

ನ್ಯೂಯಾರ್ಕ್: ಜಗತ್ತಿನ ಸೂಪರ್ ಪವರ್ ಅಮೆರಿಕದಲ್ಲಿ ಟಿ20 ವಿಶ್ವಕಪ್ ನಡೆಯುತ್ತಿರುವುದು ಗೊತ್ತೇ ಇದೆ. ಈ ಟೂರ್ನಿಯಲ್ಲಿ ನಂಬಲಾಗದ ಗೆಲುವುಗಳು ದಾಖಲಾಗುತ್ತಿವೆ. ಸಣ್ಣ ತಂಡಗಳು ದೊಡ್ಡ ತಂಡಗಳಿಗೆ ಶಾಕ್ ನೀಡುತ್ತಿವೆ. ನಿನ್ನೆ (ಜೂನ್ 06) ನಡೆದ ಪಂದ್ಯದಲ್ಲಿ ಕ್ರಿಕೆಟ್ ಶಿಶು ಅಮೆರಿಕ, ಬಲಿಷ್ಠ ಪಾಕಿಸ್ತಾನ ತಂಡವನ್ನು ಮಣಿಸಿದೆ. ಅದರಲ್ಲೂ ಈ ಪಂದ್ಯ ಸೂಪರ್ ಓವರ್ನಂತಹ ರೋಚಕ ಘಟ್ಟವನ್ನು ತಲುಪಿ, ಕ್ರೀಡಾಭಿಮಾನಿಗಳಿಗೆ ಮನರಂಜನೆಯ ಹೂರಣವನ್ನು ಉಣಬಡಿಸಿತು.
ಈ ಪಂದ್ಯದಲ್ಲಿ ಯುಎಸ್ಎ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತು. ಅಲ್ಲದೆ, ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್ನಲ್ಲಿ ಮಿಂಚಿ, ಎದುರಾಳಿ ತಂಡ ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸಿತು. ಬ್ಯಾಟಿಂಗ್‌ಗೆ ಇಳಿದ ಪಾಕಿಸ್ತಾನ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಬಾಬರ್ ಆಜಮ್ 44 (43 ಎಸೆತ, 3 ಬೌಂಡರಿ, 2 ಸಿಕ್ಸರ್) ಮತ್ತು ಶಾದಾಬ್ ಖಾನ್ 40 (25 ಎಸೆತ, 1 ಬೌಂಡರಿ, 3 ಸಿಕ್ಸರ್) ಗಳಿಸಿದರು ಹಾಗೂ ಶಾಹೀನ್ ಅಫ್ರಿದಿ 23* (16 ಎಸೆತ, 1 ಬೌಂಡರಿ, 2 ಸಿಕ್ಸರ್) ತಂಡಕ್ಕೆ ಉತ್ತಮ ಸ್ಕೋರ್ ನೀಡಿದರು. ಬಳಿಕ ಬ್ಯಾಟಿಂಗ್‌ಗೆ ಇಳಿದ ಅಮೆರಿಕ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 159 ರನ್ ಗಳಿಸಿತು. ನಾಯಕ ಮೊನಾಂಕ್ ಪಟೇಲ್ 50 (38 ಎಸೆತ, 7 ಬೌಂಡರಿ, 1 ಸಿಕ್ಸರ್), ಆರನ್ ಜೋನ್ಸ್ 36* (26 ಎಸೆತ 2 ಬೌಂಡರಿ, 2 ಸಿಕ್ಸರ್), ಗೂಸ್ 35 ರನ್ (26 ಎಸೆತ, 5 ಬೌಂಡರಿ, 1 ಸಿಕ್ಸರ್) ಗಳಿಸಿ ಮಿಂಚಿದರು.
ಆದರೆ ಕೊನೆಯ ಓವರ್‌ನಲ್ಲಿ ಅಮೆರಿಕದ ಗೆಲುವಿಗೆ 15 ರನ್ ಬೇಕಿತ್ತು. ಮೊದಲ ಐದು ಎಸೆತಗಳಲ್ಲಿ 4 ಸಿಂಗಲ್ಸ್ ಹಾಗೂ ಒಂದು ಸಿಕ್ಸರ್ ಬಂದವು. ಕೊನೆಯ ಎಸೆತದಲ್ಲಿ ಐದು ರನ್‌ಗಳ ಅಗತ್ಯವಿದ್ದಾಗ, ನಿತೀಶ್ ಕುಮಾರ್ ಬೌಂಡರಿ ಬಾರಿಸಿದರು. ಇದರಿಂದ ಪಂದ್ಯ ಟೈ ಆಗಿ, ಸೂಪರ್ ಓವರ್‌ಗೆ ಕಾರಣವಾಯಿತು. ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಅಮೆರಿಕ ಒಂದು ವಿಕೆಟ್ ನಷ್ಟಕ್ಕೆ 18 ರನ್ ಗಳಿಸಿತು. 19 ರನ್‌ಗಳ ಗುರಿಯಲ್ಲಿ ಪಾಕಿಸ್ತಾನ ತನ್ನ ವಿಕೆಟ್ ಕಳೆದುಕೊಂಡು 13 ರನ್‌ಗಳಿಗೆ ಸೀಮಿತವಾಗಿ ಸೋಲು ಅನುಭವಿಸಿತು. ಈ ಗೆಲುವಿನೊಂದಿಗೆ ಗ್ರೂಪ್-ಎಯಲ್ಲಿ ಅಮೆರಿಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಸೂಪರ್ ಓವರ್‌ನಲ್ಲಿ ಸೌರಭ್ ನೇತ್ರವಲ್ಕರ್ ಅವರ ಅದ್ಭುತ ಬೌಲಿಂಗ್ ಅಮೆರಿಕದ ಗೆಲುವಿಗೆ ಪ್ರಮುಖವಾಯಿತು.
