ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಇಂದು ಭರ್ಜರಿ ಪದಕ ಬೇಟೆಯ ನಿರೀಕ್ಷೆಯಲ್ಲಿ ಭಾರತ

oly web
Published on

ಟೋಕಿಯೊ: ಭರವಸೆಯ ಕ್ರೀಡಾಪಟುಗಳಿಂದ ಸಮರ್ಥ ನಿರ್ವಹಣೆ ದಾಖಲಾದರೆ ಗುರುವಾರ ಒಲಿಂಪಿಕ್ಸ್ ಇತಿಹಾಸದಲ್ಲೇ ಭಾರತಕ್ಕೆ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥ ದಿನವಾಗುವ ನಿರೀಕ್ಷೆಗಳಿವೆ. ಯಾಕೆಂದರೆ ಗುರುವಾರ ಭಾರತಕ್ಕೆ ಕನಿಷ್ಠ 4 ಪದಕಗಳು ಒಲಿದು ಬರುವ ಅವಕಾಶಗಳಿವೆ. ಈ ಪೈಕಿ ಕುಸ್ತಿಯಲ್ಲಿ ಈಗಾಗಲೆ ಖಚಿತವಾಗಿರುವ ಪದಕವನ್ನು ಪೈಲ್ವಾನ್ ರವಿ ಕುಮಾರ್ ದಹಿಯಾ ಚಿನ್ನವಾಗಿಸುವರೇ ಅಥವಾ ರಜತಕ್ಕೆ ಸಮಾಧಾನ ಕಾಣುವರೇ ಎಂಬ ಕುತೂಹಲವಿದೆ. ಭಾರತದ ಇನ್ನಿಬ್ಬರು ಕುಸ್ತಿಪಟುಗಳು ಕಂಚಿನ ಪದಕಕ್ಕೆ ಹೋರಾಡಲಿದ್ದಾರೆ. ಇನ್ನೊಂದೆಡೆ ಪುರುಷರ ಹಾಕಿ ತಂಡವೂ ಕಂಚಿನ ಪದಕಕ್ಕೆ ಸೆಣಸಲಿದೆ. ಭಾರತ ಒಲಿಂಪಿಕ್ಸ್‌ನಲ್ಲಿ ಹಿಂದೆಂದೂ ಒಂದೇ ದಿನ ಇಷ್ಟೊಂದು ಪದಕಗಳನ್ನು ಗೆದ್ದ ದೃಷ್ಟಾಂತವಿಲ್ಲ.

ಹರಿಯಾಣದ ಯುವ ಪೈಲ್ವಾನ್ ರವಿ ದಹಿಯಾ ಫೈನಲ್‌ನಲ್ಲಿ ಗೆದ್ದರೆ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಪೈಲ್ವಾನ್ ಎನಿಸಲಿದ್ದಾರೆ. ಸೋತರೆ ಬೆಳ್ಳಿ ಗೆದ್ದ 2ನೇ ಭಾರತೀಯ ಪೈಲ್ವಾನ್ ಎನಿಸಲಿದ್ದಾರೆ. ಸುಶೀಲ್ ಕುಮಾರ್ 2012ರಲ್ಲಿ ಬೆಳ್ಳಿ ಗೆದ್ದಿರುವುದು ಭಾರತೀಯ ಪೈಲ್ವಾನ್‌ನ ಇದುವರೆಗಿನ ಶ್ರೇಷ್ಠ ನಿರ್ವಹಣೆ. ರವಿ ದಹಿಯಾ ಚಿನ್ನ ಗೆದ್ದರೆ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ವಿಭಾಗದ ಚಿನ್ನ ಗೆದ್ದ 2ನೇ ಭಾರತೀಯರೆನಿಸಲಿದ್ದಾರೆ. ಶೂಟರ್ ಅಭಿನವ್ ಬಿಂದ್ರಾ (2008) ಮೊದಲ ಸಾಧಕ. ರವಿ ಚಿನ್ನ ಗೆದ್ದರೆ ಭಾರತ ಒಲಿಂಪಿಕ್ಸ್‌ನಲ್ಲಿ 13 ವರ್ಷಗಳ ಬಳಿಕ ಮತ್ತು ಒಟ್ಟಾರೆ 10ನೇ ಚಿನ್ನ (ಹಾಕಿಯಲ್ಲಿ 8) ಗೆದ್ದ ಇತಿಹಾಸವೂ ನಿರ್ಮಾಣವಾಗಲಿದೆ. ಭಾರತ ಒಲಿಂಪಿಕ್ಸ್‌ನಲ್ಲಿ 2ನೇ ಬಾರಿ 4 ಅಥವಾ ಅದಕ್ಕಿಂತ ಹೆಚ್ಚಿನ ಪದಕ ಜಯಿಸಿದೆ. ಈ ಮುನ್ನ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ 6 ಪದಕ (2 ಬೆಳ್ಳಿ, 4 ಕಂಚು) ಜಯಿಸಿತ್ತು. ಈ ಬಾರಿ ಲಂಡನ್ ಸಾಧನೆ ಮೀರಿಸುವ ಅವಕಾಶವೂ ಭಾರತದ ಮುಂದಿದೆ.

