

ನವದೆಹಲಿ: ಇಡೀ ದೇಶವೇ ಲಾಕ್ಡೌನ್ ಆಗಿರುವ ಸಮಯದಲ್ಲಿ 1983ರ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್ ಹೊಸ ಲುಕ್ನಲ್ಲಿ ಗಮನ ಸೆಳೆದಿದ್ದಾರೆ. ಕೇಶಮುಂಡನ ಮಾಡಿಸಿಕೊಂಡಿರುವ 61 ವರ್ಷದ ಕಪಿಲ್, ಗಡ್ಡವನ್ನು ಮಾತ್ರ ಉಳಿಸಿಕೊಂಡಿದ್ದಾರೆ. ಕಪು್ಪ ಸೂಟ್ ಧರಿಸಿ ಕಪಿಲ್ ನೀಡಿರುವ ಪೋಸ್ನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ, ಅವರ ಮಾಜಿ ಸಹ-ಆಟಗಾರ ಚೇತನ್ ಶರ್ಮ ಹೊಸ ಲುಕ್ ಬಹಿರಂಗಪಡಿಸಿದ್ದಾರೆ. ‘ಲೆಜೆಂಡರಿ ಕಪಿಲ್ ದೇವ್ ಅವರ ಹೊಸ ಲುಕ್. ನಾನಿದನ್ನು ಇಷ್ಟ ಪಟ್ಟೆ. ಪಾಜಿ ನಿಮ್ಮನ್ನು ವಿಭಿನ್ನ ಲುಕ್ನಲ್ಲಿ ನೋಡಲು ಖುಷಿಯಾಗುತ್ತಿದೆ. ಅಮೋಘ’ ಎಂದು ಚೇತನ್ ಶರ್ಮ ಟ್ವೀಟಿಸಿದ್ದಾರೆ.
ಕ್ರಿಕೆಟ್ ಆಡುವ ದಿನಗಳಲ್ಲಿ ಗುಂಗುರು ಕೂದಲಿನಿಂದಲೇ ಗಮನ ಸೆಳೆದಿದ್ದ ಕಪಿಲ್, ಹಿಂದೆಯೂ ಹೊಸ ಲುಕ್ಗಳ ಪ್ರಯೋಗವನ್ನು ಇಷ್ಟಪಡುತ್ತಿದ್ದರು. ಅಭಿಮಾನಿಗಳು ಈ ಹೊಸ ಲುಕ್ ಅನ್ನು ವೆಸ್ಟ್ ಇಂಡೀಸ್ ದಿಗ್ಗಜ ವಿವ್ ರಿಚರ್ಡ್ಸ್ಗೆ ಹೋಲಿಸಿದ್ದಾರೆ. ಮತ್ತೆ ಕೆಲವರು ‘ಕಪಿಲ್ ಡೆವಿಲ್ಸ್’ ಸದಸ್ಯ ಸಯ್ಯದ್ ಕಿರ್ವನಿಗೂ ಹೋಲಿಸಿದ್ದಾರೆ. ಈ ಮುನ್ನ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕೂಡ ತಮ್ಮ ಕೂದಲನ್ನು ತಾವೇ ಕತ್ತರಿಸಿಕೊಳ್ಳುತ್ತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವ ಮೂಲಕ ಗಮನಸೆಳೆದಿದ್ದರೆ, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂದಲನ್ನು ಪತ್ನಿ ಅನುಷ್ಕಾ ಶರ್ಮ ಕತ್ತರಿಸಿದ್ದರು. ಬಳಿಕ ಕೊಹ್ಲಿ ಗಡ್ಡವನ್ನು ಟ್ರಿಮ್ ಮಾಡಿಕೊಂಡು ‘ಟ್ರಿಮ್ ಎಟ್ ಹೋಮ್ ಚಾಲೆಂಜ್’ ಎಂಬ ಹೊಸ ಅಭಿಯಾನವನ್ನೂ ಸಾಮಾಜಿಕ ಜಾಲತಾಣದಲ್ಲಿ ಆರಂಭಿಸಿದ್ದರು. -ಏಜೆನ್ಸೀಸ್