ಯಾರು ಸೌರಭ್ ನೇತ್ರವಲ್ಕರ್?
1991, ಅಕ್ಟೋಬರ್ 16ರಂದು ಮುಂಬೈನಲ್ಲಿ ಜನಿಸಿದ ನೇತ್ರವಲ್ಕರ್, 2010ರ ವಿಶ್ವಕಪ್‌ನಲ್ಲಿ ಭಾರತೀಯ ಅಂಡರ್-19 ತಂಡಕ್ಕಾಗಿ ಆಡಿದ್ದರು. ಆದರೆ, ಭಾರತದಲ್ಲಿನ ಸ್ಪರ್ಧೆಯು ತನ್ನ ಪ್ರತಿಭೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಅವಕಾಶ ನೀಡಲಿಲ್ಲ. ಹೀಗಾಗಿ 2015ರಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಗೆ ಬಂದು ನೆಲೆಸಿದರು. ಸುಮಾರು 9 ವರ್ಷಗಳ ನಂತರ ತಮ್ಮ ವೃತ್ತಿಜೀವನವನ್ನು ಮರು ಆರಂಭಿಸಿ, ಇದೀಗ ತಮ್ಮಿಷ್ಟದ ಕ್ರೀಡೆಯಲ್ಲಿ ಇತಿಹಾಸವನ್ನು ನಿರ್ಮಿಸಿದ್ದಾರೆ. ನೇತ್ರವಲ್ಕರ್ ಅವರು ಮುಂಬೈಗಾಗಿ ರಣಜಿ ಟ್ರೋಫಿ ಪಂದ್ಯವನ್ನು ಆಡಿದ್ದಾರೆ. ಭಾರತದ ಕ್ರಿಕೆಟ್ ತಾರೆಗಳಾದ ಕೆ.ಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಹರ್ಷಲ್ ಪಟೇಲ್, ಜಯದೇವ್ ಉನದ್ಕತ್ ಹಾಗೂ ಸಂದೀಪ್ ಶರ್ಮಾ ಅವರು ಟೀಮ್ಮೇಟ್ ಆಗಿದ್ದರು.
ನೇತ್ರವಲ್ಕರ್ ಅವರು ಕೇವಲ ಪ್ರತಿಭಾನ್ವಿತ ಕ್ರಿಕೆಟಿಗ ಮಾತ್ರವಲ್ಲದೆ ಅದ್ಭುತ ಇಂಜಿನಿಯರ್ ಕೂಡ ಆಗಿದ್ದಾರೆ. ಒರಾಕಲ್‌ನಲ್ಲಿ ಹಿರಿಯ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕ್ರೀಡೆ ಮತ್ತು ತಮ್ಮ ವೃತ್ತಿಯಲ್ಲಿ ಸಮತೋಲನ ಕಾಯ್ದುಕೊಂಡಿದ್ದರು. ತಮ್ಮ ಸಂಸ್ಥೆಗಾಗಿ ಕೋಡಿಂಗ್ ಮಾಡುವುದು ಅವರ ಪ್ರಾಥಮಿಕ ಕೆಲಸವಾಗಿದೆ. ಆದರೆ, ಕ್ರಿಕೆಟ್ ಮೇಲಿನ ಉತ್ಸಾಹ ಮತ್ತು ಇಂಜಿನಿಯರ್ ಕೆಲಸ ಎರಡನ್ನೂ ನಿರ್ವಹಿಸುವುದು ಅತ್ಯಂತ ಸಂಕೀರ್ಣವಾದ ಕೆಲಸವಾಗಿ ಉಳಿಯಿತು. ಆದರೂ ಎರಡನ್ನೂ ತುಂಬಾ ಅದ್ಭುತವಾಗಿ ನಿಭಾಯಿಸಿದರು ಮತ್ತು ಪ್ರಸ್ತುತ ಅಮೆರಿಕದಲ್ಲಿ ನಡೆಯುತ್ತಿರುವ T20 ವಿಶ್ವಕಪ್‌ನಲ್ಲಿ ಅಮೆರಿಕ ಇತಿಹಾಸ ನಿರ್ಮಿಸುವಲ್ಲಿ ನೇತ್ರವಲ್ಕರ್ ನಿರ್ಣಾಯಕ ಪಾತ್ರ ವಹಿಸಿದ್ದಾರೆ. (ಏಜೆನ್ಸೀಸ್)