ವಿಶ್ವಕಪ್​ ಕನಸು ನನಸಾಗಿಸುವ ಭಾರತ ತಂಡ ರೆಡಿ; ಏನು ಶಕ್ತಿ? ಏನು ದೌರ್ಬಲ್ಯ?

world cup india web
Published on

ಬೆಂಗಳೂರು: ಮೂರನೇ ಬಾರಿಗೆ ಏಕದಿನ ವಿಶ್ವಕಪ್​ ಟ್ರೋಫಿ ಎತ್ತಿ ಹಿಡಿಯುವ ಭಾರತದ 140 ಕೋಟಿ ಜನರ ಕನಸು ನನಸಾಗಿಸುವ ಸಾಮರ್ಥ್ಯ ಹೊಂದಿರುವ ರೋಹಿತ್​ ಶರ್ಮ ಸಾರಥ್ಯದ ಟೀಮ್​ ಇಂಡಿಯಾ, ತವರಿನ ಜಾಗತಿಕ ಕ್ರಿಕೆಟ್​ ಹಬ್ಬಕ್ಕೆ ಸಜ್ಜಾಗಿದೆ. ಕೆಲ ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಭಾರತ ಇತ್ತೀಚೆಗೆ ತನ್ನ ಪೂರ್ಣ ಸಾಮರ್ಥ್ಯದ ತಂಡವನ್ನು ಕಣಕ್ಕಿಳಿಸಲಾಗದೆ ಚಡಪಡಿಸುತ್ತಿತ್ತು. ಆದರೆ ಈಗ ತವರಿನ ವಿಶ್ವಕಪ್​ ಸವಾಲಿಗೆ ಪೂರ್ಣ ಸಾಮರ್ಥ್ಯದ ಭಾರತ ತಂಡವೇ ಕಣಕ್ಕಿಳಿಯಲು ರೆಡಿಯಾಗಿದೆ. ಈಗಾಗಲೆ ಗಾಯದಿಂದ ಚೇತರಿಸಿಕೊಂಡು ಭಾರತ ತಂಡವನ್ನು ಕೂಡಿಕೊಂಡಿದ್ದ ಪ್ರಮುಖ ವೇಗಿ ಜಸ್​ಪ್ರೀತ್​ ಬುಮ್ರಾ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್​ ಶ್ರೇಯಸ್​ ಅಯ್ಯರ್​ ವಿಶ್ವಕಪ್​ ತಂಡದ ಬಲವನ್ನೂ ಹೆಚ್ಚಿಸಿದ್ದಾರೆ. ಇದೇ ವೇಳೆ, ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದ ನಡುವೆಯೂ ಕನ್ನಡಿಗ ಕೆಎಲ್​ ರಾಹುಲ್​, ಇತ್ತೀಚೆಗೆ ಯಾವುದೇ ಸ್ಪರ್ಧಾತ್ಮಕ ಪಂದ್ಯವನ್ನು ಆಡದಿರುವ ನಡುವೆಯೂ ವಿಶ್ವಕಪ್​ ತಂಡದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್​ ಜತೆಗೆ ವಿಕೆಟ್​ ಕೀಪಿಂಗ್​ ಜವಾಬ್ದಾರಿಯನ್ನೂ ನಿರ್ವಹಿಸುವ ಮಹತ್ವದ ಹೊಣೆಯೊಂದಿಗೆ ಮರಳಿ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. 1983ರಲ್ಲಿ ಕಪಿಲ್​ ದೇವ್​ ಬಳಗ ಮತ್ತು 2011ರಲ್ಲಿ ತವರಿನಲ್ಲೇ ಎಂಎಸ್​ ಧೋನಿ ಟೀಮ್​ ಮಾಡಿದ ವಿಶ್ವಕಪ್​ ಗೆಲುವಿನ ಸಾಧನೆಯನ್ನು 2023ರಲ್ಲಿ ಮತ್ತೆ ಮರುಕಳಿಸುವ ಕನಸು ಈಗ ರೋಹಿತ್​ ಶರ್ಮ ಪಡೆಯ ಹೆಗಲೇರಿದೆ. ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ಗೆ ನಾಯಕನಾಗಿ ಲಭಿಸದ ವಿಶ್ವಕಪ್​ ಗೆಲುವನ್ನು ಕೋಚ್​ ಆಗಿಯಾದರೂ ನನಸಾಗಿಸುವ ಅವಕಾಶವೂ ಇದಾಗಿದೆ. ಇನ್ನು ಭಾರತ 2013ರ ನಂತರದ ಐಸಿಸಿ ಟ್ರೋಫಿ ಬರವನ್ನು ನೀಗಿಸಿಕೊಳ್ಳುವ ಹಂಬಲವನ್ನೂ ಹೊಂದಿದೆ.

