

ಮೊನಾಕೊ: ಭಾರತದ ಮಾಜಿ ಅಥ್ಲೀಟ್ ಅಂಜು ಬಾಬಿ ಜಾರ್ಜ್, ವಿಶ್ವ ಅಥ್ಲೆಟಿಕ್ಸ್ ವತಿಯಿಂದ ನೀಡಲಾಗುವ ‘ವರ್ಷದ ಮಹಿಳೆ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. 44 ವರ್ಷದ ಅಂಜು ದೇಶದಲ್ಲಿ ಯುವ ಪ್ರತಿಭಾನ್ವೇಷಣೆಯಲ್ಲಿ ತೊಡಗಿಕೊಂಡಿರುವುದಕ್ಕೆ ಮತ್ತು ಲಿಂಗ ಸಮಾನತೆಗೆ ಶ್ರಮಿಸುತ್ತಿರುವುದಕ್ಕಾಗಿ ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಪದಕ ಜಯಿಸಿರುವ ಭಾರತದ ಏಕೈಕ ಅಥ್ಲೀಟ್ ಎನಿಸಿದ್ದು, ಬುಧವಾರ ರಾತ್ರಿ ವರ್ಚುವಲ್ ಮೂಲಕ ನಡೆದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವ ಸ್ವೀಕರಿಸಿದರು.
2003ರಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನ ಲಾಂಗ್‌ಜಂಪ್ ಸ್ಪರ್ಧೆಯಲ್ಲಿ ಅಂಜು ಕಂಚಿನ ಪದಕ ಜಯಿಸಿದ್ದರು. ‘ಅಥ್ಲೆಟಿಕ್ಸ್‌ನಿಂದ ನಿವೃತ್ತಿಯಾದ ಬಳಿಕವೂ ಅಂಜು ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಯುವ ಅಥ್ಲೀಟ್‌ಗಳಿಗೆ ತರಬೇತಿ ನೀಡುವ ಸಲುವಾಗಿ 2016ರಲ್ಲಿ ಬೆಂಗಳೂರಿನಲ್ಲಿ ಅಕಾಡೆಮಿ ಸ್ಥಾಪಿಸಿದ್ದಾರೆ. ಅಂಜು ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಅಥ್ಲೀಟ್‌ಗಳು ಇತ್ತೀಚೆಗಷ್ಟೇ 20 ವಯೋಮಿತಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಪದಕ ಜಯಿಸಿದ್ದರು’ ಎಂದು ವಿಶ್ವ ಅಥ್ಲೆಟಿಕ್ಸ್ ತಿಳಿಸಿದೆ.