

ನವದೆಹಲಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಶುರುವಾಗುವುದಕ್ಕೆ ಕೆಲವೇ ತಿಂಗಳು ಬಾಕಿ ಉಳಿದಿದ್ದು, ಉಭಯ ತಂಡಗಳು ಈಗಾಗಲೇ ಸಿದ್ಧತೆ ಆರಂಭಿಸಿವೆ. ನಾವು ನೋಡಿರುವಂತೆ ಯಾವುದಾದರು ಪ್ರತಿಷ್ಠಿತ ಟೂರ್ನಿ ಅಥವಾ ಸರಣಿ ಅರಂಭಕ್ಕೂ ಮುನ್ನ ಆ ದೇಶದ ಮಾಜಿ ಹಾಗೂ ಹಾಲಿ ಆಟಗಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಕೆಲವೊಮ್ಮೆ ಅತಿರೇಕದ ಹೇಳಿಕೆಗಳನ್ನು ಕೊಡುವ ಮೂಲಕ ಎದುರಾಳಿಗಳನ್ನು ಕೆಣಕುವ ಮೂಲಕ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ ಈ ಬಗ್ಗೆ ಮಾತನಾಡಿದ್ದು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಖಾಸಗಿ ಸುದ್ದಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಖವಾಜಾ, ನಾವು ಮುಂಬರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತವನ್ನು ಸೋಲಿಸಲು ಬಯಸುತ್ತೇವೆ. ಏಕೆಂದರೆ ಅವರು ನಮ್ಮನ್ನು ಸೋಲಿಸಲು ಎಷ್ಟು ಇಷ್ಟಪಡುತ್ತಾರೋ ಅದೇ ರೀತಿ ನಾವು ಕೂಡ ಈ ಬಾರಿ ಸರಣಿಯನ್ನು ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನು ಹೊಂದಿದ್ದೇವೆ.
ನಾವು ಟೆಸ್ಟ್ ರ್ಯಾಂಕಿಂಗ್ನಲ್ಲಿ ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿದ್ದೇವೆ. ನಮ್ಮ ನಡುವೆ ಪೈಪೋಟಿ ದೊಡ್ಡದಾಗಿದೆ ಮತ್ತು ನಾವು ಅದನ್ನು ಗೌರವದ ಸಂಕೇತವಾಗಿ ತೆಗೆದುಕೊಳ್ಳುತ್ತೇವೆ. ಭಾರತೀಯರು ಯಾವುದೇ ರೀತಿಯ ಕ್ರಿಕೆಟ್ ಆಗಲಿ ಆಸ್ಟ್ರೇಲಿಯಾವನ್ನು ಸೋಲಿಸಲು ಇಷ್ಟಪಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಐಪಿಎಲ್ ಬೆಳೆದ ರೀತಿ ನೋಡಿದರೆ ಭಾರತೀಯರಲ್ಲಿ ಆತ್ಮವಿಶ್ವಾಸ ಹೆಚ್ಚಿದ್ದು, ಆಸ್ಟ್ರೇಲಿಯಾದ ನೆಲದಲ್ಲಿ ಎರಡು ಬಾರಿ ಸರಣಿಯನ್ನು ಗೆದ್ದುಕೊಂಡಿದ್ದಾರೆ. ಈ ಕಾರಣಕ್ಕಾಗಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು ಎಂದು ಉಸ್ಮಾನ್ ಖವಾಜಾ ಅಭಿಪ್ರಾಯಪಟ್ಟಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸಕ್ಕೂ ಮೊದಲು ಭಾರತ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದ್ದು, ಈಗಾಗಲೇ ಕೆಲವು ಆಟಗಾರರು ದುಲೀಪ್ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ಮಾರ್ಚ್ ತಿಂಗಳಿನಿಂದ ಈಚೆಗೆ ಆಸ್ಟ್ರೇಲಿಯಾ ತಂಡವು ಯಾವುದೇ ಟೆಸ್ಟ್ ಸರಣಿಯನ್ನು ಆಡಿಲ್ಲ. ಹೀಗಾಗಿ ಭಾರತ ವಿರುದ್ಧದ ಸರಣಿಗೆ ಈಗಿನಿಂದಲೇ ತಯಾರಿ ಆರಂಭಿಸಿದೆ.