

ನವದೆಹಲಿ: ಸತತ 10 ಜಯದೊಂದಿಗೆ 12 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ವಶಪಡಿಸಿಕೊಳ್ಳುವತ್ತ ಮುನ್ನುಗ್ಗಿದ ರೋಹಿತ್ ಶರ್ಮ ಪಡೆ ಆಸ್ಟ್ರೆಲಿಯಾ ಎದುರು ಆಘಾತ ಎದುರಿಸಿ 140 ಕೋಟಿ ಭಾರತೀಯರ ಕನಸು ಭಗ್ನಗೊಳಿಸಿದ ಕ್ಷಣಕ್ಕೆ ಮಂಗಳವಾರ ಒಂದು ವರ್ಷ ತುಂಬಿದೆ.
2023ರ ನವೆಂಬರ್ 19ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ತವರಿನ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಭಾರತ ಹಾಟ್ ಫೇವರಿಟ್ ಆಗಿ ಕಣಕ್ಕಿಳಿದಿತ್ತು. ಆದರೆ ಬ್ಯಾಟಿಂಗ್ ವಿಭಾಗದ ವೈಫಲ್ಯದಿಂದಾಗಿ ಭರ್ತಿ 50 ಓವರ್ಗಳಲ್ಲಿ 240 ರನ್ಗಳಿಗೆ ಸರ್ವಪತನ ಕಂಡಿತು. ನಾಯಕ ರೋಹಿತ್ ಶರ್ಮ (47) ಬಿರುಸಿನ ಆರಂಭ ಒದಗಿಸಿ ನಿರ್ಗಮಿಸಿದ ಬಳಿಕ ವಿರಾಟ್ ಕೊಹ್ಲಿ (54) ತಂಡಕ್ಕೆ ಆಸರೆಯಾದರು. ಆದರೆ ಎದುರಾಳಿ ನಾಯಕ ಪ್ಯಾಟ್ ಕಮ್ಮಿನ್ಸ್ ಎಸೆತದಲ್ಲಿ ಕೊಹ್ಲಿ ಕ್ಲೀನ್ಬೌಲ್ಡ್ ಆದ ಬಳಿಕ ಭಾರತ ದಿಢೀರ್ ಕುಸಿತ ಕಂಡಿತು. ಕನ್ನಡಿಗ ಕೆಎಲ್ ರಾಹುಲ್ 66 ರನ್ಗಳಿಗೆ 107 ಎಸೆತ ಎದುರಿಸಿ ಚಡಪಡಿಸಿದ್ದರು.
ಪ್ರತಿಯಾಗಿ ಟ್ರಾವಿಸ್ ಹೆಡ್ (137) ಭರ್ಜರಿ ಶತಕದ ಬಲದಿಂದ ಆಸೀಸ್ 43 ಓವರ್ಗಳಲ್ಲೇ 4 ವಿಕೆಟ್ಗೆ 241 ರನ್ ಪೇರಿಸಿ 6ನೇ ಬಾರಿ ಏಕದಿನ ವಿಶ್ವ ಚಾಂಪಿಯನ್ ಪಟ್ಟವೇರಿತು. 1983, 2011ರ ಬಳಿಕ ಮತ್ತೊಮ್ಮೆ ಏಕದಿನ ವಿಶ್ವಕಪ್ ಜಯಿಸುವ ಭಾರತದ ಆಸೆ ಭಗ್ನಗೊಂಡಿತ್ತು. ಪಂದ್ಯ ವೀಸಲು ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ, ಸೋಲಿನ ಬಳಿಕ ಭಾರತ ತಂಡದ ಡ್ರೆಸ್ಸಿಂಗ್ ರೂಮ್ಗೆ ತೆರಳಿ ಆಟಗಾರರಿಗೆ ಸಾಂತ್ವನ ಹೇಳಿದ್ದರು.