

ಲೀಡ್ಸ್: ಕೆಲ ಪ್ರಮುಖ ಆಟಗಾರರ ವಿದಾಯದ ಬಳಿಕ ಹೊಸ ನಾಯಕನೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲು ಭಾರತ ತಂಡ ಸಜ್ಜಾಗಿದೆ. ಶುಕ್ರವಾರದಿಂದ ನಡೆಯಲಿರುವ ಆತಿಥೇಯ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಆಂಡರ್ಸನ್-ತೆಂಡುಲ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಶುಭಾರಂಭ ಕಾಣುವುದು ಶುಭಮಾನ್ ಗಿಲ್ ಪಡೆಯ ಹಂಬಲವಾಗಿದೆ. ಸ್ಥಿತ್ಯಂತರದ ಸವಾಲಿನೊಂದಿಗೆ ಆಂಗ್ಲರ ಆಕ್ರಮಣಕಾರಿ "ಬಾಜ್ಬಾಲ್' ಕಾರ್ಯತಂತ್ರವನ್ನು ಮೊದಲ ಬಾರಿ ಅವರದೇ ನೆಲದಲ್ಲಿ ಎದುರಿಸುವ ಸತ್ವಪರೀಕ್ಷೆ ಭಾರತಕ್ಕೆ ಎದುರಾಗಲಿದೆ. ಕ್ರಿಕೆಟ್ ಜನಕರ ನಾಡಿನಲ್ಲಿ 18 ವರ್ಷಗಳ ಬಳಿಕ ಟೆಸ್ಟ್ ಸರಣಿ ಜಯಿಸುವ ಕನಸನ್ನೂ ಭಾರತದ ಯುವ-ಅನನುಭವಿಗಳ ತಂಡ ಹೊಂದಿದೆ. ಇದು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (ಡಬ್ಲ್ಯುಟಿಸಿ) 4ನೇ ಆವೃತ್ತಿಯಲ್ಲಿ ಉಭಯ ತಂಡಗಳಿಗೂ ಮೊದಲ ಸರಣಿ ಆಗಿದೆ.
ಮುಖಾಮುಖಿ: 136
ಭಾರತ: 35
ಇಂಗ್ಲೆಂಡ್: 51
ಡ್ರಾ: 50
ಇಂಗ್ಲೆಂಡ್ನಲ್ಲಿ: 67
ಭಾರತ: 9
ಇಂಗ್ಲೆಂಡ್: 36
ಡ್ರಾ: 22
ಲೀಡ್ಸ್ನಲ್ಲಿ: 7
ಭಾರತ: 2
ಇಂಗ್ಲೆಂಡ್: 4
ಡ್ರಾ: 1
ಪ್ರತಿ ದಿನದಾಟ ಹೀಗಿರಲಿದೆ:
ಮೊದಲ ಅವಧಿ: ಮಧ್ಯಾಹ್ನ 3.30-5.30
ಎರಡನೇ ಅವಧಿ: ಸಂಜೆ 6.10-8.10
ಮೂರನೇ ಅವಧಿ: ರಾತ್ರಿ 8.30-10.30
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ
ಪಂದ್ಯ ದಿನಾಂಕ ಎಲ್ಲಿ
1. ಜೂನ್ 20-24 , ಲೀಡ್ಸ್
2. ಜುಲೈ 2-6, ರ್ಬಮಿಂಗ್ಹ್ಯಾಂ
3. ಜುಲೈ 10-14, ಲಾರ್ಡ್ಸ್
4. ಜುಲೈ 23-27, ಮ್ಯಾಂಚೆಸ್ಟರ್
5. ಜು.31-ಆ.4, ಓವಲ್
*ಎಲ್ಲ ಪಂದ್ಯಗಳು ಆರಂಭ: ಮಧ್ಯಾಹ್ನ 3.30
*ನೇರಪ್ರಸಾರ: ಸೋನಿ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್
