

ಲಂಡನ್: ಕಳೆದ ಆಸ್ಟ್ರೇಲಿಯಾ ಪ್ರವಾಸದ ಅಡಿಲೇಡ್ ಟೆಸ್ಟ್‌ನಲ್ಲಿ ಕೇವಲ 36 ರನ್‌ಗೆ ಆಲೌಟ್ ಆದ ಬಳಿಕ ಅಮೋಘ ರೀತಿಯಲ್ಲಿ ಪುಟಿದೆದ್ದು ಐತಿಹಾಸಿಕ ಸರಣಿ ಗೆಲುವು ಸಾಧಿಸಿದ್ದ ಟೀಮ್ ಇಂಡಿಯಾ, ಹಾಲಿ ಇಂಗ್ಲೆಂಡ್ ಪ್ರವಾಸದಲ್ಲೂ ಲೀಡ್ಸ್ ಟೆಸ್ಟ್‌ನಲ್ಲಿ ಕೇವಲ 78 ರನ್‌ಗೆ ಆಲೌಟ್ ಆಗಿ ಇನಿಂಗ್ಸ್ ಸೋಲು ಕಂಡ ಬಳಿಕ ಅದೇ ರೀತಿ ಆತಿಥೇಯರಿಗೆ ತಿರುಗೇಟು ನೀಡುವ ನಿರೀಕ್ಷೆ ಭಾರತೀಯ ಕ್ರಿಕೆಟ್ ಪ್ರೇಮಿಗಳದ್ದಾಗಿದೆ. ಗುರುವಾರದಿಂದ ಓವಲ್ ಮೈದಾನದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಗೆಲುವಿನ ಹಾದಿಗೆ ಮರಳುವ ಹಂಬಲದಲ್ಲಿದೆ.
ಲಾರ್ಡ್ಸ್‌ನಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ ಬಳಿಕ ಲೀಡ್ಸ್‌ನಲ್ಲಿ ಭಾರತ ತೋರಿದ ಕೆಟ್ಟ ನಿರ್ವಹಣೆ ಸಾಕಷ್ಟು ನಿರಾಸೆ ಮೂಡಿಸಿತ್ತು. ಮೊದಲ ದಿನವೇ ಅಲ್ಪಮೊತ್ತಕ್ಕೆ ಕುಸಿದರೂ ಪಂದ್ಯದ 3ನೇ ದಿನ ಭಾರತ ದಿಟ್ಟ ಪ್ರತಿರೋಧ ತೋರಿತ್ತು. ಆದರೆ 4ನೇ ದಿನ ಮತ್ತೆ ದಿಢೀರ್ ಕುಸಿದು ಸರಣಿಯಲ್ಲಿ 1-1 ಸಮಬಲ ಸಾಧಿಸಲು ಆಂಗ್ಲರಿಗೆ ಅವಕಾಶ ಬಿಟ್ಟುಕೊಟ್ಟಿತ್ತು. ಓವಲ್‌ನಲ್ಲಿ ಭಾರತ ತಂಡ ಆಡುವ ಬಳಗದಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳುವ ನಿರೀಕ್ಷೆ ಇದ್ದು, ಪ್ರಮುಖವಾಗಿ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಸರಣಿಯಲ್ಲಿ ಮೊದಲ ಬಾರಿ ಕಣಕ್ಕಿಳಿಯುವುದು ಬಹುತೇಕ ಖಚಿತವೆನಿಸಿದೆ. ಹ್ಯಾಟ್ರಿಕ್ ಶತಕ ಸಹಿತ ಸರಣಿಯಲ್ಲಿ 500ಕ್ಕೂ ಅಧಿಕ ರನ್ ಸಿಡಿಸಿರುವ ರೂಟ್ ಮತ್ತು ಅಶ್ವಿನ್ ಮುಖಾಮುಖಿಯೂ ಕುತೂಹಲ ಕೆರಳಿಸಿದೆ.
