3ನೇ ಟೆಸ್ಟ್‌ಗೆ ಹೆಡಿಂಗ್ಲೆಯಲ್ಲಿ ಅಭ್ಯಾಸ ಆರಂಭಿಸಿದ ವಿರಾಟ್ ಕೊಹ್ಲಿ ಪಡೆ

mayank agarwal for web
Published on

ಲೀಡ್ಸ್: ಪ್ರತಿಷ್ಠಿತ ಲಾರ್ಡ್ಸ್ ಮೈದಾನದಲ್ಲಿ ಭರ್ಜರಿ ಗೆಲುವು ದಾಖಲಿಸಿದ ವಿಶ್ವಾಸದಲ್ಲಿರುವ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ 3ನೇ ಟೆಸ್ಟ್ ಪಂದ್ಯವಾಡುವ ಸಲುವಾಗಿ ಭಾನುವಾರ ಅಭ್ಯಾಸ ಆರಂಭಿಸಿತು. ಹೆಡಿಂಗ್ಲೆ ಸ್ಟೇಡಿಯಂನಲ್ಲಿ ಬುಧವಾರದಿಂದ ಮೂರನೇ ಟೆಸ್ಟ್ ಆರಂಭಗೊಳ್ಳಲಿದೆ. ಮೊದಲ ಟೆಸ್ಟ್ ಪಂದ್ಯ ಮಳೆಯಿಂದ ಡ್ರಾಗೊಂಡರೆ, ಎರಡನೇ ಟೆಸ್ಟ್ ಪಂದ್ಯವನ್ನು ಭಾರತ 151 ರನ್‌ಗಳಿಂದ ಜಯ ದಾಖಲಿಸಿತು. ಇದರಿಂದ 5 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಯಿಂದ ಮುನ್ನಡೆ ಸಾಧಿಸಿದೆ. ಟೀಮ್ ಇಂಡಿಯಾ ಹೆಡಿಂಗ್ಲೆಗೆ ಆಗಮಿಸಿರುವ ಫೋಟೋವನ್ನು ಬಿಸಿಸಿಐ ಟ್ವೀಟ್ ಮಾಡಿದೆ. ಎರಡನೇ ಹಾಗೂ ಮೂರನೇ ಟೆಸ್ಟ್ ಪಂದ್ಯಕ್ಕೂ 10 ದಿನಗಳ ಅಂತರವಿದ್ದು, ಬಯೋಬಬಲ್ ವ್ಯಾಪ್ತಿಯಲ್ಲೇ ಇರುವ ಆಟಗಾರರು, ಕುಟುಂಬ ಸದಸ್ಯರ ಜತೆಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ.

ಲೀಡ್ಸ್‌ಗೆ ಆಗಮಿಸಿದ ಭಾರತ ತಂಡ ಭಾನುವಾರವೇ ಹೆಡಿಂಗ್ಲೆ ಮೈದಾನದಲ್ಲಿ ಅಭ್ಯಾಸ ಆರಂಭಿಸಿತು. 2018ರಲ್ಲಿ ಭಾರತ ತಂಡ 1-4 ರಿಂದ ಹೀನಾಯವಾಗಿ ಸರಣಿ ಸೋತಿದ್ದ ಭಾರತ ತಂಡಕ್ಕೆ ಸೇಡು ತೀರಿಸಿಕೊಳ್ಳುವ ಅವಕಾಶ ದಕ್ಕಿದೆ. ಹಿಂದಿನ ಸರಣಿಗೂ ಪ್ರಸಕ್ತ ಸರಣಿಗೂ ಟೀಮ್ ಇಂಡಿಯಾ ಪಾಳಯದಲ್ಲಿ ಸಾಕಷ್ಟು ವ್ಯತ್ಯಾಸ ಕಾಣುತ್ತಿದೆ. 2018ರಲ್ಲಿ ಎರಡು ಟೆಸ್ಟ್ ಪಂದ್ಯಗಳ 0-2 ರಿಂದ ಹಿನ್ನಡೆಯಲ್ಲಿದ್ದ ಭಾರತ ತಂಡ ಇದೀಗ 1-0 ಯಿಂದ ಮುನ್ನಡೆಯಲ್ಲಿರುವುದೇ ಇದಕ್ಕೆ ಸಾಕ್ಷಿ.

ನಾಟಿಂಗ್‌ಹ್ಯಾಂನಲ್ಲಿ ನಡೆದ ಮೊದಲ ಪಂದ್ಯದಲ್ಲೂ ಪ್ರಭುತ್ವ ಸಾಧಿಸಿದ್ದ ಭಾರತ ತಂಡ, ಕಡೇ ದಿನದಾಟದಲ್ಲಿ ಮಳೆಯಿಂದಾಗಿ ಗೆಲುವು ಕೈಚೆಲ್ಲಿತ್ತು. ಇದೀಗ ಆಂಗ್ಲರ ನೆಲದಲ್ಲಿ ಐತಿಹಾಸ ಟೆಸ್ಟ್ ಸರಣಿ ಜಯಿಸುವ ಅಪರೂಪದ ಅವಕಾಶ ಟೀಮ್ ಇಂಡಿಯಾ ಮುಂದಿದೆ. ಕನ್ನಡಿಗ ರಾಹುಲ್ ಹಾಗೂ ರೋಹಿತ್ ಶರ್ಮ ಆರಂಭಿಕ ಜೋಡಿ ಉತ್ತಮ ಆರಂಭ ನೀಡುತ್ತಿದ್ದರೆ, ಮೊಹಮದ್ ಶಮಿ, ಜಸ್‌ಪ್ರೀತ್ ಬುಮ್ರಾ, ಇಶಾಂತ್ ಶರ್ಮ ಹಾಗೂ ಮೊಹಮದ್ ಸಿರಾಜ್ ಒಳಗೊಂಡ ವೇಗಿಗಳ ಪಡೆ ತಂಡಕ್ಕೆ ಮೇಲುಗೈ ತಂದುಕೊಟ್ಟಿದೆ. ಜತೆಗೆ ಬ್ಯಾಟಿಂಗ್‌ನಲ್ಲೂ ಈ ವಿಭಾಗ ತಂಡಕ್ಕೆ ಉತ್ತಮ ಕೊಡುಗೆ ನೀಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net