ಭಾರತಕ್ಕೆ ಇಂದು ಕ್ರೀಡಾಸ್ಪರ್ಧೆಗಳು:

*ಅಥ್ಲೆಟಿಕ್ಸ್: ಮಧ್ಯಾಹ್ನ 1: ಪುರುಷರ 20 ಕಿಮೀ. ನಡಿಗೆ: ಕೆಟಿ ರ್ಇಾನ್, ರಾಹುಲ್ ರೋಹಿಲಾ, ಸಂದೀಪ್ ಕುಮಾರ್ ಸ್ಪರ್ಧೆ.

ಗಾಲ್ಫ್: ಬೆಳಗ್ಗೆ 4: ಮಹಿಳೆಯರ ವಿಭಾಗದ ರೌಂಡ್-2: ಅದಿತಿ ಅಶೋಕ್, ದೀಕ್ಷಾ ಡಾಗರ್ ಕಣಕ್ಕೆ.

*ಹಾಕಿ: ಬೆಳಗ್ಗೆ 7: ಪುರುಷರ ವಿಭಾಗದ ಕಂಚಿನ ಪದಕಕ್ಕೆ ಜರ್ಮನಿ ವಿರುದ್ಧ ಹೋರಾಟ.

*ಫ್ರೀಸ್ಟೈಲ್ ಕುಸ್ತಿ: ಬೆಳಗ್ಗೆ 8: ಮಹಿಳೆಯರ 53 ಕೆಜಿ ವಿಭಾಗ: ವಿನೇಶ್ ಪೋಗಟ್‌ಗೆ ಮೊದಲ ಸುತ್ತಿನಲ್ಲಿ ಸ್ವೀಡನ್‌ನ ಸೋಫಿಯಾ ಮ್ಯಾಟ್‌ಸನ್ ಸವಾಲು; ಸಂಜೆ 4.20: ಪುರುಷರ 57 ಕೆಜಿ ವಿಭಾಗದ ಫೈನಲ್: ರವಿ ದಹಿಯಾಗೆ ರಷ್ಯಾದ ಜೌರ್ ಉಗುವ್ ಸವಾಲು; ಸಂಜೆ 4.40: 86 ಕೆಜಿ ವಿಭಾಗದ ಕಂಚಿನ ಹೋರಾಟ: ದೀಪಕ್ ಪೂನಿಯಾ ಕಣಕ್ಕೆ; ಬೆಳಗ್ಗೆ 7.30: ಮಹಿಳೆಯರ 57 ಕೆಜಿ ವಿಭಾಗದ ರಿಪಷಾಸ್ ಮೊದಲ ಸುತ್ತು: ಅಂಶು ಮಲಿಕ್‌ಗೆ ರಷ್ಯಾದ ವಲೇರಿಯಾ ಸವಾಲು, ಗೆದ್ದರೆ ಸಂಜೆ 5.25: ಕಂಚಿನ ಕಾದಾಟ ಬಲ್ಗೇರಿಯಾದ ನಿಕೋಲೋವಾ ವಿರುದ್ಧ.

*ಇಂದೇ ಪದಕ ನಿರ್ಧಾರವಾಗುವ ಸ್ಪರ್ಧೆ.

ನೇರಪ್ರಸಾರ: ಸೋನಿ ನೆಟ್‌ವರ್ಕ್, ಡಿಡಿ ಸ್ಪೋರ್ಟ್ಸ್.

27: ಕ್ರೀಡಾಸ್ಪರ್ಧೆಯ 13ನೇ ದಿನವಾದ ಗುರುವಾರ ಒಟ್ಟು 27 ಸ್ವರ್ಣ ಪದಕಗಳು ಪಣಕ್ಕಿವೆ. ಅಥ್ಲೆಟಿಕ್ಸ್‌ನಲ್ಲಿ 8, ಕನೋಯಿಂಗ್‌ನಲ್ಲಿ 4, ಕರಾಟೆ, ಕುಸ್ತಿಯಲ್ಲಿ 3, ಟ್ರ್ಯಾಕ್ ಸೈಕ್ಲಿಂಗ್‌ನಲ್ಲಿ 2, ಸ್ಪೋರ್ಟ್ಸ್ ಕ್ಲೈಂಬಿಂಗ್, ಪುರುಷರ ಹಾಕಿ, ಮ್ಯಾರಥಾನ್ ಈಜು, ಡೈವಿಂಗ್, ಬಾಕ್ಸಿಂಗ್, ಸ್ಕೇಟ್‌ಬೋರ್ಡಿಂಗ್, ಟೇಬಲ್ ಟೆನಿಸ್‌ನಲ್ಲಿ ತಲಾ 1 ಚಿನ್ನದ ಪದಕ ನಿರ್ಧಾರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net