ಒಲಿಂಪಿಕ್ಸ್​: ಮೊದಲನೇ ಎಸೆತದಲ್ಲೇ ಫೈನಲ್ಸ್​​ಗೆ ಆಯ್ಕೆಯಾದ ಭಾರತದ ನೀರಜ್​ ಚೋಪ್ರ

javelin
Published on

ಟೋಕಿಯೋ : ಭಾರತಕ್ಕೆ ಪದಕ ತರುವ ನಿರೀಕ್ಷೆ ಇರುವ ಅಥ್ಲೀಟ್​, ನೀರಜ್​ ಚೋಪ್ರ, ಇಂದು ನಡೆದ ಜಾವಲಿನ್​ ಥ್ರೋ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರಿ, ಪ್ರಥಮ ಸ್ಥಾನ ಗಳಿಸಿದರು. ಮೊದಲನೇ ಪ್ರಯತ್ನದಲ್ಲೇ 86.65 ಮೀಟರ್​ ದೂರಕ್ಕೆ ಎಸೆತ ಸಾಧಿಸಿ, ಫೈನಲ್​​ ಸುತ್ತನ್ನು ಸುಗಮವಾಗಿ ಪ್ರವೇಶಿಸಿದರು.

ಚೋಪ್ರ ಅವರ ಎಸೆತವು 83.50 ಮೀಟರ್​​ನ ಆಟೋಮ್ಯಾಟಿಕ್​ ಕ್ವಾಲಿಫಿಕೇಶನ್ ಮಾರ್ಕ್​​ಅನ್ನು ದಾಟಿದ ಹಿನ್ನೆಲೆಯಲ್ಲಿ ಅವರು ಆಗಸ್ಟ್​ 7 ರಂದು ನಡೆಯಲಿರುವ ಅಂತಿಮ ಸ್ಪರ್ಧೆಗೆ ನೇರವಾಗಿ ಆಯ್ಕೆಯಾದರು. 23 ವರ್ಷದ ಚೋಪ್ರ ಅವರ ಈ ಪ್ರದರ್ಶನ ಈ ಹಿಂದೆ ಚಿನ್ನದ ಪದಕ ಗೆದ್ದಿರುವ 2017ರ ವರ್ಲ್ಡ್​ ಚ್ಯಾಂಪಿಯನ್ ಜೊಹಾನ್ಸ್ ವೆಟ್ಟರ್ ಅವರು ಸಾಧಿಸಿದ ದೂರಕ್ಕಿಂತ ಹೆಚ್ಚಿದ್ದುದು ವಿಶೇಷ.

ಜರ್ಮನಿಯ ವೆಟ್ಟರ್​ ಮೂರು ಪ್ರಯತ್ನಗಳ ನಂತರ 85.64 ಮೀಟರ್​ ದೂರದ ಎಸೆತದೊಂದಿಗೆ ಎರಡನೇ ಸ್ಥಾನ ಗಳಿಸಿ, ಅಂತಿಮ ಸುತ್ತಿಗೆ ಅರ್ಹತೆ ಸಾಧಿಸಿದರು. ಫಿನ್​ಲೆಂಡಿನ ಲ್ಯಾಸಿ ಎಟೆಲಟಲೊ ಅವರು ಮೊದಲ ಪ್ರಯತ್ನದಲ್ಲೇ 84.50 ಮೀಟರ್​ ದೂರ ಎಸೆದು ಫೈನಲ್ಸ್​ಗೆ ಮುನ್ನಡೆದರು. 83.50 ಮೀಟರ್​ ದೂರವನ್ನು ಸಾಧಿಸುವ ಎಲ್ಲ ಆಟಗಾರರು ಅಥವಾ 12 ಬೆಸ್ಟ್​ ಪರ್ಫಾರ್ಮರ್​ಗಳು ಫೈನಲ್ಸ್​ಗೆ ಆಯ್ಕೆಯಾಗುವುದು ಪ್ರತೀತಿ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net