2ನೇ ತ್ರಿದಿನ ಅಭ್ಯಾಸ ಪಂದ್ಯಕ್ಕೆ ವಿರಾಟ್ ಕೊಹ್ಲಿ ಅಲಭ್ಯ ?

virat kohli for web new
Published on

ಸಿಡ್ನಿ: ಆಸ್ಟ್ರೇಲಿಯಾ ಎದುರು ಏಕದಿನ ಸರಣಿ ಸೋಲಿಗೆ ಪ್ರತೀಕಾರವಾಗಿ ಟಿ20 ಸರಣಿಯ ಜಯಿಸಿರುವ ಭಾರತ ತಂಡ, ಇದೀಗ ಟೆಸ್ಟ್ ಸರಣಿಯತ್ತ ತನ್ನ ಚಿತ್ತ ಹರಿಸಿದೆ. ಭಾರತ ಎ ತಂಡ ಮೊದಲ ತ್ರಿದಿನ ಅಭ್ಯಾಸ ಪಂದ್ಯವನ್ನು ಆಸ್ಟ್ರೇಲಿಯಾ ಎ ವಿರುದ್ಧ ಈಗಾಗಲೇ ಆಡಿದೆ. ಚುಟುಕು ಕ್ರಿಕೆಟ್ ಸರಣಿ ಮುಕ್ತಾಯಗೊಂಡ ಬೆನ್ನಲ್ಲೇ ಡಿ.11 ರಿಂದ ನಡೆಯಲಿರುವ ಎರಡನೇ ತ್ರಿದಿನ ಅಭ್ಯಾಸ ಪಂದ್ಯಕ್ಕೆ ಪೂರ್ಣ ಪ್ರಯಾಣದ ತಂಡ ಸಿದ್ಧಗೊಳ್ಳುತ್ತಿದೆ. ಪಂದ್ಯ ಅಹರ್ನಿಶಿಯಾಗಿ ನಡೆಯುತ್ತಿದ್ದು, ಡಿ.17 ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ (ಅಹರ್ನಿಶಿ) ಪಂದ್ಯಕ್ಕೆ ತಂಡದ ಸಂಯೋಜನೆಗೆ ಅಭ್ಯಾಸ ಪಂದ್ಯ ಸಹಕಾರಿಯಾಗಲಿದೆ. ಆದರೆ, ಸತತ 2 ಸರಣಿಗಳಲ್ಲಿ ಆಡಿ ಬಳಲಿರುವ ನಾಯಕ ವಿರಾಟ್ ಕೊಹ್ಲಿ ಎರಡನೇ ತ್ರಿದಿನ ಅಭ್ಯಾಸ ಪಂದ್ಯದಿಂದ ಹಿಂದೆ ಉಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಡಿ.11 ರಿಂದ ಆರಂಭವಾಗಲಿರುವ ಎರಡನೇ ತ್ರಿದಿನ ಅಭ್ಯಾಸ ಪಂದ್ಯಕ್ಕೆ ವಿರಾಟ್ ಕೊಹ್ಲಿ ಅಲಭ್ಯರಾಗುವ ಸಾಧ್ಯತೆಗಳಿವೆ. ‘ನಾನು ಆಡುವ ಕುರಿತು ಬುಧವಾರ ತೀರ್ಮಾನ ಕೈಗೊಳ್ಳುವೆ. ಮೊದಲಿಗೆ ಫಿಸಿಯೋ ಜತೆಗೆ ಚರ್ಚೆ ನಡೆಸುವೆ, ನಂತರವಷ್ಟೇ ಆಡುವ ನಿರ್ಧಾರ ಮಾಡುವೆ. ನನಗೂ ಮೂರು ದಿನ ಪೂರ್ತಿ ಆಡಲು ಮನಸಿದ್ದು, ಫಿಸಿಯೋ ತೀರ್ಮಾನವೇ ಅಂತಿಮ ತೀರ್ಮಾನವಾಗಲಿದೆ ಎಂದು ಕೊಹ್ಲಿ ಹೇಳಿದ್ದಾರೆ. ಇಂಥ ಕಠಿಣ ಸ್ಥಿತಿಯಲ್ಲೂ ಆಟಗಾರರ ನಿರ್ವಹಣೆ ಮೆಚ್ಚುವಂಥದ್ದು ಎಂದು ತಂಡದ ಆಟಗಾರರ ನಿರ್ವಹಣೆಯನ್ನು ಕೊಹ್ಲಿ ಇದೇ ವೇಳೆ ಶ್ಲಾಘಿಸಿದರು.

ಡಿ.17 ರಿಂದ ಅಡಿಲೇಡ್‌ನಲ್ಲಿ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭವಾಗಲಿದ್ದು, ಹೊನಲು-ಬೆಳಕಿನಲ್ಲಿ ನಡೆಯಲಿದೆ. ಮೊದಲ ಟೆಸ್ಟ್ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಪಿತೃತ್ವದ ರಜೆ ಮೇಲೆ ಭಾರತಕ್ಕೆ ವಾಪಸಾಗಲಿದ್ದಾರೆ. ಉಳಿದ ಮೂರು ಪಂದ್ಯಗಳಿಗೆ ಉಪನಾಯಕ ಅಜಿಂಕ್ಯ ರಹಾನೆ ತಂಡದ ವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net