ಮ್ಯಾಂಚೆಸ್ಟರ್​ನಲ್ಲಿ ಟೀಮ್ ಇಂಡಿಯಾ ಹಾಗೂ ಎಂಯುಎಫ್​ಸಿ ಆಟಗಾರರ ಸ್ನೇಹಮಿಲನ

New Project (1)
Published on

ಮ್ಯಾಂಚೆಸ್ಟರ್​: ಟೀಮ್​ ಇಂಡಿಯಾ ಮತ್ತು ಮ್ಯಾಂಚೆಸ್ಟರ್​ ಯುನೈಟೆಡ್​ ಫುಟ್​ಬಾಲ್​ ಕ್ಲಬ್​ನ (ಎಂಯುಎಫ್​ಸಿ) ಸ್ನೇಹಮಿಲನ ಭಾನುವಾರ ಮ್ಯಾಂಚೆಸ್ಟರ್​ನಲ್ಲಿ ನಡೆಯಿತು. ಎರಡೂ ತಂಡಗಳ ಕಿಟ್​ ಪ್ರಾಯೋಜಕತ್ವ ಹೊಂದಿರುವ ಅಡಿಡಾಸ್​ ಕಂಪನಿಯ ವಿಶೇಷ ಪೋಟೋಶೂಟ್​ ಸಲುವಾಗಿ ಎರಡೂ ತಂಡಗಳ ಆಟಗಾರರು ಒಗ್ಗೂಡಿದರು. ಅಲ್ಲದೆ ಪರಸ್ಪರ ಕ್ರಿಕೆಟ್​-ಫುಟ್​ಬಾಲ್​ ಎರಡೂ ಆಟಗಳನ್ನು ಆಡಿದರು.

ಈ ವೇಳೆ ಭಾರತ ತಂಡದ ಆಟಗಾರರು ಮ್ಯಾಂಚೆಸ್ಟರ್​ ಯುನೈಟೆಡ್​ ತಂಡದ ಕೆಂಪು ಬಣ್ಣದ ಜೆರ್ಸಿಯನ್ನು ಧರಿಸಿದ್ದರೆ, ಮ್ಯಾಂಚೆಸ್ಟರ್​ ತಂಡದ ಆಟಗಾರರು ಟೀಮ್​ ಇಂಡಿಯಾದ ಬಿಳಿ ಮತ್ತು ನೀಲಿ ಬಣ್ಣದ ಜೆರ್ಸಿ ಧರಿಸಿದ್ದರು. ಉಭಯ ತಂಡಗಳ ನಾಯಕರಾದ ಶುಭಮಾನ್​ ಗಿಲ್​-ಬ್ರುನೋ ಫೆರ್ನಾಂಡೀಸ್​ ಮತ್ತು ಕೋಚ್​ಗಳಾದ ಗೌತಮ್​ ಗಂಭೀರ್​-ರುಬನ್​ ಅಮೋರಿಮ್​ ಜತೆಯಾಗಿ ಪೋಸ್​ ನೀಡಿ ಗಮನಸೆಳೆದರು.

ಮ್ಯಾಂಚೆಸ್ಟರ್​ ತಂಡದ ಗೋಲುಕೀಪರ್​ ಟಾಮ್​ ಹೀಟನ್​ ಎದುರು ಭಾರತ ತಂಡದ ವಿಕೆಟ್​ ಕೀಪರ್​ ರಿಷಭ್​ ಪಂತ್​ ಕೆಲವು ಪೆನಾಲ್ಟಿಗಳನ್ನು ಬಾರಿಸಿದರೆ, ಮ್ಯಾಂಚೆಸ್ಟರ್​ ಯುನೈಟೆಡ್​ ತಂಡದ ಅಭಿಮಾನಿಯಾಗಿರುವ ವೇಗಿ ಮೊಹಮದ್​ ಸಿರಾಜ್​ ತನ್ನ ನೆಚ್ಚಿನ ಆಟಗಾರರಾದ ಹ್ಯಾರಿ ಮಗುಯಿರ್​ ಮತ್ತು ಕ್ಯಾಸ್ಮಿರೋ ಜತೆ ಮಾತನಾಡಿ ಸಂಭ್ರಮಿಸಿದರು. ಭಾರತ ತಂಡದ ಆಟಗಾರರು ಶನಿವಾರ ರೈಲಿನ ಮೂಲಕ ಲಂಡನ್​ನಿಂದ ಮ್ಯಾಂಚೆಸ್ಟರ್​ಗೆ ಆಗಮಿಸಿದಾಗ ಮಳೆಯ ಸ್ವಾಗತ ಲಭಿಸಿತ್ತು. ಬುಧವಾರದಿಂದ ಮ್ಯಾಂಚೆಸ್ಟರ್​ನಲ್ಲಿ 4ನೇ ಟೆಸ್ಟ್​ ಪಂದ್ಯ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net