ಆಸ್ಟ್ರೇಲಿಯಾ ತಲುಪಿದ ಟೀಮ್ ಇಂಡಿಯಾ; ಆಟಗಾರರಿಗೆ ಕುಟುಂಬ ಸದಸ್ಯರ ಸಾಥ್

team india web
Published on

ಸಿಡ್ನಿ: ಎರಡು ತಿಂಗಳ ಸುದೀರ್ಘ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ವಿರಾಟ್ ಕೊಹ್ಲಿ ಸಾರಥ್ಯದ ಭಾರತೀಯ ಕ್ರಿಕೆಟ್ ತಂಡ ಗುರುವಾರ ಕಾಂಗರೂ ನೆಲವನ್ನು ತಲುಪಿದೆ. ಕರೊನಾ ಕಾಲದಲ್ಲಿ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ಆಡಲಿರುವ ಭಾರತ ತಂಡದ 25 ಆಟಗಾರರು ವಿಶೇಷವಾದ ಪಿಪಿಇ ಕಿಟ್ ಧರಿಸಿ ಬುಧವಾರ ರಾತ್ರಿ ದುಬೈನಲ್ಲಿ ಸಿಡ್ನಿಗೆ ವಿಮಾನ ಏರಿದ್ದರು.

ಭಾರತ ತಂಡ ಗುರುವಾರ ಕರೊನಾ ಪರೀಕ್ಷೆ ಎದುರಿಸಿ ಮುಂದಿನ 14 ದಿನಗಳ ಕಾಲ ಸಿಡ್ನಿ ಹೊರವಲಯದಲ್ಲಿ ಕ್ವಾರಂಟೈನ್‌ಗೆ ಒಳಗಾಗಲಿದೆ. ಮೊದಲ ಕರೊನಾ ಪರೀಕ್ಷೆಯಲ್ಲೇ ನೆಗೆಟಿವ್ ವರದಿ ಬಂದರೆ, ತಂಡದ ಎಲ್ಲ ಆಟಗಾರರು ಶುಕ್ರವಾರದಿಂದಲೇ ಬ್ಲ್ಯಾಕ್‌ಟೌನ್ ಇಂಟರ್‌ನ್ಯಾಷನಲ್ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ಅಭ್ಯಾಸ ಆರಂಭಿಸಬಹುದಾಗಿದೆ. ಇದಕ್ಕಾಗಿ ಸ್ಥಳೀಯ ನ್ಯೂಸೌತ್ ವೇಲ್ಸ್ ಸರ್ಕಾರ ಟೀಮ್ ಇಂಡಿಯಾಗೆ ವಿಶೇಷ ಅನುಮತಿ ನೀಡಿದೆ.

ಕುಟುಂಬ ಸದಸ್ಯರಿಗೂ ಅವಕಾಶ: ಭಾರತ ತಂಡದ ಆಟಗಾರರ ಕುಟುಂಬದ ಸದಸ್ಯರಿಗೂ ಪ್ರವಾಸಕ್ಕೆ ತೆರಳಲು ನ್ಯೂಸೌತ್ ವೇಲ್ಸ್ ಸರ್ಕಾರ ಕೊನೇಕ್ಷಣದಲ್ಲಿ ಅವಕಾಶ ಕಲ್ಪಿಸಿದೆ. ಕುಟುಂಬ ಸದಸ್ಯರೂ ಕ್ವಾರಂಟೈನ್ ನಿಯಮಾವಳಿ ಪಾಲಿಸುವುದು ಕಡ್ಡಾಯವಾಗಿದೆ.

ಭಾರತ ತಂಡದ ಬಹುತೇಕ ಆಟಗಾರರು ಐಪಿಎಲ್‌ನಲ್ಲಿ ಆಡಿದ್ದು, ಟೂರ್ನಿ ಮುಗಿದ ಬೆನ್ನಲ್ಲೇ ಯುಎಇಯಲ್ಲೇ ರಾಷ್ಟ್ರೀಯ ತಂಡದ ಬಯೋ-ಬಬಲ್ ಪ್ರವೇಶಿಸಿದ್ದರು. ಟೆಸ್ಟ್ ತಂಡದ ಆಟಗಾರರಾದ ಚೇತೇಶ್ವರ ಪೂಜಾರ, ಹನುಮ ವಿಹಾರಿ ಮತ್ತು ತರಬೇತಿ ಸಿಬ್ಬಂದಿ ಕಳೆದ ಒಂದು ತಿಂಗಳಿನಿಂದ ಯುಎಇಯಲ್ಲೇ ಟೀಮ್ ಇಂಡಿಯಾದ ಬಯೋ-ಬಬಲ್‌ನಲ್ಲಿದ್ದರು.

ಮುಂಬೈ ಇಂಡಿಯನ್ಸ್ ತಂಡಕ್ಕೆ 5ನೇ ಬಾರಿ ಐಪಿಎಲ್ ಪ್ರಶಸ್ತಿ ಗೆದ್ದುಕೊಟ್ಟ ರೋಹಿತ್ ಶರ್ಮ ಮಾತ್ರ ಭಾರತ ತಂಡದೊಂದಿಗೆ ತೆರಳದೆ ತವರಿಗೆ ಮರಳಿದ್ದಾರೆ. ಅವರು ದೀಪಾವಳಿ ಹಬ್ಬದ ಬಳಿಕ ಬೆಂಗಳೂರಿನ ಎನ್‌ಸಿಎಗೆ ಬರಲಿದ್ದು, ವೇಗಿ ಇಶಾಂತ್ ಶರ್ಮ ಜತೆಗೆ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಟೆಸ್ಟ್ ಸರಣಿಯ ವೇಳೆ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದ್ದಾರೆ.

ಭಾರತ ತಂಡ ಪ್ರವಾಸದಲ್ಲಿ ತಲಾ 3 ಏಕದಿನ, ಟಿ20 ಮತ್ತು 4 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ನವೆಂಬರ್ 27ರಂದು ಸಿಡ್ನಿಯಲ್ಲಿ ಏಕದಿನ ಸರಣಿ ಆರಂಭಗೊಳ್ಳಲಿದೆ. ಬಹುನಿರೀಕ್ಷಿತ ಟೆಸ್ಟ್ ಸರಣಿ ಡಿಸಂಬರ್ 17ರಂದು ಅಡಿಲೇಡ್‌ನಲ್ಲಿ ಆರಂಭಗೊಳ್ಳಲಿದೆ. ಮೊದಲ ಟೆಸ್ಟ್ ಪಂದ್ಯ ಅಹರ್ನಿಶಿಯಾಗಿ ಸಾಗಲಿದೆ. ಟೆಸ್ಟ್ ಸರಣಿಯ ಪಂದ್ಯಗಳಿಗೆ ಪ್ರೇಕ್ಷಕರಿಗೂ ಪ್ರವೇಶ ಅವಕಾಶ ಕಲ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net