ಭಾರತ ತಂಡ ಹೆಚ್ಚುವರಿ ಬ್ಯಾಟ್ಸ್‌ಮನ್ ಆಡಿಸಬೇಕೆಂದು ದಿಗ್ಗಜ ಸುನೀಲ್ ಗಾವಸ್ಕರ್ ಸಲಹೆ ನೀಡಿದ್ದರೂ, ಕೊಹ್ಲಿ-ರವಿಶಾಸ್ತ್ರಿ ಜೋಡಿ ಐವರು ಬೌಲರ್‌ಗಳ ಯೋಜನೆಯನ್ನೇ ಮುಂದುವರಿಸುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ 4 ವೇಗಿಗಳು ಮತ್ತು ಓರ್ವ ಸ್ಪಿನ್ನರ್ ಸಂಯೋಜನೆಯೂ ಉಳಿಯಲಿದೆ ಎನ್ನಲಾಗಿದೆ.
ಆರಂಭ: ಮಧ್ಯಾಹ್ನ 3.30
ನೇರಪ್ರಸಾರ: ಸೋನಿ ಸಿಕ್ಸ್
ರಹಾನೆ ಫಾರ್ಮ್ ಕಳವಳ
ಉಪನಾಯಕ ಅಜಿಂಕ್ಯ ರಹಾನೆ ಅವರೇ ಈಗ ಆಡುವ ಬಳಗದಿಂದ ಹೊರಬೀಳುವ ಅಪಾಯದಲ್ಲಿದ್ದಾರೆ. ಚೇತೇಶ್ವರ ಪೂಜಾರ ಲೀಡ್ಸ್‌ನಲ್ಲಿ ಬಾರಿಸಿದ 91 ರನ್‌ನಿಂದ ಸದ್ಯಕ್ಕೆ ಸ್ಥಾನ ಉಳಿಸಿಕೊಂಡಿದ್ದಾರೆ. ಆದರೆ ರಹಾನೆ ಲಾರ್ಡ್ಸ್‌ನಲ್ಲಿ ಅರ್ಧಶತಕ ಬಾರಿಸಿದ್ದರೂ, ಕಳೆದ 2 ವರ್ಷಗಳಿಂದ ತೋರುತ್ತಿರುವ ಅಸ್ಥಿರ ನಿರ್ವಹಣೆ ತಂಡಕ್ಕೆ ತಲೆನೋವಾಗಿದೆ. ರಹಾನೆ ಮತ್ತೊಂದು ಅವಕಾಶ ಪಡೆಯುವ ಸಾಧ್ಯತೆ ಇದ್ದರೂ, ಅವರ ಸ್ಥಾನ ತುಂಬಲು ಹನುಮ ವಿಹಾರಿ ಮತ್ತು ಸೂರ್ಯಕುಮಾರ್ ಯಾದವ್ ಸರದಿಯಲ್ಲಿ ನಿಂತಿರುವುದು ಸ್ಪಷ್ಟ. ಆಫ್ ಸ್ಪಿನ್ ಬೌಲಿಂಗ್ ಕೂಡ ಮಾಡಬಲ್ಲ ವಿಹಾರಿ, ರಹಾನೆ ಸ್ಥಾನ ತುಂಬಲು ಫೇವರಿಟ್ ಕೂಡ ಆಗಿದ್ದಾರೆ.
