

ನವದೆಹಲಿ: ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿ 1.10 ಕೋಟಿ ರೂಪಾಯಿಗೆ ಬಿಕರಿಯಾಗುವ ಮೂಲಕ ಟೂರ್ನಿಯ ಇತಿಹಾಸದಲ್ಲೇ ಕೋಟ್ಯಧಿಪತಿಯಾದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ (Vaibhav Suryavanshi) ಕ್ರೀಡಾ ಲೋಕದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ.
ಈಚೆಗೆ ಮುಕ್ತಾಯಗೊಂಡ ಅಂಡರ್-19 ಏಷ್ಯಾಕಪ್‌ನಲ್ಲಿ ಭಾರತದ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ವೈಭವ್ (Vaibhav Suryavanshi) ತನ್ನ ಹೊಡಿಬಡಿ ಆಟದ ಮೂಲಕ ಎದುರಾಳಿಗಳ ನಿದ್ದೆಗಡಿಸಿದ್ದರು. ಇದೀಗ ಈ ಯುವ ಕ್ರಿಕೆಟಿಗನ ವಿರುದ್ಧ ವಯಸ್ಸು ವಂಚನೆ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರೊಬ್ಬರು ಆರೋಪಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜುನೈದ್ ಖಾನ್ (Junaid Khan), 13 ವರ್ಷದ ಬಾಲಕ ಇಷ್ಟು ದೊಡ್ಡ ಸಿಕ್ಸ್ ಹೊಡೆಯಲು ಸಾಧ್ಯವಾ ಎಂದು ಪ್ರಶ್ನಿಸುವ ಮೂಲಕ ವೈಭವ್ ವಯಸ್ಸಿಗೆ ಸಂಬಂಧಿಸಿದಂತೆ ಪರೋಕ್ಷವಾಗಿ ಆರೋಪವನ್ನು ಮಾಡಿದ್ದಾರೆ. ಇದರ ಜೊತೆಗೆ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ.
ವೈಭವ್ ಸೂರ್ಯವಂಶಿ ಅಂಡರ್-19 ಏಷ್ಯಾಕಪ್‌ನಲ್ಲಿ 12 ಭರ್ಜರಿ ಸಿಕ್ಸರ್‌ಗಳೊಂದಿಗೆ ಒಟ್ಟು 176 ರನ್ ಕಲೆಹಾಕಿದ್ದರು. ಇದರಲ್ಲಿ 2 ಅರ್ಧಶತಕಗಳು ಸೇರಿದ್ದವು. ಈ ಎರಡು ಅರ್ಧಶತಕಗಳಲ್ಲಿ ಒಂದು ಅರ್ಧಶತಕ ಯುಎಇ ವಿರುದ್ಧ ಸಿಡಿದಿತ್ತು, ಈ ಇನ್ನಿಂಗ್ಸ್ನಲ್ಲಿ ಅವರು 6 ಭರ್ಜರಿ ಸಿಕ್ಸರ್‌ಗಳನ್ನು ಹೊಡೆದಿದ್ದರು. ಇದಲ್ಲದೆ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧವೂ 5 ಸಿಕ್ಸರ್‌ಗಳನ್ನು ಬಾರಿಸಿದ್ದರು. ಇದೀಗ ವೈಭವ್ ಅವರ ಸಿಕ್ಸ್ ಹಿಟ್ಟಿಂಗ್ ಸಾಮರ್ಥ್ಯದ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜುನೈದ್ ಖಾನ್ ಪ್ರಶ್ನೆಗಳನ್ನು ಎತ್ತಿದ್ದು, ಈ ಬಗ್ಗೆ ವೈಭವ್ ಕುಟುಂಬಸ್ಥರು ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ.
ಐಪಿಎಲ್ ಮೆಗಾ ಹರಾಜು ಬಳಿಕ ವೈಭವ್ ವಿರುದ್ಧ ವಯಸ್ಸು ವಂಚನೆ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಮಾತನಾಡಿದ್ದ ವೈಭ್ ತಂದೆ ಸಂಜೀವ್, ಆತ 8 ವರ್ಷದವನಿದ್ದಾಗ ಮೊದಲಿಗೆ ಬಿಸಿಸಿಐ ನಡೆಸಿದ ಬೋನ್ ಪರೀಕ್ಷೆಯಲ್ಲಿ ಕಾಣಿಸಿಕೊಂಡನು. ಆತ ಭಾರತ ಅಂಡರ್-19 ಪರ ಆಡಿದ್ದಾನೆ. ಆತನನ್ನು ಮತ್ತೊಮ್ಮೆ ವಯಸ್ಸಿನ ಪರೀಕ್ಷೆಗೆ ಒಳಪಡಿಸಬಹುದು. ನಾವು ಯಾವುದಕ್ಕೂ ಹೆದರುವುದಿಲ್ಲ. ನಾವು ಯಾವುದೇ ವಂಚನೆ ಎಸಗಿಲ್ಲ ಎಂದು ವೈಭವ್ ತಂದೆ ಸ್ಪಷ್ಟಪಡಿಸಿದ್ದಾರೆ.