ಅಮ್ಮನಾಗುತ್ತಿದ್ದಾರೆ ಕುಸ್ತಿತಾರೆ ಬಬಿತಾ ಪೋಗಟ್

babita web
Published on

ನವದೆಹಲಿ: ಕಾಮನ್ವೆಲ್ತ್ ಗೇಮ್ಸ್ ಸ್ವರ್ಣ ಪದಕ ವಿಜೇತೆ ಕುಸ್ತಿತಾರೆ ಬಬಿತಾ ಪೋಗಟ್, ಅಮ್ಮನಾಗುತ್ತಿರುವ ವಿಷಯವನ್ನು ಶನಿವಾರ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಪತಿ ವಿವೇಕ್ ಸುಹಾಗ್ ಜತೆಗೆ ಪೋಸ್ ನೀಡಿರುವ ಬಬಿತಾ, ‘ಬದುಕಿನ ಹೊಸ ಅಧ್ಯಾಯವನ್ನು ಆರಂಭಿಸಲು ಕಾಯುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಕುಸ್ತಿ ಕ್ರೀಡೆಯ ಜತೆಗೆ ರಾಜಕೀಯದಲ್ಲೂ ಸಕ್ರಿಯವಾಗಿರುವ ಬಬಿತಾ, ಕಳೆದ ಬಾರಿ ಹರಿಯಾಣದ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಇತ್ತೀಚೆಗೆ ಸರ್ಕಾರಿ ಉದ್ಯೋಗವನ್ನೂ ತ್ಯಜಿಸಿ ಬಿಜೆಪಿ ಪಕ್ಷದೊಂದಿಗೆ ಸಕ್ರಿಯ ರಾಜಕೀಯದಲ್ಲಿ ಮುಂದುವರಿಯಲು ತೀರ್ಮಾನಿಸಿದ್ದರು. ಈ ನಡುವೆ ಅವರು ಚೊಚ್ಚಲ ಮಗುವಿನ ಸ್ವಾಗತಕ್ಕೆ ಸಜ್ಜಾಗಿದ್ದಾರೆ.

ವಿವೇಕ್ ಸುಹಾಗ್ ಕೂಡ ಕುಸ್ತಿಪಟುವೇ ಆಗಿದ್ದು, 2019ರ ಡಿಸೆಂಬರ್‌ನಲ್ಲಿ ಇವರು ವಿವಾಹವಾಗಿದ್ದರು. ಈ ವೇಳೆ ನವದಂಪತಿ 7 ಪೆರಾಗೆ (ಅಗ್ನಿಗೆ ಸುತ್ತು) ಬದಲಾಗಿ 8ನೇ ಪೆರಾ ಕೂಡ ಮಾಡಿದ್ದರು. ಈ ಮೂಲಕ ಹೆಣ್ಣು ಮಕ್ಕಳ ಸಬಲೀಕರಣದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದ್ದರು.

ಶುಕ್ರವಾರವಷ್ಟೇ 31ನೇ ಜನ್ಮದಿನದ ಸಂಭ್ರಮ ಆಚರಿಸಿದ್ದ ಬಬಿತಾ, ಅದರ ಮರುದಿನವೇ ಗರ್ಭಿಣಿಯಾಗಿರುವ ವಿಷಯವನ್ನೂ ಬಹಿರಂಗಪಡಿಸಿದ್ದಾರೆ. ‘ನಾನು ನಿನ್ನ ಪತ್ನಿಯಾಗಿ ಕಳೆದಿರುವ ಪ್ರತಿಕ್ಷಣದಲ್ಲೂ ನಾನೆಷ್ಟು ಅದೃಷ್ಟಶಾಲಿ ಎಂಬುದನ್ನು ಮನವರಿಕೆ ಮಾಡಿಕೊಂಡಿದ್ದೇನೆ. ನೀನೇ ನನ್ನ ಸಂತೋಷದ ತಾಣ. ನಿನ್ನಿಂದಾಗಿ ನಾನು ಪರಿಪೂರ್ಣಳಾಗಿದ್ದೇನೆ’ ಎಂದು ಬಬಿತಾ ಪತಿ ವಿವೇಕ್ ಜತೆಗಿನ ಚಿತ್ರದೊಂದಿಗೆ ಟ್ವೀಟಿಸಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಗೀತಾ ಪೋಗಟ್ ಅವರ ತಂಗಿಯಾಗಿರುವ ಬಬಿತಾ ಅವರ ಕುಟುಂಬದ ಯಶೋಗಾಥೆಯೇ ಬಾಲಿವುಡ್‌ನ ಜನಪ್ರಿಯ ‘ದಂಗಲ್’ ಸಿನಿಮಾಗೆ ಕಥಾವಸ್ತುವಾಗಿತ್ತು. ಬಬಿತಾ 2014ರ ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಸ್ವರ್ಣ, 2010ರ ದೆಹಲಿ ಮತ್ತು 2018ರ ಗೋಲ್ಡ್‌ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್‌ಗಳಲ್ಲಿ ರಜತ ಪದಕ ಜಯಿಸಿದ್ದರು. 2012ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಜಯಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net