

ಪುಣೆ: ತವರಿನ ರೀತಿಯ ವಾತಾವರಣ ಹೊಂದಿದ್ದರೂ, ಭಾರತದ ನೆಲದಲ್ಲಿ ನಿಸ್ತೇಜ ಪ್ರದರ್ಶನ ನೀಡಿರುವ ಶ್ರೀಲಂಕಾ ತಂಡದ ವಿರುದ್ಧದ ಟಿ20 ಸರಣಿಯಲ್ಲಿ ಮುನ್ನಡೆ ಕಂಡಿರುವ ಟೀಮ್ ಇಂಡಿಯಾ ಸರಣಿ ಗೆಲುವಿನ ಗುರಿಯೊಂದಿಗೆ ಶುಕ್ರವಾರ ನಡೆಯಲಿರುವ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಇನ್ನೊಂದೆಡೆ, ಮತ್ತೊಂದು ಸರಣಿ ಸೋಲಿನ ಹಾಗೂ ಸತತ 5ನೇ ಟಿ20 ಪಂದ್ಯ ಸೋಲಿನ ಅವಮಾನ ತಪ್ಪಿಸಿಕೊಳ್ಳುವ ಇರಾದೆಯಲ್ಲಿರುವ ದ್ವೀಪರಾಷ್ಟ್ರ ಶ್ರೀಲಂಕಾ ಸಮಬಲದ ಸಾಧನೆಯೊಂದಿಗೆ ತವರಿಗೆ ವಾಪಸಾಗುವ ಇರಾದೆಯಲ್ಲಿದೆ.
ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯಲ್ಲಿ ಕೇವಲ ಒಂದು ಪಂದ್ಯ ನಡೆದಿದ್ದರೂ, ಹಲವು ಅಂಶಗಳು ಇದರಿಂದ ತಿಳಿದಿವೆ. ಮೊದಲ ಅಂಶ ಏನೆಂದರೆ, ಟಿ20 ವಿಶ್ವಕಪ್ಗಾಗಿ ವೇಗದ ಬೌಲಿಂಗ್ನಲ್ಲಿ ಭಾರತ ಇನ್ನಷ್ಟು ಆಯ್ಕೆಗಳನ್ನು ಹೊಂದಿದೆ. ಇಂದೋರ್ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾರ ನೀರಸ ನಿರ್ವಹಣೆಯ ನಡುವೆ ನವದೀಪ್ ಸೈನಿ ಹಾಗೂ ಶಾರ್ದೂಲ್ ಠಾಕೂರ್ ಗಮನಸೆಳೆದಿದ್ದರು. ಇನ್ನೊಂದು ಅಂಶವೆಂದರೆ, ಟಿ20 ವಿಶ್ವಕಪ್ನಲ್ಲಿ ಕೊಹ್ಲಿ ಬಹುತೇಕವಾಗಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿಯಲಿರುವುದು. ಶ್ರೇಯಸ್ ಅಯ್ಯರ್ರನ್ನು ಕಳೆದ ಕೆಲ ಪಂದ್ಯಗಳಿಂದ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿಸುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಲಂಕಾ ತಂಡದ ಪರವಾಗಿ ಕುಸಲ್ ಪೆರೇರಾ ಹೊರತಾಗಿ ಯಾರೂ ಸ್ಥಿರ ನಿರ್ವಹಣೆ ತೋರಿಲ್ಲ. 140 ಕಿ.