

ಚೆನ್ನೈ: ಬಹುನಿರೀಕ್ಷಿತ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನ ಆಟಗಾರರ ಹರಾಜು ಪ್ರಕ್ರಿಯೆಯೂ ಗುರುವಾರ ನಡೆಯಲಿದೆ. ಹರಾಜು ಪ್ರಕ್ರಿಯೆಗೆ 292 ಆಟಗಾರರು ಹೆಸರು ಅಂತಿಮಗೊಳಿಸಲಾಗಿದ್ದು, ಈ ಪೈಕಿ 164 ಭಾರತೀಯ ಕ್ರಿಕೆಟಿಗರು ಹಾಗೂ 128 ವಿದೇಶಿ ಆಟಗಾರರಿದ್ದಾರೆ. ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್, ಇಂಗ್ಲೆಂಡ್‌ನ ಸ್ಪಿನ್ ಆಲ್ರೌಂಡರ್ ಮೊಯಿನ್ ಅಲಿ ಫ್ರಾಂಚೈಸಿಗಳ ಗಮನಸೆಳೆಯುವ ಸಾಧ್ಯತೆಗಳಿವೆ. ಕರೊನಾ ವೈರಸ್ ಭೀತಿಯಿಂದ ಕಳೆದ ಬಾರಿ 13ನೇ ಐಪಿಎಲ್ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಾಗಿತ್ತು. ಇದೀಗ ಏಪ್ರಿಲ್ ಎರಡನೇ ವಾರದಿಂದ ಭಾರತದಲ್ಲೇ ಟೂರ್ನಿ ಆರಂಭಿಸಲು ಸಿದ್ಧತೆಗಳು ನಡೆಯುತ್ತಿವೆ.
* 61 ಆಟಗಾರರಿಗೆ ಹರಾಜು
8 ಫ್ರಾಂಚೈಸಿಗಳಿಂದ ಫ್ರಾಂಚೈಸಿಗಳಿಂದ 61 ಸ್ಥಾನಗಳು ಖಾಲಿ ಉಳಿದಿದ್ದು, ಈ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅತಿ ಹೆಚ್ಚು ಅಂದರೆ 11 ಆಟಗಾರರನ್ನು ಕೊಂಡುಕೊಳ್ಳಬಹುದು. ಆರ್‌ಸಿಬಿ ಬಳಿ 35.4 ಕೋಟಿ ರೂಪಾಯಿ ಮೊತ್ತ ಉಳಿದಿದೆ. ಸನ್‌ರೈಸರ್ಸ್ ಹೈದರಾಬಾದ್ ಕೇವಲ 3 ಆಟಗಾರರನಷ್ಟೇ ಕೊಂಡುಕೊಳ್ಳಬೇಕಿದ್ದು, 10.75 ಕೋಟಿ ರೂ. ಉಳಿಸಿಕೊಂಡಿದೆ. ಕನ್ನಡಿಗ ಅನಿಲ್ ಕುಂಬ್ಳೆ ಮಾರ್ಗದರ್ಶನದ ‘ಪಂಜಾಬ್ ಕಿಂಗ್ಸ್’ ಬಳಿ ಅತಿಹೆಚ್ಚು ಮೊತ್ತ 53.20 ಕೋಟಿ ರೂಪಾಯಿ ಉಳಿದಿದ್ದು, ಇದರಲ್ಲಿ 9 ಆಟಗಾರರನ್ನು ಪಡೆಯಬಹುದು.
* 10 ಮಂದಿಯ ಮೂಲ ಬೆಲೆ 2 ಕೋಟಿ
ಭಾರತದ ಹರ್ಭಜನ್ ಸಿಂಗ್, ಕೇದಾರ್ ಜಾಧವ್, ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಇಂಗ್ಲೆಂಡ್ ತಂಡದ ಜೇಸನ್ ರಾಯ್, ಲಿಯಾಮ್ ಫ್ಲೆಂಕೆಟ್, ಮಾರ್ಕ್ ವುಡ್, ಸ್ಯಾಮ್ ಬಿಲ್ಲಿಂಗ್ಸ್, ಮೊಯಿನ್ ಅಲಿ, ಬಾಂಗ್ಲಾದೇಶದ ಶಕೀಬ್ ಅಲ್ 2 ಕೋಟಿ ರೂ ಮೂಲಬೆಲೆ ಹೊಂದಿರುವ ವಿದೇಶಿ ಆಟಗಾರರಾಗಿದ್ದಾರೆ.
* ಮ್ಯಾಕ್ಸ್‌ವೆಲ್ ಚಿತ್ತ ಎಲ್ಲರ ಚಿತ್ತ
ಹಲವು ವರ್ಷಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ತಂಡದ ಪ್ರಮುಖ ಭಾಗವಾಗಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಕಳೆದ ಆವೃತ್ತಿಯಲ್ಲಿ ಕಳಪೆ ನಿರ್ವಹಣೆಯಿಂದ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಸರಾಸರಿ 22 ರಂತೆ ರನ್‌ಗಳಿಸಿದ್ದರು. ಒಟ್ಟಾರೆ 82 ಪಂದ್ಯಗಳಿಂದ 1505 ರನ್ ಪೇರಿಸಿರುವ ಮ್ಯಾಕ್ಸ್‌ವೆಲ್ ಭಾರಿ ಬೆಲೆಗೆ ಸೇಲಾಗುವ ಸಾಧ್ಯತೆಗಳಿವೆ. ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳು ಮ್ಯಾಕ್ಸ್‌ವೆಲ್ ಕೊಂಡುಕೊಳ್ಳಲು ಆಸಕ್ತಿ ವಹಿಸಿವೆ ಎಂದು ಹೇಳಲಾಗಿದೆ. ಉತ್ತಮ ಫಾರ್ಮ್‌ನಲ್ಲಿರುವ ಮೊಯಿನ್ ಅಲಿ, ಹಾಗೆಯೇ ಶಕೀಬ್ ಕೂಡ ದೊಡ್ಡ ಮೊತ್ತದ ನಿರೀಕ್ಷೆಯಲ್ಲಿದ್ದಾರೆ.