ಪಿಚ್ ರಿಪೋರ್ಟ್
ಹೆಡಿಂಗ್ಲೆ ಮೈದಾನದ ಹಸಿರು ಪಿಚ್ ಮೊದಲ ದಿನ ವೇಗದ ಬೌಲರ್ಗಳಿಗೆ ಹೆಚ್ಚಿನ ನೆರವು ನೀಡಿದರೂ, ನಂತರದಲ್ಲಿ ಬ್ಯಾಟಿಂಗ್ಗೆ ಸಹಕಾರಿಯಾಗಿರಲಿದೆ ಎಂದು ಪಿಚ್ ಕ್ಯೂರೇಟರ್ ರಿಚರ್ಡ್ ರಾಬಿನ್ಸನ್ ತಿಳಿಸಿದ್ದಾರೆ. ಇದು ಆಂಗ್ಲರ ಬಾಜ್ಬಾಲ್ ಆಕ್ರಮಣಕಾರಿ ಕಾರ್ಯತಂತ್ರಕ್ಕೆ ಅನುಕೂಲಕರವಾದ ಪಿಚ್ ಎನಿಸಿದೆ. ಹೀಗಾಗಿ ಭಾರತೀಯ ಬ್ಯಾಟಿಂಗ್ ವಿಭಾಗವೂ ಈ ಪಿಚ್ಗೆ ಸಾಧ್ಯವಾದಷ್ಟು ಬೇಗನೆ ಹೊಂದಿಕೊಳ್ಳಬೇಕಾದ ಅಗತ್ಯವಿದೆ. ವಾರಾಂತ್ಯದಲ್ಲಿ ಲೀಡ್ಸ್ ವಾತಾವರಣ 30 ಡಿಗ್ರಿವರೆಗೂ ಉಷ್ಣಾಂಶ ಹೊಂದಿರಲಿದ್ದು, ದಿನಗಳೆದಂತೆ ಪಿಚ್ ತೇವಾಂಶ ಕಳೆದುಕೊಳ್ಳಲಿದೆ. ಹೆಡಿಂಗ್ಲೆಯಲ್ಲಿ ಸಾಮಾನ್ಯವಾಗಿ ಆಂಗ್ಲರ ಬೇಸಗೆ ಋತುವಿನ 3ನೇ ಟೆಸ್ಟ್ ನಡೆಯುತ್ತಿತ್ತು. ಆದರೆ ಈ ಬಾರಿ ಇಲ್ಲಿ ಮೊದಲ ಟೆಸ್ಟ್ ಪಂದ್ಯವೇ ನಿಗದಿಯಾಗಿದ್ದು, ಲೀಡ್ಸ್ನಲ್ಲಿ ಮಳೆಯೂ ಸುರಿದಿಲ್ಲ. ಹೀಗಾಗಿ ಈ ಸಲದ ಪಿಚ್ ಸ್ವಲ್ಪ ಭಿನ್ನವಾಗಿ ವರ್ತಿಸಿದರೂ ಅಚ್ಚರಿ ಇಲ್ಲ.
ಬುಮ್ರಾ&ರೂಟ್ ಮುಖಾಮುಖಿ ನಿರ್ಣಾಯಕ
ಅನುಭವಿ ಬ್ಯಾಟರ್ ಜೋ ರೂಟ್ ಮತ್ತು ವೇಗಿ ಜಸ್ಪ್ರೀತ್ ಬುಮ್ರಾ ನಡುವಿನ ಮುಖಾಮುಖಿ ಸರಣಿಯ ಲಿತಾಂಶ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಇದೆ. ರೂಟ್ ಭಾರತ ವಿರುದ್ಧ ಆಡಿದ 30 ಟೆಸ್ಟ್ಗಳಲ್ಲಿ 10 ಶತಕಗಳ ಸಹಿತ ಸರ್ವಾಧಿಕ 2,846 ರನ್ ಬಾರಿಸಿದ ದಾಖಲೆ ಹೊಂದಿದ್ದಾರೆ. ಅಲ್ಲದೆ ಈ ಸರಣಿಯಲ್ಲಿ ಭಾರತ ವಿರುದ್ಧ 3 ಸಾವಿರ ರನ್ ಸಿಡಿಸಿದ ಮೊದಲಿಗರೆನಿಸುವ ಹಂಬಲದಲ್ಲಿದ್ದಾರೆ. ಆದರೆ ಬುಮ್ರಾ, ಟೆಸ್ಟ್ನಲ್ಲಿ ಇದುವರೆಗೆ 9 ಬಾರಿ ರೂಟ್ ವಿಕೆಟ್ ಕಿತ್ತ ಮೇಲುಗೈ ಹೊಂದಿದ್ದಾರೆ. ಹೀಗಾಗಿ ಈ ಸಲವೂ ರೂಟ್ರನ್ನು ನಿಯಂತ್ರಿಸುವಲ್ಲಿ ಬುಮ್ರಾ ಎಷ್ಟರ ಮಟ್ಟಿಗೆ ಯಶಸ್ವಿಯಾಗುವರು ಎಂಬುದು ನಿರ್ಣಾಯಕವಾಗಲಿದೆ.