

ರಾಜ್‌ಕೋಟ್: ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ (24ಕ್ಕೆ 5) ಐದು ವಿಕೆಟ್ ಸಾಧನೆಯ ಹೊರತಾಗಿಯೂ ಬ್ಯಾಟರ್‌ಗಳ ನೀರಸ ನಿರ್ವಹಣೆಯಿಂದಾಗಿ ಭಾರತ ತಂಡ ಮೂರನೇ ಟಿ20 ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ಎದುರು 26 ರನ್‌ಗಳಿಂದ ಪರಾಭವಗೊಂಡಿದೆ. ಎಡಗೈ ಬ್ಯಾಟರ್ ಬೆನ್ ಡಕೆಟ್ (51 ರನ್, 28 ಎಸೆತ, 7 ಬೌಂಡರಿ, 2 ಸಿಕ್ಸರ್) ಅರ್ಧಶತಕ ಹಾಗೂ ಬೌಲರ್‌ಗಳ ಸಂಘಟಿತ ದಾಳಿಯ ನೆರವಿನಿಂದ ಗೆಲುವು ಒಲಿಸಿಕೊಂಡ ಇಂಗ್ಲೆಂಡ್ ಸರಣಿ ಜೀವಂತವಿರಿಸಿದೆ. ಐದು ಪಂದ್ಯಗಳ ಸರಣಿಯಲ್ಲಿ ಈಗ ಸೂರ್ಯಕುಮಾರ್ ಬಳಗದ ಮುನ್ನಡೆ 2-1ಕ್ಕೆ ತಗ್ಗಿದೆ. ಈ ಮೂಲಕ ಸೂರ್ಯಕುಮಾರ್ ಹಾಗೂ ಕೋಚ್ ಗೌತಮ್ ಗಂಭೀರ್ ಕಾಂಬಿನೇಷನ್‌ನ ಅಜೇಯ ಓಟಕ್ಕೂ ಬ್ರೇಕ್ ಬಿದ್ದಿದೆ.
ನಿರಂಜನ್ ಷಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಸತತ ಮೂರನೇ ಟಾಸ್ ಗೆದ್ದ ಸೂರ್ಯಕುಮಾರ್ ಮತ್ತೊಮ್ಮೆ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್ ಆರಂಭಿಕ ಡಕೆಟ್ ಅರ್ಧಶತಕದ ನೆರವಿನಿಂದ ಸುಸ್ಥಿತಿಯಲ್ಲಿತ್ತು. ಆಗ ವರುಣ್ ಚಕ್ರವರ್ತಿ ದಾಳಿಗೆ ಮಧ್ಯಮ ಕ್ರಮಾಂಕ ನಲುಗಿತು. ಕೊನೆಗೆ ಲಿಯಾಮ್ ಲಿವಿಂಗ್‌ಸ್ಟೋನ್ (43 ರನ್, 24 ಎಸೆತ, 1 ಬೌಂಡರಿ, 5 ಸಿಕ್ಸರ್) ಉಪಯುಕ್ತ ಆಟದ ನೆರವಿನಿಂದ ಇಂಗ್ಲೆಂಡ್ 9 ವಿಕೆಟ್‌ಗೆ 171 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ನಿರಂತರ ವಿಕೆಟ್ ಕಳೆದುಕೊಂಡು ಜತೆಯಾಟದ ಕೊರತೆ ಎದುರಿಸಿದ ಭಾರತ 9 ವಿಕೆಟ್‌ಗೆ 145 ರನ್‌ಗಳಿಸಲಷ್ಟೇ ಶಕ್ತಗೊಂಡಿತು.
3. ವರುಣ್ ಚಕ್ರವರ್ತಿ (16 ಇನಿಂಗ್ಸ್) ಟಿ20 ವಿಕೆಟ್‌ನಲ್ಲಿ ಎರಡು ಬಾರಿ ಐದು ವಿಕೆಟ್ ಸಾಧನೆ ಮಾಡಿದ 3ನೇ ಭಾರತೀಯ ಹಾಗೂ ಎರಡನೇ ಸ್ಪಿನ್ನರ್ ಎನಿಸಿದರು. ಭುವನೇಶ್ವರ್ ಕುಮಾರ್ (86 ಇನಿಂಗ್ಸ್), ಕುಲದೀಪ್ ಯಾದವ್ (39 ಇನಿಂಗ್ಸ್) ಮೊದಲಿಬ್ಬರು ಸಾಧಕರು.
1. ವರುಣ್ ಚಕ್ರವರ್ತಿ (16 ಪಂದ್ಯ) ವೇಗವಾಗಿ 5 ಬಾರಿ ಐದು ವಿಕೆಟ್ ಸಾಧನೆ ಮಾಡಿದ ಐಸಿಸಿ ಪೂರ್ಣ ಸದಸ್ಯ ರಾಷ್ಟ್ರಗಳ ಬೌಲರ್‌ಗಳ ಪಟ್ಟಿಯಲ್ಲಿ ಅಜಂತಾ ಮೆಂಡಿಸ್ (22 ಪಂದ್ಯ) ದಾಖಲೆಯನ್ನು ಅಳಿಸಿ ಅಗ್ರಸ್ಥಾನಕ್ಕೇರಿದರು.
ಅರ್ಷದೀಪ್‌ಗೆ ರೆಸ್ಟ್, ಶಮಿಗೆ ಚಾನ್ಸ್
ಅನುಭವಿ ವೇಗಿ ಮೊಹಮದ್ ಶಮಿ 435 ದಿನಗಳ ನಂತರ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಣಕ್ಕಿಳಿದರು. 2023ರ ಏಕದಿನ ವಿಶ್ವಕಪ್‌ನಲ್ಲಿ ಕೊನೆಯದಾಗಿ ಭಾರತ ಪರ ಆಡಿದ್ದ ಶಮಿ, ಬಳಿಕ ಗಾಯದ ಶಸ ಚಿಕಿತ್ಸೆಗೆ ಒಳಪಟ್ಟಿದ್ದರು. ಎಡಗೈ ವೇಗಿ ಅರ್ಷದೀಪ್ ಸಿಂಗ್‌ಗೆ ವಿಶ್ರಾಂತಿ ನೀಡಿ ಶಮಿಗೆ ಅವಕಾಶ ಕಲ್ಪಿಸಲಾಯಿತು. ಇದು ಮೂರನೇ ಪಂದ್ಯದಲ್ಲಿ ಭಾರತ ತಂಡದಲ್ಲಿನ ಏಕೈಕ ಬದಲಾವಣೆಯಾಗಿದೆ. ಪುನರಾಗಮನದ ಮೊದಲ ಓವರ್‌ನಲ್ಲಿ ಆರು ರನ್ ಬಿಟ್ಟುಕೊಟ್ಟ ಶಮಿ, ಗಂಟೆಗೆ 130+ ಪ್ಲಸ್ ಕಿ.ಮೀ ವೇಗದಲ್ಲಿ ಬೌಲಿಂಗ್ ನಡೆಸಿದರು. ಬ್ಯಾಟಿಂಗ್‌ನಲ್ಲಿ ಒಂದೂ ಸಿಕ್ಸರ್ ಸಿಡಿಸಿ ಗಮನಸೆಳೆದರು. 2022ರ ಬಳಿಕ ಶಮಿ ಆಡಿದ ಮೊದಲ ಟಿ20 ಇದಾಗಿದೆ.