ICC Champions Trophy: ಭಾರತದ ನೆಚ್ಚಿನ ಐಸಿಸಿ ಟೂರ್ನಿ ಚಾಂಪಿಯನ್ಸ್ ಟ್ರೋಫಿ; ಇಲ್ಲಿವೆ ಅದರ ವಿಶೇಷತೆಗಳು...

web icc champs fightsws
Published on

ಬೆಂಗಳೂರು: ವಿಶ್ವದ ಅಗ್ರ 8 ತಂಡಗಳ ರೋಚಕ ಕಾದಾಟಕ್ಕೆ ವೇದಿಕೆ ಎನಿಸಿರುವ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಏಕದಿನ ಕ್ರಿಕೆಟ್​ ಟೂರ್ನಿಗೆ ಪಾಕಿಸ್ತಾನ ಮತ್ತು ದುಬೈನಲ್ಲಿ ವೇದಿಕೆ ಸಜ್ಜಾಗಿದೆ. ಮಿನಿ ವಿಶ್ವಕಪ್​ ಖ್ಯಾತಿಯ ಟೂರ್ನಿ 8 ವರ್ಷಗಳ ಬಳಿಕ ಮರುಆಯೋಜನೆಗೊಂಡಿದೆ. ಬುಧವಾರ ಕರಾಚಿಯಲ್ಲಿ ನಡೆಯಲಿರುವ ಆತಿಥೇಯ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್​ ನಡುವಿನ ಪಂದ್ಯದೊಂದಿಗೆ ಟೂರ್ನಿಗೆ ಚಾಲನೆ ದೊರೆಯಲಿದೆ. ಟೂರ್ನಿಯ ಕೆಲ ವಿಶೇಷತೆಗಳ ಸಂಪ್ತ ಮೆಲುಕು ಇಲ್ಲಿದೆ...

ಭಾರತಕ್ಕೆ ನೆಚ್ಚಿನ ಟೂರ್ನಿ

ಐಸಿಸಿ ಟೂರ್ನಿಗಳ ಪೈಕಿ ಭಾರತಕ್ಕೆ ಇದು ಅತ್ಯಂತ ನೆಚ್ಚಿನ ಟೂರ್ನಿ ಎನಿಸಿದೆ. ಈ ಹಿಂದಿನ 8 ಆವೃತ್ತಿಗಳಲ್ಲಿ 4ರಲ್ಲಿ ಫೈನಲ್​ಗೇರಿರುವ ಭಾರತ 2 ಬಾರಿ (2002, 2013) ಪ್ರಶಸ್ತಿ ಜಯಿಸಿದೆ. 2000ದ ಫೈನಲ್​ನಲ್ಲಿ ನ್ಯೂಜಿಲೆಂಡ್​ ಮತ್ತು 2017ರ ಫೈನಲ್​ನಲ್ಲಿ ಪಾಕ್​ ವಿರುದ್ಧ ಮುಗ್ಗರಿಸಿತ್ತು. 2004ರಿಂದ 2009ರ ನಡುವೆ ಮಾತ್ರ ಭಾರತ ಗ್ರೂಪ್​ ಹಂತದಲ್ಲೇ ನಿರ್ಗಮಿಸಿತ್ತು. ಟೂರ್ನಿಯಲ್ಲಿ ಇದುವರೆಗೆ ಆಡಿರುವ ತಂಡಗಳ ಪೈಕಿ ಭಾರತ ಗರಿಷ್ಠ 69.23 ಗೆಲವಿನ ಸರಾಸರಿ (29 ಪಂದ್ಯ, 18 ಜಯ, 8 ಸೋಲು, 3 ರದ್ದು) ಹೊಂದಿದೆ.