ಮೀ ವೇಗದಲ್ಲಿ ಬರುವ ಚೆಂಡನ್ನು ಎದುರಿಸುವಲ್ಲಿ ತಂಡದ ಬ್ಯಾಟ್ಸ್ಮನ್ಗಳು ವೈಫಲ್ಯ ಕಾಣುತ್ತಿದ್ದಾರೆ. ಸ್ಪಿನ್ ಬೌಲಿಂಗ್ ಎದುರಿಸುವ ವೇಳೆಯಲ್ಲೂ ಬ್ಯಾಟ್ಸ್ಮನ್ಗಳು ತಡಕಾಡುತ್ತಿದ್ದಾರೆ. ಭಾರತ ತಂಡ ತವರಿನಲ್ಲಿ ಆಡಿದ ಕಳೆದ ಮೂರು ಟಿ20 ಸರಣಿಗಳ ಪೈಕಿ, ಒಂದಾದರೂ ಪಂದ್ಯದಲ್ಲಿ ಸೋಲು ಕಂಡಿದೆ. ಇದು 3ನೇ ಟಿ20 ಪಂದ್ಯಕ್ಕೂ ಮುನ್ನ ಲಂಕಾ ತಂಡಕ್ಕೆ ಸ್ಪೂರ್ತಿ ತುಂಬುವ ಅಂಶವಾಗಿ ಇರಲಿದೆ. ಅದಲ್ಲದೆ, ಇದೇ ಮೈದಾನದಲ್ಲಿ ಭಾರತ ತಂಡವನ್ನು ಎದುರಿಸಿದ್ದ ಕಳೆದ ಟಿ20 ಪಂದ್ಯದಲ್ಲಿ ಶ್ರೀಲಂಕಾ ತಂಡ 5 ವಿಕೆಟ್ ಗೆಲುವು ಸಾಧಿಸಿತ್ತು.
ಪುಣೆಯಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಈವರೆಗೂ ಎರಡು ಟಿ20 ಪಂದ್ಯ ನಡೆದಿದ್ದು, ಭಾರತ ತಂಡ ಮಿಶ್ರ ಫಲಿತಾಂಶ ಪಡೆದಿದೆ. 2012ರ ಡಿಸೆಂಬರ್ 20 ರಂದು ನಡೆದಿದ್ದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 5 ವಿಕೆಟ್ ಗೆಲುವು ಸಾಧಿಸಿದ್ದರೆ, 2016ರ ಫೆ.9 ರಂದು ಶ್ರೀಲಂಕಾ ವಿರುದ್ಧ ನಡೆದಿದ್ದ ಪಂದ್ಯದಲ್ಲಿ 5 ವಿಕೆಟ್ ಸೋಲು ಕಂಡಿತ್ತು.
ದಾಖಲೆಯ ಹಾದಿಯಲ್ಲಿ ಜಸ್ಪ್ರೀತ್ ಬುಮ್ರಾ
ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾಗೆ ಈ ಪಂದ್ಯದ ಮೂಲಕ ಟಿ20ಯಲ್ಲಿ ಗರಿಷ್ಠ ವಿಕೆಟ್ ಉರುಳಿಸಿದ ಭಾರತದ ಬೌಲರ್ ಎನ್ನುವ ದಾಖಲೆ ಮಾಡುವ ಅವಕಾಶವಿದೆ. ಪ್ರಸ್ತುತ ಆಡಿರುವ 44 ಪಂದ್ಯಗಳಿಂದ 52 ವಿಕೆಟ್ ಉರುಳಿಸುವ ಮೂಲಕ ಆರ್.ಅಶ್ವಿನ್ ಹಾಗೂ ಯಜುವೇಂದ್ರ ಚಾಹಲ್ರೊಂದಿಗೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ಹಾಗೇನಾದರೂ ಪುಣೆ ಟಿ20 ಪಂದ್ಯದಲ್ಲಿ ಚಾಹಲ್ ಕೂಡ ಆಡುವ ಬಳಗದಲ್ಲಿ ಸ್ಥಾನ ಪಡೆದರೆ, ಭಾರತದ ಅತ್ಯಂತ ಯಶಸ್ವಿ ಟಿ20 ಬೌಲರ್ ಆಗುವ ಸಲುವಾಗಿ ಬುಮ್ರಾ ಜತೆ ಅವರು ಹೋರಾಟಕ್ಕೆ ಇಳಿಯಲಿದ್ದಾರೆ.
