

ಕಟಕ್: ಇಲ್ಲಿನ ಬಾರಾಬತಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯ ನಡೆಯಲಿದ್ದು, ಈ ಪಂದ್ಯವನ್ನು ಗೆದ್ದು ಸರಣಿಯನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಆತಿಥೇಯರು ತಯಾರಿ ನಡೆಸುತ್ತಿದ್ದಾರೆ. ಮೊದಲ ಪಂದ್ಯದ ಸೋಲಿನಿಂದ ಹೊರಬಂದು ಸರಣಿಯನ್ನು 1-1 ಅಂತರದಿಂದ ಸಮಬಲಗೊಳಿಸಬೇಕೆಂದು ಇಂಗ್ಲೆಂಡ್ ತಯಾರಿ ನಡೆಸುತ್ತಿದ್ದು, ಭಾನುವಾರದ (ಫೆಬ್ರವರಿ 09) ಪಂದ್ಯದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.
ಇನ್ನೂ ಮೊದಲ ಪಂದ್ಯ ಶುರುವಾಗುವುದಕ್ಕೂ ಮುನ್ನ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದ ವಿರಾಟ್ ಕೊಹ್ಲಿ (Virat Kohli) ಫಿಟ್ ಆಗಿದ್ದು, ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯುವುದು ಪಕ್ಕಾ ಆಗಿದೆ. ವಿರಾಟ್ ತಂಡಕ್ಕೆ ವಾಪಸ್ ಆಗುತ್ತಿರುವುದರಿಂದ ಓರ್ವ ಆಟಗಾರನಿಗೆ ಕೊಕ್ ಕೊಡುವುದು ಪಕ್ಕಾ ಆಗಿದ್ದು, ಆ ಆಟಗಾರ ಯಾರೆಂಬುದು ದೊಡ್ಡ ಪ್ರಶ್ನೆಯಾಗಿದೆ. ಮೊದಲಿಗೆ ಯಶಸ್ವಿ ಜೈಸ್ವಾಲ್ ಹೆಸರಿ ಕೇಳಿ ಬಂದಿತಾದರು. ಇದೀಗ ಮತ್ತೋರ್ವ ಆಟಗಾರನ ಹೆಸರು ಮುನ್ನೆಲೆಗೆ ಬಂದಿದ್ದು, ಕೋಚ್ ಗೌತಮ್ ಗಂಭೀರ್ (Gautam Gambhir) ಸ್ಟ್ರಾಟರ್ಜಿ ವಿರುದ್ಧ ಫ್ಯಾನ್ಸ್ ಕಿಡಿಕಾರುತ್ತಿದ್ದಾರೆ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಶ್ರೇಯಸ್ ಅಯ್ಯರ್ ಕೊಹ್ಲಿಗೆ ಸ್ಥಾನ ಬಿಟ್ಟುಕೊಡುವ ಆಟಗಾರ ಎಂದು ಹೇಳಲಾಗುತ್ತಿದೆ. ಕಳೆದ ಪಂದ್ಯದಲ್ಲಿ ತಂಡದ ಪರ ಉಪಯುಕ್ತ ಇನ್ನಿಂಗ್ಸ್ ಆಡಿದ್ದ ಶ್ರೇಯಸ್ಗೆ ಎರಡನೇ ಪಂದ್ಯದಲ್ಲಿ ಚಾನ್ಸ್ ಸಿಗುವುದು ಡೌಟ್ ಎಂದು ಹೇಳಲಾಗಿದ್ದು, ಕೋಚ್ ಗೌತಮ್ ಗಂಭೀರ್ (Gautam Gambhir) ಹಾಕಿಕೊಂಡಿರುವ ಯೋಜನೆ ವಿರುದ್ಧ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಆದರೆ, ಈ ಸುದ್ದಿ ಇನ್ನಷ್ಟೇ ಅಧಿಕೃತವಾಗಬೇಕಿದೆ.
ಆರಂಭಿಕರಾಗಿ ರೋಹಿತ್ ಶರ್ಮ ಹಾಗೂ ಯಶಸ್ವಿ ಜೈಸ್ವಾಲ್ರನ್ನು ಮುಂದುವರೆಸಲು ಗೌತಮ್ ಗಂಭೀರ್ (Gautam Gambhir) ಯೋಜಿಸಿದ್ದು, ಮೂರು ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಬದಲು ವಿರಾಟ್ರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದ್ದಾರೆ. ಉಳಿದಂತೆ ತಂಡದಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷಿಸುವಂತಿಲ್ಲ. ಟಾಸ್ ಆದ ಬಳಿಕ ಈ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ.