ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ; ಪಾಕ್‌ಗೆ ಸೋಲುಣಿಸಿ ಸೆಮೀಸ್‌ಗೇರಿದ ಭಾರತ

hockey indian team win for web new
Published on

ಢಾಕಾ: ಭರ್ಜರಿ ನಿರ್ವಹಣೆ ತೋರಿದ ಭಾರತ ತಂಡ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 3-1 ಗೋಲುಗಳಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿತು. ಮೊದಲ ಪಂದ್ಯದಲ್ಲಿ ಕೊರಿಯಾದ ಎದುರು ಡ್ರಾಗೆ ತೃಪ್ತಿಪಟ್ಟಿದ್ದ ಭಾರತ ತಂಡ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 9-0 ಗೋಲಿನಿಂದ ಮಣಿಸಿತ್ತು. ಟೂರ್ನಿಯಲ್ಲಿ ಸತತ 3ನೇ ಪಂದ್ಯದಲ್ಲಿ ಅಜೇಯ ಸಾಧನೆ ಮಾಡಿದ ಟೋಕಿಯೊ ಒಲಿಂಪಿಕ್ಸ್ ಕಂಚು ವಿಜೇತ ಭಾರತ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ಮೂಲಕ ಉಪಾಂತ್ಯದಲ್ಲಿ ಸ್ಥಾನ ಖಚಿತಪಡಿಸಿಕೊಂಡಿತು.

ಪಂದ್ಯದ ಆರಂಭಿಕ ನಿಮಿಷಗಳಿಂದಲೂ ಪ್ರಭುತ್ವ ಸಾಧಿಸಿದ ಭಾರತ ತಂಡದ ಆಟಗಾರರು ಚೆಂಡಿನ ಮೇಲೆ ಹೆಚ್ಚು ನಿಯಂತ್ರಣ ಸಾಧಿಸಿದರು. 8ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಹರ್ಮಾನ್‌ಪ್ರೀತ್ ಸಿಂಗ್ ಗೋಲಾಗಿ ಪರಿವರ್ತಿಸಿದರು. ಇದರಿಂದ ಮೊದಲ ಕ್ವಾರ್ಟರ್‌ನಲ್ಲಿ ಭಾರತ ತಂಡ 1-0 ಮುನ್ನಡೆ ಸಾಧಿಸಿತು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ 2ನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು ಗೋಲು ದಾಖಲಿಸಲು ವಿಫಲವಾದವು. 3ನೇ ಕ್ವಾರ್ಟರ್‌ನಲ್ಲಿ ಆಕಾಶ್‌ದೀಪ್ ಸಿಂಗ್ ಫೀಲ್ಡ್ ಗೋಲಿನ ಮೂಲಕ ಭಾರತದ ಮುನ್ನಡೆಯನ್ನು 2-0ಗೆ ಹಿಗ್ಗಿಸಿದರು.

ಪ್ರತಿಯಾಗಿ ಪಾಕ್ ತಂಡ ಗೋಲು ಬಾರಿಸಿ ತಿರುಗೇಟು ನೀಡಲು ಯತ್ನಿಸಿತು. ಬಳಿಕ 4ನೇ ಹಾಗೂ ಅಂತಿಮ ಕ್ವಾರ್ಟರ್‌ನ 53ನೇ ನಿಮಿಷದಲ್ಲಿ ಹರ್ಮಾನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ದಾಖಲಿಸಿದರು. ಇದರಿಂದ ಪಂದ್ಯದಲ್ಲಿ 3-1 ಮುನ್ನಡೆ ಸಾಧಿಸಿದ ಭಾರತ ತಂಡ ಗೆಲುವಿನ ನಗೆ ಬೀರಿತು.

*ಭಾರತಕ್ಕೆ ಮುಂದಿನ ಪಂದ್ಯ

ಎದುರಾಳಿ: ಜಪಾನ್

ಯಾವಾಗ: ಭಾನುವಾರ

ಆರಂಭ: ಮಧ್ಯಾಹ್ನ 3.00

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net