ಟೀಮ್ ನ್ಯೂಸ್
ಭಾರತ: ಬೌಲಿಂಗ್ ವಿಭಾಗದಲ್ಲಿ ಕುಲದೀಪ್ ಯಾದವ್ ಬದಲಿಗೆ ಯಜುವೇಂದ್ರ ಚಾಹಲ್ಗೆ ಅವಕಾಶ ನೀಡುವ ಸಾಧ್ಯತೆ ಇದೆ. ಅಲ್ಲದೆ, ಪ್ರಧಾನ ಆಡುವ ಬಳಗದಲ್ಲಿ ಯಾವುದೇ ಆಟಗಾರ ಗಾಯದ ಸಮಸ್ಯೆಯಲ್ಲಿ ಇಲ್ಲದಿರುವ ಕಾರಣ ಮನೀಷ್ ಪಾಂಡೆ ಅಥವಾ ಸಂಜು ಸ್ಯಾಮ್ಸನ್ ಅವಕಾಶ ಪಡೆಯುವುದು ಅನುಮಾನವಾಗಿದೆ.
ಶ್ರೀಲಂಕಾ: ಒಶದಾ ಫೆರ್ನಾಂಡೊ, ಅಭ್ಯಾಸ ವೇಳೆ ಕೈಗೆ ಪೆಟ್ಟು ಮಾಡಿಕೊಂಡಿದ್ದರೂ, ಪಂದ್ಯಕ್ಕೆ ಲಭ್ಯರಾಗಲಿದ್ದಾರೆ. ಆಲ್ರೌಂಡರ್ ಇಸುರು ಉದಾನ ಗಾಯದಿಂದಾಗಿ ಅಂತಿಮ ಪಂದ್ಯಕ್ಕೆ ಲಭ್ಯವಿರದ ಕಾರಣ, ಏಂಜೆಲೋ ಮ್ಯಾಥ್ಯೂಸ್ ಆಡುವ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ.
ಪಿಚ್ ರಿಪೋರ್ಟ್
ಬ್ಯಾಟಿಂಗ್ ಹಾಗೂ ಬೌಲಿಂಗ್ಗೆ ಸಮಾನ ಸಹಾಯ ನೀಡುವ ಪಿಚ್ ಇದಾಗಿರಲಿದೆ. ಈವರೆಗೂ ಇಲ್ಲಿ ಎರಡು ಪಂದ್ಯಗಳು ನಡೆದಿದ್ದು, ದೊಡ್ಡ ಮೊತ್ತ ದಾಖಲಾಗಿಲ್ಲ. 2012ರಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 5 ವಿಕೆಟ್ಗೆ 158 ರನ್ ಬಾರಿಸಿದ್ದೇ ಇಲ್ಲಿನ ಗರಿಷ್ಠ ಮೊತ್ತವಾಗಿದೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಯಾವುದೇ ಮುನ್ಸೂಚನೆ ಇಲ್ಲ. ಆದರೆ, 2ನೇ ಇನಿಂಗ್ಸ್ನ ವೇಳೆ ಇಬ್ಬನಿ ಬೌಲರ್ಗಳಿಗೆ ಸಮಸ್ಯೆ ತಂದೊಡ್ಡಲಿದೆ.
