ನಮ್ಮನ್ನು ದೂಷಿಸುವ ಬದಲು ನೆಟ್ಟಗೆ ಕ್ರಿಕೆಟ್​ ಆಡಿ; ಪಾಕ್​ ಆಟಗಾರರ ಆರೋಪಕ್ಕೆ ತಕ್ಕ ತಿರುಗೇಟು ನೀಡಿದ ಭಾರತೀಯರು

Haris Rauf
Published on

ನವದೆಹಲಿ: ಪಾಕಿಸ್ತಾನ ಕ್ರಿಕೆಟ್​ ತಂಡಕ್ಕೂ ವಿವಾದಗಳಿಗೂ ಎಲ್ಲಿಲ್ಲದ ನಂಟು ಎಂದು ಹೇಳಬಹುದಾಗಿದೆ. ಸದಾ ಒಂದಿಲ್ಲೊಂದು ವಿಚಾರಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗುವ ಪಾಕಿಸ್ತಾನ ಇದೀಗ ಮತ್ತೊಮ್ಮೆ ಟ್ರೋಲ್​ಗೆ ಗುರಿಯಾಗಿದೆ. ಪಾಕಿಸ್ತಾನ ಕ್ರಿಕೆಟ್​ ತಂಡದ ವೇಗಿ ಹ್ಯಾರಿಸ್​ ರೌಫ್​ ಈಚೆಗೆ ಯುಎಸ್​ಎನಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಗರಂ ಆಗಿ ಆತನ ಮೇಲೆ ಹಲ್ಲೆ ನಡೆಸಿದ್ದರು. ಈ ವಿಚಾರ ಸಾಕಷ್ಟು ಖಂಡನೆಗೆ ಗುರಿಯಾಗಿತ್ತು. ಇದೀಗ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಕ್ರಿಕೆಟ್​ ತಂಡದ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ಮೊಹಮ್ಮದ್​ ರಿಜ್ವಾನ್​ ಭಾರತೀಯರನ್ನು ದೂಷಿಸಿದ್ದಾರೆ.

ನನ್ನ ಪ್ರಕಾರ ಹ್ಯಾರಿಸ್​ ರೌಫ್​ರನ್ನು ಅವಮಾನಿಸಿದ ವ್ಯಕ್ತಿಗೆ ನಡವಳಿಕೆಯ ಕೊರತೆಯಿದ್ದು, ಆತ ಭಾರತದವನೋ ಪಾಕಿಸ್ತಾನದವನ ಎಂಬುದು ಅಪ್ರಸ್ತುತ. ಯಾವುದೇ ವ್ಯಕ್ತಿಯನ್ನು ಅವರ ಕುಟುಂಬ ಸದಸ್ಯರ ಮುಂದೆ ಅಗೌರವಿಸುವ ಹಕ್ಕು ಯಾರಿಗೂ ಇಲ್ಲ ಎಂದು ಟ್ವೀಟ್​ ಮಾಡಿದ್ದಾರೆ ಇತ್ತ ಈ ಟ್ವೀಟ್​ ವೈರಲ್​ ಆಗುತ್ತಿದ್ದಂತೆ ಕಿಡಿಕಾರಿರುವ ನೆಟ್ಟಿಗರು ಎಲ್ಲದಕ್ಕೂ ಭಾರತೀಯರನ್ನು ಯಾಕೆ ದೂಷಿಸುತ್ತೀರಾ ಎಂದು ಕಿಡಿಕಾರಿದ್ದಾರೆ.

ಮೊದಲಿಗೆ ಹ್ಯಾರಿಸ್​ ರೌಫ್​ರನ್ನು ನಿಂದಿಸಿದ ವ್ಯಕ್ತಿಯು ಭಾರತದವನು ಎಂದು ಪಾಕಿಸ್ತಾನದವರು ದೂಷಿಸಿದ್ದರು. ಆ ಬಳಿಕ ಸ್ಪಷ್ಟನೆ ನೀಡಿದ ವ್ಯಕ್ತಿಯು ನಾನು ಪಾಕಿಸ್ತಾನದವನಾಗಿದ್ದು, ತಂಡದ ಪ್ರದರ್ಶನ ಕಂಡು ಬೇಜಾರಾಗಿ ಆತನಿಗೆ ಬೈದೆ ಎಂದು ಹೇಳಿದ್ದ. ಇತ್ತ ಈ ಹೇಳಿಕೆ ಹೊರಬೀಳುತ್ತಿದ್ದಂತೆ ಹ್ಯಾರಿಸ್​ ರೌಫ್​ ಹಾಗೂ ಪಾಕ್​ ಕ್ರಿಕೆಟ್​ ತಂಡದ ವಿರುದ್ಧ ಕಿಡಿಕಾರಿರುವ ಭಾರತೀಯರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರತಿ ವಿಚಾರಕ್ಕೂ ಭಾರತೀಯರನ್ನು ದೂಷಿಸುವ ಬದಲು ನೀವು ಆಟದ ಮೇಲೆ ಹೆಚ್ಚು ಗಮನ ನೀಡಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ. ಪಾಕಿಸ್ತಾನವು ಭಾರತವನ್ನು ಯಾವ ಮಟ್ಟಕ್ಕೆ ದ್ವೇಷಿಸುತ್ತದೆ ಎಂಬುದಕ್ಕೆ ಹ್ಯಾರಿಸ್​ ರೌಫ್ ನೀಡಿರುವ ಹೇಳಿಕೆಯೇ ಸಾಕು. ಇದಕ್ಕೆ ಬೆಂಬಲಿಸುವ ಮೂಲಕ ಮೊಹಮ್ಮದ್​ ರಿಜ್ವಾನ್​ ತಮ್ಮ ದೇಶದ ನೀಚ ಬುದ್ದಿಯನ್ನು ಸಾಬೀತುಪಡಿಸಿದ್ದಾರೆ ಎಂದು ಭಾರತೀಯರು ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net