ಒಲಿಂಪಿಕ್ಸ್ ಚಾಂಪಿಯನ್​ ನೆದರ್ಲೆಂಡ್​ ಎದುರು ಗೆದ್ದ ಭಾರತದ ಮಹಿಳಾ ಹಾಕಿ ತಂಡ; ಹಾಕಿ ಇಂಡಿಯಾದಿಂದ ಬಹುಮಾನ

web hockey
Published on

ಭುವನೇಶ್ವರ: ಭಾರತದ ಮಹಿಳಾ ತಂಡ ಎಫ್​ಐಎಚ್​ ಪ್ರೊ ಲೀಗ್​ ಹಾಕಿ ಟೂರ್ನಿಯಲ್ಲಿ ಪ್ಯಾರಿಸ್​ ಒಲಿಂಪಿಕ್ಸ್​ ಸ್ವರ್ಣ ಪದಕ ವಿಜೇತ ಹಾಗೂ ವಿಶ್ವ ನಂ. 1 ನೆದರ್ಲೆಂಡ್​ ತಂಡಕ್ಕೆ ಪೆನಾಲ್ಟಿ ಶೂಟೌಟ್​ನಲ್ಲಿ ಸೋಲುಣಿಸಿ ಬೀಗಿದೆ. ಮಂಗಳವಾರ ನಡೆದ ಉಭಯ ತಂಡಗಳ 2ನೇ ಮುಖಾಮುಖಿ ನಿಗದಿತ ಸಮಯದ ವೇಳೆ 2-2ರಿಂದ ಡ್ರಾಗೊಂಡಿತು. ನಂತರ ನಡೆದ ಶೂಟೌಟ್​ನಲ್ಲಿ ಭಾರತ 2-1ರಿಂದ ಗೆದ್ದುಕೊಂಡಿತು.

ಮೊದಲಾರ್ಧದಲ್ಲಿ ಭಾರತ ತಂಡ 0-2ರಿಂದ ಹಿನ್ನಡೆ ಅನುಭವಿಸಿತ್ತು. ನಂತರ ದೀಪಿಕಾ (35ನೇ ನಿಮಿಷ) ಮತ್ತು ಬಲ್​ಜೀತ್​ ಕೌರ್​ (43) ಬಾರಿಸಿದ ಗೋಲಿನಿಂದ ಭಾರತ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಶೂಟೌಟ್​ನಲ್ಲಿ ದೀಪಿಕಾ ಮತ್ತು ಮುಮ್ತಾಜ್​ ಖಾನ್​ ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ಸೇರಿಸುವಲ್ಲಿ ಯಶಸ್ವಿಯಾದರು. ಗೋಲು ಕೀಪರ್​ ಸವಿತಾ ಎದುರಾಳಿಯ 4 ಹೊಡೆತಗಳನ್ನು ಯಶಸ್ವಿಯಾಗಿ ತಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದರೊಂದಿಗೆ ಭಾರತ ತವರಿನ ಪ್ರೊ ಲೀಗ್​ ಚರಣವನ್ನು ಗೆಲುವಿನೊಂದಿಗೆ ಮುಗಿಸಿತು. ತವರು ಚರಣದಲ್ಲಿ ಆಡಿದ ಒಟ್ಟು 8 ಪಂದ್ಯಗಳಲ್ಲಿ 3ರಲ್ಲಿ ಜಯಿಸಿದ ಭಾರತ, 5ರಲ್ಲಿ ಸೋಲು ಕಂಡಿತು.

ತಲಾ 1 ಲಕ್ಷ ರೂ. ಬಹುಮಾನ: ಒಲಿಂಪಿಕ್ಸ್​ ಚಾಂಪಿಯನ್​ ನೆದರ್ಲೆಂಡ್​ ವಿರುದ್ಧ ಸಾಧಿಸಿದ ಅಮೋ ಗೆಲುವಿಗಾಗಿ ಭಾರತ ಮಹಿಳಾ ತಂಡದ ಪ್ರತಿ ಆಟಗಾರ್ತಿಗೆ ತಲಾ ಒಂದು ಲಕ್ಷ ರೂ. ಬಹುಮಾನ ವಿತರಿಸಲು ಹಾಕಿ ಇಂಡಿಯಾ (ಎಚ್​ಐ) ನಿರ್ಧರಿಸಿದೆ. ತಂಡದ ತರಬೇತಿ ಬಳಗದ ಪ್ರತಿ ಸಿಬ್ಬಂದಿ ತಲಾ 50 ಸಾವಿರ ರೂ. ಪಡೆಯಲಿದ್ದಾರೆ ಎಂದು ಎಚ್​ಐ ಘೋಷಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net