ಭಾರತೀಯನ ಕನಸಿನ ಕೂಸು

ಆಧುನಿಕ ಭಾರತೀಯ ಕ್ರಿಕೆಟ್​ ಏಳ್ಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಜಗಮೋಹನ್​ ದಾಲ್ಮಿಯಾ ಐಸಿಸಿ ಅಧ್ಯಕ್ಷರಾಗಿದ್ದ ಸಮಯದಲ್ಲಿ (1997&2000) ಜನ್ಮತಳೆದ ಟೂರ್ನಿ ಇದಾಗಿದೆ. ಏಕದಿನ ವಿಶ್ವಕಪ್​ ಪ್ರತಿ 4 ವರ್ಷಕ್ಕೊಮ್ಮೆ ನಡೆಯುವ ಕಾರಣ ಅದರ ನಡುವೆಯೂ ಐಸಿಸಿಗೆ ಆದಾಯ ತರುವ ಮತ್ತು ಕ್ರಿಕೆಟ್​ ಪ್ರೇಮಿಗಳಿಗೂ ಮನರಂಜನೆ ಒದಗಿಸುವ ಸಲುವಾಗಿ ಟೂರ್ನಿ ಆರಂಭಿಸಿದ್ದರು. ಅಲ್ಲದೆ ಆಗಿನ ಟೆಸ್ಟ್​ ಮಾನ್ಯತೆಯ ದೇಶಗಳಿಗೂ ಕ್ರಿಕೆಟ್​ ಜನಪ್ರಿಯತೆ ವಿಸ್ತರಿಸುವ ಮತ್ತು ಆರ್ಥಿಕ ಬಲ ಒದಗಿಸುವ ದೃಷ್ಟಿಯಿಂದ ಬಾಂಗ್ಲಾದೇಶಕ್ಕೆ 1998ರ ಚೊಚ್ಚಲ ಆವೃತ್ತಿಯ ಆತಿಥ್ಯ ನೀಡಲಾಗಿತ್ತು. ಆಗ ಇದನ್ನು ವಿಲ್ಸ್​ ಇಂಟರ್​ನ್ಯಾಷನಲ್​ ಕಪ್​ ಎಂದು ಕರೆಯಲಾಗಿತ್ತು. 2000ದ 2ನೇ ಆವೃತ್ತಿಗೆ ಇದು ಐಸಿಸಿ ನಾಕೌಟ್​ ಟೂರ್ನಿ ಆಗಿತ್ತು. 2002ರ 3ನೇ ಆವೃತ್ತಿಗೆ ಚಾಂಪಿಯನ್ಸ್​ ಟ್ರೋಫಿ ಹೆಸರು ಪಡೆದುಕೊಂಡಿತ್ತು.

ಇಬ್ಬರು ಮಾಜಿ ಚಾಂಪಿಯನ್​ಗಳಿಲ್ಲ!

ಈ ಬಾರಿ 2 ಪ್ರಮುಖ ಮಾಜಿ ಚಾಂಪಿಯನ್​ ತಂಡಗಳು ಟೂರ್ನಿಗೆ ಅರ್ಹತೆ ಪಡೆಯಲು ವಿಲವಾಗಿದೆ. 2004ರ ಚಾಂಪಿಯನ್​ ವೆಸ್ಟ್​ ಇಂಡೀಸ್​ ಸತತ 2ನೇ ಬಾರಿಗೆ ಟೂರ್ನಿ ಅರ್ಹತೆ ತಪ್ಪಿಸಿಕೊಂಡಿದೆ. ಇನ್ನು 2002ರ ಜಂಟಿ ಚಾಂಪಿಯನ್​ ಶ್ರೀಲಂಕಾ, 2023ರ ಏಕದಿನ ವಿಶ್ವಕಪ್​ನಲ್ಲಿ ತೋರಿದ ಕಳಪೆ ನಿರ್ವಹಣೆಯಿಂದಾಗಿ ಟೂರ್ನಿಗೆ ಅರ್ಹತೆ ಪಡೆದಿಲ್ಲ. 2023ರ ವಿಶ್ವಕಪ್​ನ ಅಗ್ರ 8 ತಂಡಗಳಷ್ಟೇ ಈ ಟೂರ್ನಿಯಲ್ಲಿ ಆಡಲಿವೆ.