ಏಷ್ಯಾಕಪ್​ ಟೂರ್ನಿಯ ಮೊದಲ 2 ಪಂದ್ಯಗಳಿಗೆ ಅಲಭ್ಯರಾಗಿದ್ದ ರಾಹುಲ್​, ಈಗ ಸಂಪೂರ್ಣ ಫಿಟ್​ ಆಗಿರುವ ಕಾರಣ ವಿಶ್ವಕಪ್​ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ ಎಂದು ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್​ ಅಗರ್ಕರ್​ ತಿಳಿಸಿದ್ದಾರೆ. ಸೆ.10ರಂದು ಪಾಕಿಸ್ತಾನ ವಿರುದ್ಧ ನಡೆಯಲಿರುವ ಏಷ್ಯಾಕಪ್​ನ ಸೂಪರ್​-4 ಪಂದ್ಯದಲ್ಲಿ ರಾಹುಲ್​ ಮರಳಿ ಕಣಕ್ಕಿಳಿಯಲಿದ್ದಾರೆ. ಬ್ಯಾಟಿಂಗ್​ ಜತೆಗೆ ವಿಕೆಟ್​ ಕೀಪರ್​ ಆಗಿಯೂ 31 ವರ್ಷದ ರಾಹುಲ್​, ಬೆಂಗಳೂರಿನ ಎನ್​ಸಿಎಯಲ್ಲಿ ಫಿಟ್ನೆಸ್​ ಸಾಬೀತುಪಡಿಸಿದ್ದಾರೆ ಎಂದು ಅಗರ್ಕರ್​ ಸ್ಪಷ್ಟಪಡಿಸಿದ್ದಾರೆ.

ಇಶಾನ್​ ಕಿಶನ್​ ತಂಡದಲ್ಲಿರುವ 2ನೇ ವಿಕೆಟ್​ ಕೀಪರ್​ ಆಗಿದ್ದಾರೆ. ಆದರೆ ವಿಶ್ವಕಪ್​ನಲ್ಲಿ ಅಗತ್ಯಬಿದ್ದರೆ ರಾಹುಲ್​-ಕಿಶನ್​ ಇಬ್ಬರನ್ನೂ 11ರ ಬಳಗದಲ್ಲಿ ಆಡಿಸಲಾಗುವುದನ್ನು ಎಂದು ನಾಯಕ ರೋಹಿತ್​ ಶರ್ಮ ತಳ್ಳಿಹಾಕಲಿಲ್ಲ. ಏಷ್ಯಾಕಪ್​ಗೆ ಮೀಸಲು ವಿಕೆಟ್​ ಕೀಪರ್​ ಆಗಿ ತೆರಳಿರುವ ಸಂಜು ಸ್ಯಾಮ್ಸನ್​ಗೆ ನಿರೀೆಯಂತೆಯೇ ವಿಶ್ವಕಪ್​ ತಂಡದಲ್ಲಿ ಸ್ಥಾನ ಲಭಿಸಿಲ್ಲ.

ಗಾಯದಿಂದ ಚೇತರಿಸಿಕೊಂಡು ಇತ್ತೀಚೆಗೆ ತಂಡಕ್ಕೆ ಮರಳಿರುವ ಮುಂಬೈ ಬ್ಯಾಟರ್​ ಶ್ರೇಯಸ್​ ಅಯ್ಯರ್​, ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಸಂಪಾದಿಸಿದ್ದಾರೆ. ಮಧ್ಯಮ ಕ್ರಮಾಂಕದ ಹೆಚ್ಚುವರಿ ಬ್ಯಾಟರ್​ ಸ್ಥಾನದ ರೇಸ್​ನಲ್ಲಿ ಸೂರ್ಯಕುಮಾರ್​ ಎದುರು ಯುವ ಬ್ಯಾಟರ್​ ತಿಲಕ್​ ವರ್ಮ ನಿರಾಸೆ ಅನುಭವಿಸಿದರು. ಟಿ20 ಕ್ರಿಕೆಟ್​ನಲ್ಲಿ ವಿಶ್ವ ನಂ. 1 ಬ್ಯಾಟರ್​ ಆಗಿದ್ದರೂ, ಏಕದಿನ ಕ್ರಿಕೆಟ್​ನಲ್ಲಿ ಇದುವರೆಗೆ ಸಾಮರ್ಥ್ಯ ಸಾಬೀತುಪಡಿಸದಿರುವ ನಡುವೆಯೂ 32 ವರ್ಷದ ಸೂರ್ಯಕುಮಾರ್​ಗೆ ವಿಶ್ವಕಪ್​ ಆಡುವ ಅದೃಷ್ಟ ಒಲಿದಿದೆ.

