

ನವದೆಹಲಿ: ಭಾರತೀಯ ಹಾಕಿಗೆ ಈಗ 100 ವರ್ಣರಂಜಿತ ವರ್ಷಗಳ ಸಂಭ್ರಮ. ಈ ಹಿನ್ನೆಲೆಯಲ್ಲಿ ಶುಕ್ರವಾರದಿಂದ ದೇಶದೆಲ್ಲೆಡೆ ಇದರ ಸಂಭ್ರಮಾಚರಣೆ ಆರಂಭಗೊಂಡಿದ್ದು, ಮುಂದಿನ ಒಂದು ವರ್ಷದಲ್ಲಿ ದೇಶದ 550 ಜಿಲ್ಲೆಗಳಲ್ಲಿ 36 ಸಾವಿರಕ್ಕೂ ಅಧಿಕ ಆಟಗಾರರು 1,400ಕ್ಕೂ ಅಧಿಕ ಹಾಕಿ ಪಂದ್ಯಗಳನ್ನು ಆಡಲಿದ್ದಾರೆ.
ಶುಕ್ರವಾರ ಬೆಳಗ್ಗೆ ರಾಷ್ಟ್ರ ರಾಜಧಾನಿಯ ಮೇಜರ್ ಧ್ಯಾನ್ಚಂದ್ ಸ್ಟೇಡಿಯಂನಲ್ಲಿ ಈ ಸಂಭ್ರಮಾಚರಣೆಯ ಮೊದಲ ಭಾಗವಾಗಿ ವಿಶೇಷ ಕಾರ್ಯಕ್ರಮ ನಡೆಯಿತು. ಈ ವೇಳೆ ಕ್ರೀಡಾ ಸಚಿವರ ಇಲೆವೆನ್ ಮತ್ತು ಹಾಕಿ ಇಂಡಿಯಾ ಮಿಶ್ರ ಇಲೆವೆನ್ ನಡುವೆ 30 ನಿಮಿಷಗಳ ಪ್ರದರ್ಶನ ಹಾಕಿ ಪಂದ್ಯ ನಡೆಯಿತು ಮತ್ತು ಕ್ರೀಡಾ ಸಚಿವರ ತಂಡ 3-1 ಗೋಲುಗಳಿಂದ ಜಯಿಸಿತು.
ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ, ಕೇಂದ್ರ ಸಚಿವ ಕಿರಣ್ ರಿಜಿಜು, ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ರ್ಟಿಕಿ ಜತೆಗೆ ಒಲಿಂಪಿಕ್ಸ್ ಸ್ವರ್ಣ ಪದಕ ವಿಜೇತ ಗುರ್ಬಕ್ಷ್ ಸಿಂಗ್, ಅಸ್ಲಾಂ ಶೇರ್, ಅಜಿತ್ಪಾಲ್ ಸಿಂಗ್, ಅಶೋಕ್ ಕುಮಾರ್, ಬಿಪಿ ಗೋವಿಂದ ಸಹಿತ ಹಲವು ಮಾಜಿ ಹಾಕಿ ಆಟಗಾರರು ಹಾಜರಿದ್ದರು.
ಭಾರತ ವಿಶ್ವದಲ್ಲೇ ಅತ್ಯಂತ ಯಶಸ್ವಿ ಹಾಕಿ ರಾಷ್ಟ್ರವೆನಿಸಿದ್ದು, 8 ಒಲಿಂಪಿಕ್ಸ್ ಸ್ವರ್ಣ ಪದಕ ಮತ್ತು 13 ಬಾರಿ ಒಲಿಂಪಿಕ್ಸ್ನಲ್ಲಿ ಪೋಡಿಯಂ ಏರಿದ ದಾಖಲೆಯನ್ನು ಹೊಂದಿದೆ. ಇದಲ್ಲದೆ 1975ರಲ್ಲಿ ಏಕೈಕ ಬಾರಿ ಹಾಕಿ ವಿಶ್ವಕಪ್ ಜಯಿಸಿದ್ದು, ಏಷ್ಯನ್ ಗೇಮ್ಸ್ನಲ್ಲಿ 4 ಬಾರಿ ಚಿನ್ನದ ಪದಕಕ್ಕೆ ಕೊರಳೊಡ್ಡಿದೆ. 4 ಬಾರಿ ಏಷ್ಯಾಕಪ್ ಗೆದ್ದಿದ್ದು, 5 ಬಾರಿ ಸುಲ್ತಾನ್ ಅಜ್ಲಾನ್ ಷಾ ಟ್ರೋಫಿಯಲ್ಲಿ ಚಾಂಪಿಯನ್ ಪಟ್ಟವೇರಿದೆ. ಮೇಜರ್ ಧ್ಯಾನ್ಚಂದ್, ಲೆಸ್ಲಿ ಕ್ಲೌಡಿಯಸ್, ಬಲ್ಬೀರ್ ಸಿಂಗ್, ಉಧಮ್ ಸಿಂಗ್, ಧನರಾಜ್ ಪಿಳ್ಳೆ ಮುಂತಾದ ದಿಗ್ಗಜ ಆಟಗಾರರು, ಭಾರತೀಯ ಹಾಕಿಯನ್ನು ವಿಶ್ವಮಟ್ಟದಲ್ಲಿ ಬೆಳಗಿಸಿದ್ದಾರೆ.
1925ರ ನವೆಂಬರ್ 7ರಂದು ಭಾರತೀಯ ಹಾಕಿ ಒಕ್ಕೂಟ (ಈಗಿನ ಹಾಕಿ ಇಂಡಿಯಾ) ರಚನೆಯಾದ ಹಿನ್ನೆಲೆಯಲ್ಲಿ ಈ ಶತಮಾನೋತ್ಸವವನ್ನು ಆಚರಿಸಲಾಗುತ್ತಿದೆ. 1928ರಲ್ಲಿ ಭಾರತ ಹಾಕಿ ತಂಡ ಮೊದಲ ಬಾರಿ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿತ್ತು.
*ಒಲಿಂಪಿಕ್ಸ್ನಲ್ಲಿ ಹಾಕಿ ಮೂಲಕವೇ ಭಾರತ ಮೊದಲ ಬಾರಿ, ಕ್ರೀಡೆಯಲ್ಲಿ ತಾನೇನು ಸಾಧಿಸಬಲ್ಲೆ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿತ್ತು. ಭಾರತೀಯ ಹಾಕಿ ಇತಿಹಾಸ ಅತ್ಯಂತ ಶ್ರೀಮಂತವಾಗಿದೆ. ಭಾರತೀಯ ಹಾಕಿ ಈಗ ಮತ್ತೆ ಮೇಲೆದ್ದು ಬಂದಿದ್ದು, ಇನ್ನೊಂದು ಒಲಿಂಪಿಕ್ಸ್ ಪದಕದ ಮೇಲೆ ಕಣ್ಣಿಟ್ಟಿದೆ.
| ಮನ್ಸುಖ್ ಮಾಂಡವೀಯ, ಕ್ರೀಡಾ ಸಚಿವ