ಆಫ್ರಿಕಾ, ಕಿವೀಸ್​ಗೂ ಒಲಿದಿರುವ ಪ್ರಶಸ್ತಿ

ಸಾಮಾನ್ಯವಾಗಿ ಐಸಿಸಿ ಟೂರ್ನಿಗಳೆಂದರೆ ದಣ ಆಫ್ರಿಕಾ, ನ್ಯೂಜಿಲೆಂಡ್​ಗೆ ಕೈಕೊಡುವುದೇ ಹೆಚ್ಚು. ಆದರೆ ಚಾಂಪಿಯನ್ಸ್​ ಟ್ರೋಫಿಯ ಮೊದಲ 2 ಆವೃತ್ತಿಗಳಲ್ಲಿ ಇವೇ 2 ತಂಡಗಳು ಪ್ರಶಸ್ತಿ ಎತ್ತಿದ್ದವು ಎಂಬುದು ಗಮನಾರ್ಹ. ದಣ ಆಫ್ರಿಕಾ (24 ಪಂದ್ಯ, 12 ಜಯ, 11 ಸೋಲು, 1 ಟೈ) ಮತ್ತು ನ್ಯೂಜಿಲೆಂಡ್​ (24 ಪಂದ್ಯ, 12 ಜಯ, 10 ಸೋಲು, 2 ರದ್ದು) ಶೇ. 50ಕ್ಕಿಂತ ಹೆಚ್ಚಿನ ಗೆಲುವಿನ ಸರಾಸರಿ ಹೊಂದಿವೆ. 2 ಬಾರಿಯ ರನ್ನರ್​ಅಪ್​ ಇಂಗ್ಲೆಂಡ್​ (2004, 2013) ಕೂಡ ಟೂರ್ನಿಯಲ್ಲಿ ಶೇ. 50ಕ್ಕಿಂತ (25 ಪಂದ್ಯ, 14 ಜಯ, 11 ಸೋಲು) ಗೆಲುವಿನ ಸರಾಸರಿ ಹೊಂದಿದೆ.

ಆಸೀಸ್​ ಸತತ 2 ಬಾರಿ ಗೆದ್ದ ಸಾಧನೆ

ಸಾಮಾನ್ಯವಾಗಿ ಐಸಿಸಿ ಟೂರ್ನಿಗಳೆಂದರೆ ಆಸೀಸ್​ ಪ್ರಾಬಲ್ಯ ಇದ್ದೇ ಇರುತ್ತದೆ. ಚಾಂಪಿಯನ್ಸ್​ ಟ್ರೋಫಿಯಲ್ಲೂ 2006 ಹಾಗೂ 2009ರಲ್ಲಿ ಸತತ 2 ಬಾರಿ ಪ್ರಶಸ್ತಿ ಜಯಿಸಿ ಆಸೀಸ್​ ಬೀಗಿತ್ತು. ಈ ಮೂಲಕ ಚಾಂಪಿಯನ್ಸ್​ ಟ್ರೋಫಿಯನ್ನು ಸತತ 2 ಬಾರಿ ಗೆದ್ದ ಏಕೈಕ ತಂಡವೆನಿಸಿದೆ. ಆದರೆ ಟೂರ್ನಿಯ ಕೊನೇ 2 ಆವೃತ್ತಿಗಳಲ್ಲಿ (2013, 2017) ಕನಿಷ್ಠ ಒಂದು ಪಂದ್ಯವನ್ನೂ ಗೆದ್ದಿರದ ಆಸೀಸ್​, ಲೀಗ್​ ಹಂತದಲ್ಲೇ ನಿರ್ಗಮಿಸಿತ್ತು. ಈ ಸಲವೂ ಪ್ರಮುಖ ಆಟಗಾರರ ಗೈರಿನ ಹಿನ್ನಡೆಯನ್ನು ಆಸೀಸ್​ ಹೊಂದಿದೆ.