* ಅಜರುದ್ದೀನ್‌ಗೆ ಸಿಗುವುದೇ ಬಂಪರ್
ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದ ಕೇರಳದ ಮೊಹಮದ್ ಅಜರುದ್ದೀನ್ ಮೇಲೆ ಫ್ರಾಂಚೈಸಿಗಳು ಹೆಚ್ಚಿನ ನಿಗಾವಹಿಸುವ ಸಾಧ್ಯತೆಗಳಿವೆ. ದೇಶೀಯ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಗಮನಾರ್ಹ ನಿರ್ವಹಣೆ ತೋರಿದ್ದ ತಮಿಳುನಾಡಿನ ಶಾರೂಕ್ ಖಾನ್, ಆಲ್ರೌಂಡರ್ ಸೋನು ಯಾದವ್, ಬರೋಡದ ವಿಷ್ಣು ಸೋಲಂಕಿ ಹಾಗೂ ಬಂಗಾಳದ ಅಕ್ಷ್ ದೀಪ್ ಫ್ರಾಂಚೈಸಿಗಳ ಗಮನಸೆಳೆಯುವ ನಿರೀಕ್ಷೆಯಿದೆ. ಇವರುಗಳು ಮೂಲ ಬೆಲೆ 20 ಲಕ್ಷ ರೂಪಾಯಿ ಹೊಂದಿದ್ದಾರೆ.
* ಕಣದಲ್ಲಿ ಸಚಿನ್ ಪುತ್ರ ಅರ್ಜುನ್
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್, ಆಟಗಾರರ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೂಲ ಬೆಲೆ 20 ಲಕ್ಷ ರೂ. ಹೊಂದಿದ್ದು, ಕಳೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಮುಂಬೈ ತಂಡದ ಪರ ಪದಾರ್ಪಣೆ ಮಾಡುವ ಮೂಲಕ 21 ವರ್ಷದ ಎಡಗೈ ವೇಗಿ ಅರ್ಜುನ್ ಐಪಿಎಲ್ ಹರಾಜಿಗೆ ಅರ್ಹತೆ ಸಂಪಾದಿಸಿದ್ದರು.
* ಮುಂಬೈ ಇಂಡಿಯನ್ಸ್
ಉಳಿದಿರುವ ಮೊತ್ತ: 15.35 ಕೋಟಿ ರೂ.
ಖಾಲಿ ಉಳಿದಿರುವ ಸ್ಥಾನಗಳು: 7
ವಿದೇಶಿ ಕೋಟಾ: 4
* ಆರ್‌ಸಿಬಿ
ಉಳಿದಿರುವ ಮೊತ್ತ : 35.4 ಕೋಟಿ ರೂ.
ಖಾಲಿ ಉಳಿದಿರುವ ಸ್ಥಾನಗಳು: 11
ವಿದೇಶಿ ಕೋಟಾ: 3
* ರಾಜಸ್ಥಾನ ರಾಯಲ್ಸ್
ಉಳಿದಿರುವ ಮೊತ್ತ : 37.85 ಕೋಟಿ ರೂ.
ಖಾಲಿ ಉಳಿದಿರುವ ಸ್ಥಾನಗಳು: 9
ವಿದೇಶಿ ಕೋಟಾ: 3
* ಸನ್‌ರೈಸರ್ಸ್ ಹೈದರಾಬಾದ್
ಉಳಿದಿರುವ ಮೊತ್ತ : 10.75 ಕೋಟಿ ರೂ.
ಖಾಲಿ ಉಳಿದಿರುವ ಸ್ಥಾನಗಳು: 3
ವಿದೇಶಿ ಕೋಟಾ: 1
* ಡೆಲ್ಲಿ ಕ್ಯಾಪಿಟಲ್ಸ್
ಉಳಿದಿರುವ ಮೊತ್ತ : 13.4 ಕೋಟಿ ರೂ.
ಖಾಲಿ ಉಳಿದಿರುವ ಸ್ಥಾನಗಳು: 8
ವಿದೇಶಿ ಕೋಟಾ: 3
* ಪಂಜಾಬ್ ಕಿಂಗ್ಸ್
ಉಳಿದಿರುವ ಮೊತ್ತ : 53.2 ಕೋಟಿ ರೂ.
ಖಾಲಿ ಉಳಿದಿರುವ ಸ್ಥಾನಗಳು: 9
ವಿದೇಶಿ ಕೋಟಾ: 5
* ಕೋಲ್ಕತ ನೈಟ್ ರೈಡರ್ಸ್
ಉಳಿದಿರುವ ಮೊತ್ತ : 10.75 ಕೋಟಿ ರೂ.
ಖಾಲಿ ಉಳಿದಿರುವ ಸ್ಥಾನಗಳು: 8
ವಿದೇಶಿ ಕೋಟಾ: 2
* ಚೆನ್ನೈ ಸೂಪರ್ ಕಿಂಗ್ಸ್
ಉಳಿದಿರುವ ಮೊತ್ತ : 19.9 ಕೋಟಿ ರೂ.
ಖಾಲಿ ಉಳಿದಿರುವ ಸ್ಥಾನಗಳು: 6
ವಿದೇಶಿ ಕೋಟಾ: 1
ಹರಾಜು ಪ್ರಕ್ರಿಯೆ ಆರಂಭ: ಮಧ್ಯಾಹ್ನ 3 ಗಂಟೆಗೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್