದಲ್ಲಿರುವ ಭಾರತದ ಆಡುವ 11ರ ಬಳಗದಲ್ಲಿ ಬದಲಾವಣೆ ಖಾತ್ರಿ. ಹಿಂದಿನ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಜಸ್‌ಪ್ರೀತ್ ಬುಮ್ರಾ ಹಾಗೂ ಶಿವಂ ದುಬೆ ಮರಳಿ ಕಣಕ್ಕಿಳಿಯಲಿದ್ದಾರೆ. ಹರ್ಷಿತ್ ರಾಣಾ ಹಾಗೂ ಆರ್ಷದೀಪ್ ಸಿಂಗ್ ಸ್ಥಾನ ಬಿಟ್ಟುಕೊಡುವ ನಿರೀಕ್ಷೆ ಇದೆ. ಹಾರ್ದಿಕ್ ಪಾಂಡ್ಯ ಅಲಭ್ಯರಾದರೆ ತಂಡದ ಸಂಯೋಜನೆ ಮೇಲೆ ಪರಿಣಾಮ ಬೀರಲಿದೆ.
ಪಾಕಿಸ್ತಾನ: ಕೊನೇ 2 ಸೂಪರ್-4 ಪಂದ್ಯಗಳ ಗೆಲುವಿನ ಕಾಂಬಿನೇಷನ್ ಉಳಿಸಿಕೊಳ್ಳುವ ಸಾಧ್ಯತೆಗಳಿವೆ. ಭಾರತೀಯ ಸ್ಪಿನ್ನರ್‌ಗಳ ಎದುರು ಸಲ್ಮಾನ್ ಅಲಿ ಅಘಾ ಹಾಗೂ ಹುಸೈನ್ ತಲಾತ್ ರನ್‌ಗಳಿಸಲು ಪರದಾಡಿದ್ದಾರೆ. ಹಿಂದಿನ ಮುಖಾಮುಖಿಯಲ್ಲಿ ಬುಮ್ರಾ ಎದುರು ಅಬ್ಬರಿಸಿದ್ದ ಸಾಹಿಬ್‌ಜಾದಾ ರ್ಹಾನ್ ಹಾಗೂ ಖರ್ ಜಮಾನ್ ಇನಿಂಗ್ಸ್ ಆರಂಭಿಸಲಿದ್ದಾರೆ.
ಟಿ20 ಮುಖಾಮುಖಿ: 15
ಭಾರತ: 12
ಪಾಕಿಸ್ತಾನ: 3
ಆರಂಭ: ರಾತ್ರಿ 8
ನೇರಪ್ರಸಾರ: ಸೋನಿ ಸ್ಪೋರ್ಟ್ಸ್ 1,5. ಸೋನಿ ಲೈವ್.