29 ವರ್ಷಗಳ ಬಳಿಕ ಪಾಕ್​ನಲ್ಲಿ ಐಸಿಸಿ ಟೂರ್ನಿ

ಪಾಕಿಸ್ತಾನ ಬರೋಬ್ಬರಿ 29 ವರ್ಷಗಳ ಬಳಿಕ ಆತಿಥ್ಯ ವಹಿಸಿಕೊಳ್ಳುತ್ತಿರುವ ಐಸಿಸಿ ಟೂರ್ನಿ ಇದಾಗಿದೆ. 1996ರ ಏಕದಿನ ವಿಶ್ವಕಪ್​ಗೆ ಕೊನೆಯದಾಗಿ ಪಾಕ್​ ಜಂಟಿ ಆತಿಥ್ಯ ವಹಿಸಿತ್ತು. 2011ರ ಏಕದಿನ ವಿಶ್ವಕಪ್​ಗೂ ಪಾಕ್​ ಜಂಟಿ ಆತಿಥ್ಯ ವಹಿಸಬೇಕಿತ್ತಾದರೂ, 2008ರಲ್ಲಿ ಲಂಕಾ ಬಸ್​ ಮೇಲೆ ಉಗ್ರರ ದಾಳಿ ನಡೆದ ಬಳಿಕ ಆತಿಥ್ಯ ಕಳೆದುಕೊಂಡಿತ್ತು. ಈ ಬಾರಿಯೂ ಭಾರತ ಭದ್ರತಾ ಕಾರಣಗಳಿಂದಾಗಿ ಪಾಕಿಸ್ತಾನಕ್ಕೆ ತೆರಳುತ್ತಿಲ್ಲ. ಹೀಗಾಗಿ ಹೈಬ್ರಿಡ್​ ಮಾದರಿಯಲ್ಲಿ ಟೂರ್ನಿ ನಡೆಸಲಾಗುತ್ತಿದ್ದು, ಭಾರತ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಭಾರತ ಫೈನಲ್​ಗೇರಿದರೆ ದುಬೈನಲ್ಲೇ ಪ್ರಶಸ್ತಿ ಕದನವೂ ನಡೆಯಲಿದೆ.

ಪಾಕಿಸ್ತಾನ ಹಾಲಿ ಚಾಂಪಿಯನ್​

ಟೂರ್ನಿಯ ಮೊದಲ 7 ಆವೃತ್ತಿಗಳಲ್ಲಿ ಫೈನಲ್​ ಪ್ರವೇಶಿಸಲು ವಿಫಲವಾಗಿದ್ದ ಪಾಕಿಸ್ತಾನ ತಂಡ 2017ರ ಕೊನೇ ಆವೃತ್ತಿಯ ಫೈನಲ್​ನಲ್ಲಿ ಭಾರತವನ್ನು ಸೋಲಿಸಿ ಚೊಚ್ಚಲ ಪ್ರಶಸ್ತಿ ಗೆದ್ದಿತ್ತು. ಇದರಿಂದಾಗಿ ಪಾಕಿಸ್ತಾನ ತಂಡ ಈ ಬಾರಿ ತವರಿನಲ್ಲಿ ಹಾಲಿ ಚಾಂಪಿಯನ್​ ತಂಡವಾಗಿ ಅಭಿಯಾನ ಆರಂಭಿಸುವ ಅವಕಾಶ ಪಡೆದಿದೆ.

ಜಂಟಿ ಚಾಂಪಿಯನ್ಸ್​

ಜಂಟಿ ವಿಜೇತರನ್ನು ಕಂಡಿರುವ ಏಕೈಕ ಐಸಿಸಿ ಟೂರ್ನಿ ಇದಾಗಿದೆ. 2002ರಲ್ಲಿ ಭಾರತ-ಲಂಕಾ ಜಂಟಿ ಚಾಂಪಿಯನ್​ ಆಗಿತ್ತು. ಫೈನಲ್​ ಪಂದ್ಯದ ದಿನ ಮತ್ತು ಅದರ ಮೀಸಲು ದಿನವೂ ಮಳೆಯಿಂದಾಗಿ ಸ್ಪಷ್ಟ ಲಿತಾಂಶ ಹೊರಬಿದ್ದಿರಲಿಲ್ಲ. 2 ದಿನವೂ ಲಂಕಾ ಮೊದಲು ಬ್ಯಾಟಿಂಗ್​ ಮಾಡಿ 5 ವಿಕೆಟ್​ 244 ಮತ್ತು 7 ವಿಕೆಟ್​ಗೆ 222 ರನ್​ ಗಳಿಸಿತ್ತು. ಆದರೆ ಮಳೆ ಭಾರತದ ಚೇಸಿಂಗ್​ಗೆ ಅಡ್ಡಿಪಡಿಸಿತ್ತು. ಇದರಿಂದ ಅನಿವಾರ್ಯವಾಗಿ ಐಸಿಸಿ ಜಂಟಿ ಚಾಂಪಿಯನ್ಸ್​ ಘೋಷಿಸಿತ್ತು.