ಟೀಮ್ ನ್ಯೂಸ್
ಭಾರತ: ಲಾರ್ಡ್ಸ್‌ನಲ್ಲಿ ಗೆದ್ದ ಬಳಗವನ್ನೇ ಉಳಿಸಿಕೊಂಡರೂ ಲೀಡ್ಸ್‌ನಲ್ಲಿ ತಂಡ ಲಯ ತಪ್ಪಿತ್ತು. ಹೀಗಾಗಿ ತಂಡದಲ್ಲಿ ಈಗ ಬದಲಾವಣೆ ಅನಿವಾರ‌್ಯವೆನಿಸಿದೆ. ರವೀಂದ್ರ ಜಡೇಜಾ 7ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಉಪಯುಕ್ತ ಕೊಡುಗೆ ನೀಡಿದ್ದರೂ, ಸ್ಪಿನ್ನರ್ ಆಗಿ ವಿಫಲರಾಗಿದ್ದಾರೆ. 3 ಪಂದ್ಯಗಳಲ್ಲಿ ಕೇವಲ 2 ವಿಕೆಟ್ ಗಳಿಸಿರುವ ಜಡೇಜಾ ಸ್ಥಾನದಲ್ಲಿ ಅಶ್ವಿನ್ ಆಡುವ ನಿರೀಕ್ಷೆ ಇದೆ. ಓವಲ್ ಪಿಚ್ ಸಾಂಪ್ರದಾಯಿಕವಾಗಿ ಸ್ಪಿನ್ ಸ್ನೇಹಿಯಾಗಿರುವುದು ಕೂಡ ಅಶ್ವಿನ್ ಸೇರ್ಪಡೆಗೆ ಹೆಚ್ಚಿನ ಒಲವು ತುಂಬಿದೆ. ವೇಗಿ ಇಶಾಂತ್ ಶರ್ಮ ಬದಲಿಗೆ ಶಾರ್ದೂಲ್ ಠಾಕೂರ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಸರಣಿಯಲ್ಲಿ 100ಕ್ಕೂ ಅಧಿಕ ಓವರ್ ಎಸೆದಿರುವ ಜಸ್‌ಪ್ರೀತ್ ಬುಮ್ರಾ ಅಥವಾ ಮೊಹಮದ್ ಶಮಿಗೆ ಕಾರ್ಯದೊತ್ತಡ ತಗ್ಗಿಸಲು ವಿಶ್ರಾಂತಿ ನೀಡಿದರೆ, ಕನ್ನಡಿಗ ಪ್ರಸಿದ್ಧಕೃಷ್ಣ ಕೂಡ ಕಣಕ್ಕಿಳಿಯಬಹುದು.
ಇಂಗ್ಲೆಂಡ್: ಲೀಡ್ಸ್ ಗೆಲುವಿನ ನಡುವೆಯೂ ಇಂಗ್ಲೆಂಡ್ ತಂಡವೂ ಕೆಲ ಬದಲಾವಣೆಗಳನ್ನು ಕಾಣಲಿದೆ. ಫಿಟ್ ಆಗಿರುವ ವೇಗಿ ಮಾರ್ಕ್ ವುಡ್ ಮರಳಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಕಾರ್ಯದೊತ್ತಡ ಮ್ಯಾನೇಜ್‌ಮೆಂಟ್‌ಗಾಗಿ ಹಿರಿಯ ವೇಗಿ ಜೇಮ್ಸ್ ಆಂಡರ್‌ಸನ್‌ಗೆ ವಿಶ್ರಾಂತಿ ನೀಡಿ ಕ್ರಿಸ್ ವೋಕ್ಸ್ ಆಡಿಸುವ ಸಾಧ್ಯತೆ ಇದೆ. 2ನೇ ಮಗುವಿನ ನಿರೀಕ್ಷೆಯಿಂದ ಪಂದ್ಯದಿಂದ ಹೊರಗುಳಿಯಲಿರುವ ಜೋಸ್ ಬಟ್ಲರ್ ಬದಲಿಗೆ ಜಾನಿ ಬೇರ್‌ಸ್ಟೋ ವಿಕೆಟ್ ಕೀಪಿಂಗ್ ನಿರ್ವಹಿಸಲಿದ್ದಾರೆ. ಬಟ್ಲರ್ ಗೈರಿನಲ್ಲಿ ಮೊಯಿನ್ ಅಲಿ ತಂಡದ ಉಪನಾಯಕರಾಗಿ ಬಡ್ತಿ ಪಡೆದಿದ್ದಾರೆ.
6
13: ಓವಲ್‌ನಲ್ಲಿ ಭಾರತ ಇದುವರೆಗೆ 13 ಟೆಸ್ಟ್ ಆಡಿದ್ದು, 1ರಲ್ಲಿ ಗೆದ್ದು, 5ರಲ್ಲಿ ಸೋತಿದೆ. 7 ಟೆಸ್ಟ್ ಡ್ರಾಗೊಂಡಿದೆ. 1971ರಲ್ಲಿ ಆಡಿದ ಓವಲ್ ಟೆಸ್ಟ್‌ನಲ್ಲಿ ಜಯಿಸಿದ್ದ ಭಾರತ, ಇಲ್ಲಿ ಆಡಿದ ಕೊನೇ ಮೂರೂ (2011, 2014, 2018) ಟೆಸ್ಟ್‌ಗಳಲ್ಲಿ ಸೋಲು ಕಂಡಿದೆ.