

ಕ್ಯಾನ್‌ಬೆರಾ: ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಆಯೋಜಿಸಿದ್ದ ಆಹ್ವಾನಿತ ಔತಣ ಕೂಟದಲ್ಲಿ ಪ್ರವಾಸಿ ಭಾರತ ಕ್ರಿಕೆಟ್ ತಂಡದ ಸದಸ್ಯರು ಗುರುವಾರ ಪಾಲ್ಗೊಂಡರು. ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಇಲೆವೆನ್ ತಂಡದ ಆಟಗಾರರು ಸಾಥ್ ನೀಡಿದರು.
ಮನುಕಾ ಓವಲ್‌ನಲ್ಲಿ ಶನಿವಾರ ಹಾಗೂ ಭಾನುವಾರ ನಡೆಯಲಿರುವ ದ್ವಿದಿನ ಪಿಂಕ್‌ಬಾಲ್ ಅಭ್ಯಾಸ ಪಂದ್ಯ ಆಡಲು ಬುಧವಾರ ಕ್ಯಾನ್‌ಬೆರಾ ತೆರಳಿರುವ ರೋಹಿತ್ ಶರ್ಮ ಪಡೆಗೆ ಆಸೀಸ್ ಪಾರ್ಲಿಮೆಂಟ್ ಹೌಸ್‌ನಲ್ಲಿ ಭವ್ಯ ಸ್ವಾಗತ ದೊರೆಯಿತು. ಶಿಷ್ಟಾಚಾರ ಪ್ರಕಾರ ಟೀಮ್ ಇಂಡಿಯಾ ಆಟಗಾರರನ್ನು ರೋಹಿತ್, ಅಲ್ಬನೀಸ್‌ಗೆ ಪರಿಚಯಿಸಿದರು. ಇದೇ ವೇಳೆ ಪರ್ತ್ ಟೆಸ್ಟ್ ಜಯದ ರೂವಾರಿಗಳಾದ ಅನುಭವಿ ವಿರಾಟ್ ಕೊಹ್ಲಿ ಹಾಗೂ ಪಂದ್ಯಶ್ರೇಷ್ಠ ಜಸ್‌ಪ್ರೀತ್ ಬುಮ್ರಾ ಅವರ ಪ್ರದರ್ಶನಕ್ಕೆ ಅಲ್ಬನೀಸ್ ಮೆಚ್ಚುಗೆ ವ್ಯಕ್ತಪಡಿಸಿದರು.
ಆಸೀಸ್ ಸಂಸತ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಬಗ್ಗೆ ಮಾತನಾಡಿದ ರೋಹಿತ್ ಶರ್ಮ, ‘ನಾವು ಆಸ್ಟ್ರೇಲಿಯಾ ಎದುರು ಆರಂಭಿಕ ಯಶಸ್ಸು ಸಾಧಿಸಿದ್ದು, ಇದೇ ವೇಗವನ್ನು ಮುಂದಕ್ಕೆ ಕೊಂಡೊಯ್ಯಲು ಬಯಸುತ್ತೇವೆ. ಉಳಿದ ಪಂದ್ಯಗಳಲ್ಲಿ ಎರಡೂ ದೇಶಗಳ ಅಭಿಮಾನಿಗಳಿಗೆ ಮನೋರಂಜನೆ ನೀಡಲು ಬಯಸುತ್ತೇವೆ. ಕ್ರಿಕೆಟ್ ಜತೆಗೆ ಸ್ಥಳೀಯ ಸಂಸ್ಕೃತಿ, ತಾಣಗಳು ಬಹಳ ಸಂತೋಷ ನೀಡುತ್ತವೆ. ಔತಣ ಕೂಟಕ್ಕೆ ಆಹ್ವಾನಿಸಿದ್ದಕ್ಕಾಗಿ ಧನ್ಯವಾದ’ ತಿಳಿಸಿದರು.
ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ ಎರಡನೇ ಟೆಸ್ಟ್ ಡಿ.6ರಂದು ಅಡಿಲೇಡ್‌ನಲ್ಲಿ ಆರಂಭವಾಗಲಿದ್ದು, ಇದು ಪಿಂಕ್‌ಬಾಲ್ ಅಹರ್ನಿಶಿ ಪಂದ್ಯವಾಗಿರಲಿದೆ. ಈ ಟೆಸ್ಟ್‌ಗೆ ಪೂರ್ವಸಿದ್ಧತೆಯಾಗಿ ಭಾರತ, ಪ್ರಧಾನ ಮಂತ್ರಿ ಇಲೆವೆನ್ ಎದುರು ಅಭ್ಯಾಸ ಪಂದ್ಯವನ್ನಾಡಲಿದೆ.
ನರೇಂದ್ರ ಮೋದಿ, ಪ್ರಧಾನಿನನ್ನ ಉತ್ತಮ ಗೆಳೆಯ ಅಲ್ಬನೀಸ್‌ರನ್ನು ಭಾರತ ಮತ್ತು ಪ್ರಧಾನಿ ಇಲೆವೆನ್ ತಂಡಗಳೊಂದಿಗೆ ನೋಡಿ ಖುಷಿಯಾಯಿತು. ಸರಣಿಯಲ್ಲಿ ಭಾರತ ಶ್ರೇಷ್ಠ ಆರಂಭ ಕಂಡಿದೆ. 140 ಕೋಟಿ ಭಾರತೀಯರು, ಮೆನ್ ಇನ್ ಬ್ಲೂ ತಂಡವನ್ನು ಬೆಂಬಲಿಸುತ್ತಿದ್ದಾರೆ. ಮುಂಬರುವ ಪಂದ್ಯಗಳನ್ನು ಎದುರು ನೋಡುತ್ತಿರುವೆ.ರೋಹಿತ್ ಶರ್ಮ, ಭಾರತ ತಂಡದ ನಾಯಕಕ್ರಿಕೆಟ್ ಭಾರತ-ಆಸ್ಟ್ರೇಲಿಯಾ ಸಂಬಂಧಗಳ ಅವಿಭಾಜ್ಯ ಅಂಗವಾಗಿದೆ. ಬಾರ್ಡರ್-ಗಾವಸ್ಕರ್ ಟ್ರೋಫಿ ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತದೆ. ಅಭಿಮಾನಿಗಳ ಬೆಂಬಲ ಹಾಗೂ ಆಟಗಾರರ ಸ್ಪರ್ಧಾತ್ಮಕ ಮನೋಭಾವದಿಂದ ಆಸೀಸ್ ಎದುರು ಸೆಣಸಲು ಸಂತೋಷವಾಗುತ್ತದೆ. ಎರಡೂ ವಿಶ್ವದ ಅತ್ಯತ್ತಮ ತಂಡಗಳಾಗಿವೆ.