

ನವದೆಹಲಿ: 10 ಹೊಸಮುಖ ಸೇರಿದಂತೆ 16 ಸದಸ್ಯರ ಭಾರತ ಪುರುಷರ ಹಾಕಿ ತಂಡವನ್ನು ಟೋಕಿಯೊ ಒಲಿಂಪಿಕ್ ಕ್ರೀಡಾಕೂಟಕ್ಕೆ ಶುಕ್ರವಾರ ಪ್ರಕಟಿಸಲಾಯಿತು. ಜುಲೈ 23 ರಿಂದ ಆಗಸ್ಟ್ 8ರವರೆಗೆ ನಡೆಯಲಿರುವ ಕ್ರೀಡಾಕೂಟದಲ್ಲಿ 2000ದ ಸಿಡ್ನಿ ಒಲಿಂಪಿಕ್ಸ್ ಬಳಿಕ ಮೊದಲ ಬಾರಿಗೆ ಕರ್ನಾಟಕದ ಆಟಗಾರರು ಭಾರತ ಹಾಕಿ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಕಳೆದ ಬಾರಿಯ ರಿಯೋ ಒಲಿಂಪಿಕ್ಸ್‌ನಲ್ಲಿ ತಂಡದ ಉಪನಾಯಕರಾಗಿದ್ದ ಎಸ್‌ವಿ ಸುನೀಲ್ ಈ ಬಾರಿ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ವಿಫಲರಾಗಿದ್ದಾರೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಎಸ್‌ವಿ ಸುನೀಲ್, ವಿಆರ್ ರಘುನಾಥ್, ಎಸ್.ಕೆ.ಉತ್ತಪ್ಪ ಹಾಗೂ ನಿಕ್ಕಿನ್ ತಿಮ್ಮಯ್ಯ ಆಡಿದ್ದರು.
ಈ ಬಾರಿ 10 ಮಂದಿ ಹೊಸಮುಖಗಳಿಗೆ ಸ್ಥಾನ ನೀಡಲಾಗಿದೆ. 16 ಮಂದಿ ಆಟಗಾರರ ಪೈಕಿ ಕೇವಲ 6 ಮಂದಿಯಷ್ಟೇ ರಿಯೋ ಒಲಿಂಪಿಕ್ಸ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ನಾಯಕ ಪಿಆರ್ ಶ್ರೀಜೇಶ್, ಮಿಡ್ ಫೀಲ್ಡರ್ ಮನ್‌ಪ್ರೀತ್ ಸಿಂಗ್, ಡಿಫೆಂಡರ್‌ಗಳಾದ ಹರ್ಮಾನ್‌ಪ್ರೀತ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಸುರೇಂದರ್ ಕುಮಾರ್ ಹಾಗೂ ಫಾರ್ವರ್ಡ್ ವಿಭಾಗದಲ್ಲಿ ಮಂದೀಪ್ ಸಿಂಗ್ ಹಿಂದಿನ ಒಲಿಂಪಿಕ್ಸ್‌ನಲ್ಲಿ ಆಡಿದ್ದರು. ಒಲಿಂಪಿಕ್ಸ್ ಇತಿಹಾಸದಲ್ಲಿ ಸತತ 8 ಬಾರಿ ಸ್ವರ್ಣ ಪದಕ ಜಯಿಸಿದ್ದ ಭಾರತ ತಂಡ, 1980ರಲ್ಲಿ ಕಡೇ ಬಾರಿಗೆ ಪದಕ ಜಯಿಸಿದೆ.
ಭಾರತ ತಂಡ: ಗೋಲುಕೀಪರ್: ಪಿಆರ್ ಶ್ರೀಜೇಶ್ (ನಾಯಕ),ಡಿಫೆಂಡರ್ಸ್: ಹರ್ಮಾನ್‌ಪ್ರೀತ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಸುರೇಂದರ್ ಕುಮಾರ್, ಅಮಿತ್ ರೊಹಿದಾಸ್, ಬೀರೇಂದ್ರ ಲಾಕ್ರ. ಮಿಡ್‌ಫೀಲ್ಡರ್ಸ್: ಹಾರ್ದಿಕ್ ಸಿಂಗ್, ಮನ್‌ಪ್ರೀತ್ ಸಿಂಗ್, ವಿವೇಕ್ ಸಾಗರ ಪ್ರಸಾದ್, ನೀಲಕಂಠ ಶರ್ಮ, ಸುಮಿತ್. ಫಾರ್ವರ್ಡ್ಸ್: ಶಂಶೀರ್ ಸಿಂಗ್, ದಿಲ್‌ಪ್ರೀತ್ ಸಿಂಗ್, ಗುರ್ಜಂತ್ ಸಿಂಗ್, ಲಲಿತ್ ಕುಮಾರ್ ಉಪಾದ್ಯಯ, ಮಂದೀಪ್ ಸಿಂಗ್.