ಧವನ್ ಮೇಲೆ ಗಮನ
ಮುಂದಿನ ಟಿ20 ವಿಶ್ವಕಪ್ ವೇಳೆ ರೋಹಿತ್ ಶರ್ಮಗೆ ಆರಂಭಿಕ ಜತೆಗಾರರಾಗಿ ಕೆಎಲ್ ರಾಹುಲ್ ಅಥವಾ ಶಿಖರ್ ಧವನ್ರಲ್ಲಿ ಯಾರು ಆಯ್ಕೆಯಾಗಲಿದ್ದಾರೆ ಎನ್ನುವುದೇ ಕುತೂಹಲದ ಸಂಗತಿಯಾಗಿದೆ. ಸದ್ಯದ ಮಟ್ಟಿಗೆ ಕೆಎಲ್ ರಾಹುಲ್, ಆರಂಭಿಕರಾಗುವ ರೇಸ್ನಲ್ಲಿ ಮುನ್ನಡೆಯಲ್ಲಿದ್ದಾರೆ. ತಾವು ನಿರಾಳವಾಗಿ ಆಡಲು ಇಷ್ಟಪಡುತ್ತೇನೆ ಎಂದು ಧವನ್ ಸರಣಿಗೂ ಮುನ್ನ ಹೇಳಿದ್ದರು. ಆದರೆ, ಅವರು ಬ್ಯಾಟಿಂಗ್ ಮಾಡುವ ವೇಳೆ ಸಾಕಷ್ಟು ಒತ್ತಡಕ್ಕೆ ಒಳಗಾಗಿದ್ದಾರೆ.
ಇಂದೋರ್ ಟಿ20 ಪಂದ್ಯದಲ್ಲಿ ತಂಡದ ಎಲ್ಲ ಬ್ಯಾಟ್ಸ್ಮನ್ಗಳು ತೀರಾ ಸಲೀಸಾಗಿ ರನ್ ಬಾರಿಸಿದರೆ, ಧವನ್ ಒಂದೊಂದು ರನ್ಗಾಗಿಯೂ ಕಷ್ಟಪಟ್ಟಿದ್ದರು. ಪವರ್ ಪ್ಲೇ ಅವಧಿಯಲ್ಲಿ ರಾಹುಲ್ ಆಕ್ರಮಣಕಾರಿಯಾಗಿ ಆಡುತ್ತಿರುವ ಕಾರಣ, ಟಿ20 ಮಾದರಿಯಲ್ಲಿ ಹಿಂದೊಮ್ಮೆ ಮೊದಲ ಆಯ್ಕೆಯ ಆಟಗಾರನಾಗಿದ್ದ ಎಡಗೈ ಬ್ಯಾಟ್ಸ್ಮನ್ಗೆ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿ ಕಂಡಿದೆ.
ನಾವು ಉತ್ತಮ ಕೌಶಲವಿರುವ ಆಟಗಾರರನ್ನೇ ಹೊಂದಿದ್ದೇವೆ. ಆದರೆ, ಪಂದ್ಯದ ಪರಿಸ್ಥಿತಿ, ಗೇಮ್ ಪ್ಲಾ್ಯನ್ ಹಾಗೂ ಮ್ಯಾಚ್ ಮ್ಯಾನೇಜ್ವೆುಂಟ್ ಕುರಿತಾಗಿ ಅವರಿಗೆ ಶಿಕ್ಷಣವನ್ನು ನೀಡಬೇಕಿದೆ. ಯಾವ ಹಂತದಲ್ಲಿ ರಿಸ್ಕ್ ತೆಗೆದುಕೊಳ್ಳಬೇಕು, ಯಾವ ಹಂತದಲ್ಲಿ ತಾಳ್ಮೆಯ ಆಟವಾಡಬೇಕು ಎನ್ನುವುದನ್ನು ಕಲಿಯಬೇಕಿದೆ. ಸ್ಟ್ರೈಕ್ ರೊಟೇಟ್ ಬಗ್ಗೆ ನಾವು ಗಮನ ನೀಡಿದ್ದೇವೆ. ಮುಂದಿನ ಎಂಟು ತಿಂಗಳ ಅವಧಿಯಲ್ಲಿ ಸಾಕಷ್ಟು ಅಂಶಗಳ ಮೇಲೆ ಕೆಲಸ ಮಾಡಲಿದ್ದೇವೆ. | ಮಿಕಿ ಆರ್ಥರ್ ಶ್ರೀಲಂಕಾ ಕೋಚ್