8 ಆವೃತ್ತಿಗಳಲ್ಲಿ 7 ವಿಜೇತರು

ವಿಶ್ವದ ಪ್ರಮುಖ 8 ತಂಡಗಳು ಆಡುವ ಟೂರ್ನಿ ಅತ್ಯಂತ ಜಿದ್ದಾಜಿದ್ದಿನ ಹೋರಾಟಕ್ಕೂ ಸಾಯಾಗಿದೆ. ಹಿಂದಿನ 8 ಆವೃತ್ತಿಗಳಲ್ಲಿ 7 ತಂಡಗಳು ಪ್ರಶಸ್ತಿಗೆ ಮುತ್ತಿಕ್ಕಿರುವುದೇ ಇದಕ್ಕೆ ಪುಷ್ಠಿ. ಟೂರ್ನಿಯ ನಿಕಟ ಸ್ಪರ್ಧಾತ್ಮಕತೆ ಮತ್ತು ಪ್ರಾಬಲ್ಯ ಮೆರೆಯುವುದು ಸುಲಭವಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಪಾಕ್​ ಎದುರು ಭಾರತಕ್ಕೆ ಹಿನ್ನಡೆ

ಏಕದಿನ ವಿಶ್ವಕಪ್​ನಲ್ಲಿ ಪಾಕಿಸ್ತಾನ ವಿರುದ್ಧ ಅಜೇಯ ದಾಖಲೆ ಹೊಂದಿರುವ ಭಾರತ, ಟಿ20 ವಿಶ್ವಕಪ್​ನಲ್ಲೂ ಬಲಿಷ್ಠವಾದ ದಾಖಲೆ ಹೊಂದಿದೆ. ಆದರೆ, ಚಾಂಪಿಯನ್ಸ್​ ಟ್ರೋಫಿಯ ಒಟ್ಟಾರೆ ಯಶಸ್ಸಿನ ನಡುವೆಯೂ ಭಾರತ, ಪಾಕ್​ ಎದುರು ಹಿನ್ನಡೆ ಅನುಭವಿಸಿದೆ. ಚಾಂಪಿಯನ್ಸ್​ ಟ್ರೋಫಿಯಲ್ಲಿ ಪಾಕ್​ ವಿರುದ್ಧ ಆಡಿರುವ 5 ಪಂದ್ಯಗಳಲ್ಲಿ 3ರಲ್ಲಿ ಸೋತು, 2 ಪಂದ್ಯದಲ್ಲಷ್ಟೆ ಜಯ ಸಾಧಿಸಿದೆ. ಅದರಲ್ಲೂ 2017ರ ಫೈನಲ್​ ಸೋಲು ಭಾರತಕ್ಕೆ ದೊಡ್ಡ ಮುಖಭಂಗವಾಗಿತ್ತು.

ಚಾಂಪಿಯನ್ಸ್​

1998: ದಣ ಆಫ್ರಿಕಾ

2000: ನ್ಯೂಜಿಲೆಂಡ್​

2002: ಭಾರತ-ಶ್ರೀಲಂಕಾ

2004: ವೆಸ್ಟ್​ ಇಂಡೀಸ್​

2006: ಆಸ್ಟ್ರೆಲಿಯಾ

2009: ಆಸ್ಟ್ರೆಲಿಯಾ

2013: ಭಾರತ

2017: ಪಾಕಿಸ್ತಾನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net