ಲಾರ್ಡ್ಸ್ ಟೆಸ್ಟ್‌ನಲ್ಲಿ ಇನಿಂಗ್ಸ್ ಮುನ್ನಡೆಗೆ ಟೀಮ್ ಇಂಡಿಯಾ ಹೋರಾಟ

team india web
Published on

ಲಂಡನ್: ವೇಗಿ ಮೊಹಮದ್ ಸಿರಾಜ್ (21ಕ್ಕೆ 2) ಮಾರಕ ದಾಳಿ ನೆರವಿನಿಂದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆಯ ಪ್ರಯತ್ನದಲ್ಲಿದ್ದರೆ, ನಾಯಕ ಜೋ ರೂಟ್ (48*ರನ್, 75 ಎಸೆತ, 6 ಬೌಂಡರಿ) ಆಸರೆಯಲ್ಲಿ ಆತಿಥೇಯ ಇಂಗ್ಲೆಂಡ್ ಪ್ರತಿಹೋರಾಟ ಸಂಘಟಿಸಿದೆ.

ಲಾಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 3 ವಿಕೆಟ್‌ಗೆ 276 ರನ್‌ಗಳಿಂದ 2ನೇ ದಿನದಾಟ ಆರಂಭಿಸಿದ ಭಾರತ ತಂಡ, ಅನುಭವಿ ವೇಗಿ ಜೇಮ್ಸ್ ಆಂಡರ್‌ಸನ್ (62ಕ್ಕೆ 5) ಮಾರಕ ದಾಳಿಗೆ ನಲುಗಿ 364 ರನ್‌ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಇಂಗ್ಲೆಂಡ್ ತಂಡ ದಿನದಂತ್ಯಕ್ಕೆ 45 ಓವರ್‌ಗಳಲ್ಲಿ 3 ವಿಕೆಟ್‌ಗೆ 119 ರನ್ ಪೇರಿಸಿದ್ದು, ಮುನ್ನಡೆಗೆ ಇನ್ನೂ 245 ರನ್ ಕಲೆ ಹಾಕಬೇಕಿದೆ.

ಜೋ ರೂಟ್ ಆಸರೆ

ಆರಂಭಿಕ ಡೊಮಿನಿಕ್ ಸಿಬ್ಲೆ (11) ಹಾಗೂ ಹಸೀಬ್ ಹಮೀದ್‌ಗೆ (0) ಸಿರಾಜ್ ಒಂದೇ ಓವರ್‌ನಲ್ಲಿ ಪೆವಿಲಿಯನ್ ದಾರಿ ತೋರಿದರು. ಚಹಾ ವಿರಾಮದ ಬಳಿಕ ನಡೆದ ಮೊದಲ ಓವರ್‌ನಲ್ಲೇ ಸಿರಾಜ್ 2 ವಿಕೆಟ್ ಕಬಳಿಸಿ ಇಂಗ್ಲೆಂಡ್‌ಗೆ ಆಘಾತ ನೀಡಿದರು. ಇದರಿಂದ ತತ್ತರಿಸಿದ ಆತಿಥೇಯ ತಂಡಕ್ಕೆ ಆರಂಭಿಕ ರೋರಿ ಬರ್ನ್ಸ್ (49 ರನ್, 136 ಎಸೆತ, 7 ಬೌಂಡರಿ) ಹಾಗೂ ಜೋ ರೂಟ್ ಜೋಡಿ ಆಸರೆಯಾಯಿತು. ಕೇವಲ 23 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟದಲ್ಲಿದ್ದ ವೇಳೆ ಜತೆಯಾದ ಈ ಜೋಡಿ ಮಂದಗತಿ ಬ್ಯಾಟಿಂಗ್ ಮೂಲಕ 3ನೇ ವಿಕೆಟ್‌ಗೆ 84 ರನ್ ಪೇರಿಸಿತು. ಆಗ ಬರ್ನ್ಸ್ ವಿಕೆಟ್ ಕಬಳಿಸಿದ ಶಮಿ, ಇಂಗ್ಲೆಂಡ್‌ಗೆ ಮತ್ತೊಂದು ಹೊಡೆತ ನೀಡಿದರು. ಕೊನೆಯಲ್ಲಿ ಜೋ ರೂಟ್ ಜತೆಗೆ ಜಾನಿ ಬೇರ್‌ಸ್ಟೋ (6*) ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಭಾರತಕ್ಕೆ ಆಂಡರ್‌ಸನ್ ಬ್ರೇಕ್

ಶುಕ್ರವಾರ ಬೆಳಗ್ಗೆ ಆಟ ಮುಂದುವರಿಸಿದ ಭಾರತ ತಂಡಕ್ಕೆ ವೇಗಿಗಳಾದ ಜೇಮ್ಸ್ ಆಂಡರ್‌ಸನ್ ಹಾಗೂ ಒಲಿ ರಾಬಿನ್‌ಸನ್ (73ಕ್ಕೆ 2) ಬ್ರೇಕ್ ಹಾಕಿದರು. ರಾಬಿನ್‌ಸನ್ ಎಸೆದ ದಿನದಾಟದ ಮೊದಲ ಓವರ್‌ನ ಮೊದಲ ಎಸೆತದಲ್ಲಿ 2 ರನ್ ಕಸಿಯುವ ಮೂಲಕ ಕೆಎಲ್ ರಾಹುಲ್ ಬಿರುಸಿನ ಆಟದ ಸೂಚನೆ ನೀಡಿದರು. ಆದರೆ, ಮರು ಎಸೆತದಲ್ಲೇ ಶಾರ್ಟ್ ಕವರ್‌ನಲ್ಲಿದ್ದ ಸಿಬ್ಲೆಗೆ ಕ್ಯಾಚ್ ನೀಡಿದರು. ಇದರಿಂದ ಭಾರತ ತಂಡ ದಿನದ ಆರಂಭದಲ್ಲೇ ಆಘಾತ ಕಂಡಿತು. ಮೊದಲ ದಿನದಾಟದಲ್ಲೇ ಶತಕ ಪೂರೈಸಿದ್ದ ರಾಹುಲ್ ಆಘಾತ ಎದುರಿಸಿದರು. ಇದರ ಬೆನ್ನಲ್ಲೇ ಅಜಿಂಕ್ಯ ರಹಾನೆ (1) ಕೂಡ ಆಂಡರ್‌ಸನ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಜತೆಯಾದ ಎಡಗೈ ಬ್ಯಾಟ್ಸ್‌ಮನ್‌ಗಳಾದ ರಿಷಭ್ ಪಂತ್ (37ರನ್, 58 ಎಸೆತ, 5 ಬೌಂಡರಿ) ಹಾಗೂ ರವೀಂದ್ರ ಜಡೇಜಾ (40ರನ್, 120 ಎಸೆತ, 3 ಬೌಂಡರಿ) ಜೋಡಿ 6ನೇ ವಿಕೆಟ್‌ಗೆ 49 ರನ್ ಜತೆಯಾಟವಾಡಿ ತಂಡದ ಮೊತ್ತವನ್ನು 350ರ ಗಡಿಯತ್ತ ಸಾಗಿಸಿತು. ಮಾರ್ಕ್ ವುಡ್ ಈ ಜೋಡಿಯ ಅಬ್ಬರಕ್ಕೆ ಬ್ರೇಕ್ ಹಾಕಿದರು. ಬಳಿಕ ರವೀಂದ್ರ ಜಡೇಜಾ ಏಕಾಂಗಿ ನಿರ್ವಹಣೆ ತೋರಿದರು. ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ಆಂಡರ್‌ಸನ್ ಬ್ರೇಕ್ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net