'ಆಟಗಾರರು ತಂಡದಲ್ಲಿ ಸ್ಥಾನ ಪಡೆಯಲು ಸ್ಪರ್ಧಿಸುವುದು ಒಳ್ಳೆಯದೇ ಆಗಿದೆ. ಇದರಿಂದ ಸವಾಲುಗಳು ಹೆಚ್ಚುತ್ತವೆ ಮತ್ತು ಆಯ್ಕೆ ಕಠಿಣವಾಗುತ್ತದೆ. ಆದರೆ ನಾವು ಫಾರ್ಮ್​ ಗಮನಿಸಬೇಕಾಗುತ್ತದೆ. ಜತೆಗೆ ಎದುರಿರುವ ಆಟಗಾರ ಯಾರು ಮತ್ತು ಯಾರಿದ್ದರೆ ತಂಡಕ್ಕೆ ಹೆಚ್ಚು ಪ್ರಯೋಜನ ಎಂಬುದನ್ನು ನೋಡಬೇಕಾಗುತ್ತದೆ. ತಂಡದ ಅಗತ್ಯತೆಗೆ ತಕ್ಕಂತೆ ಕೆಲವೊಮ್ಮೆ ಕಠಿಣ ಆಯ್ಕೆ ಮಾಡಬೇಕಾಗುತ್ತದೆ' ಎಂದು ರೋಹಿತ್​ ಶರ್ಮ ವಿಶ್ವಕಪ್​ ತಂಡ ಪ್ರಕಟಣೆಯ ಬಳಿಕ ತಿಳಿಸಿದರು.

ವಿಶ್ವಕಪ್​ಗೆ ಭಾರತ ತಂಡ: ರೋಹಿತ್​ ಶರ್ಮ (ನಾಯಕ), ಹಾರ್ದಿಕ್​ ಪಾಂಡ್ಯ (ಉಪನಾಯಕ), ವಿರಾಟ್​ ಕೊಹ್ಲಿ, ಜಸ್​ಪ್ರೀತ್​ ಬುಮ್ರಾ, ಕೆಎಲ್​ ರಾಹುಲ್​ (ವಿ.ಕೀ), ರವೀಂದ್ರ ಜಡೇಜಾ, ಮೊಹಮದ್​ ಶಮಿ, ಶ್ರೇಯಸ್​ ಅಯ್ಯರ್​, ಕುಲದೀಪ್​ ಯಾದವ್​, ಶುಭಮಾನ್​ ಗಿಲ್​, ಇಶಾನ್​ ಕಿಶನ್​ (ವಿ.ಕೀ), ಸೂರ್ಯಕುಮಾರ್​ ಯಾದವ್​, ಅಕ್ಷರ್​ ಪಟೇಲ್​, ಶಾರ್ದೂಲ್​ ಠಾಕೂರ್​, ಮೊಹಮದ್​ ಸಿರಾಜ್​.

ಸ್ಥಾನ ವಂಚಿತ ಪ್ರಸಿದ್ಧ ಕೃಷ್ಣ

ಅನುಭವಿ ವೇಗಿ ಜಸ್​ಪ್ರೀತ್​ ಬುಮ್ರಾ ಜತೆಗೆ ಇತ್ತೀಚೆಗೆ ಐರ್ಲೆಂಡ್​ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡಕ್ಕೆ ಮರಳಿದ್ದ ವೇಗಿ ಪ್ರಸಿದ್ಧ ಕೃಷ್ಣ ವಿಶ್ವಕಪ್​ ತಂಡದಲ್ಲಿ ಸ್ಥಾನ ಸಂಪಾದಿಸಲು ವಿಲರಾಗಿದ್ದಾರೆ. ಬುಮ್ರಾ ಜತೆಗೆ ಮೊಹಮದ್​ ಶಮಿ ಮತ್ತು ಸಿರಾಜ್​ ತಂಡದಲ್ಲಿರುವ ಮತ್ತಿಬ್ಬರು ಪ್ರಮುಖ ವೇಗಿಗಳಾಗಿದ್ದರೆ, ಬ್ಯಾಟಿಂಗ್​ನಲ್ಲೂ ಉಪಯುಕ್ತರಾಗಬಲ್ಲ ಕಾರಣಕ್ಕೆ ಶಾರ್ದೂಲ್​ ಠಾಕೂರ್​, ಪ್ರಸಿದ್ಧ ಕೃಷ್ಣರನ್ನು ಹಿಂದಿಕ್ಕಿ ಸ್ಥಾನ ಪಡೆದಿದ್ದಾರೆ.

ಮೂವರೂ ಎಡಗೈ ಸ್ಪಿನ್ನರ್​ಗಳು

ವೇಗದ ಬೌಲಿಂಗ್​ನಲ್ಲಿ ಎಲ್ಲ ಬಲಗೈ ಬೌಲರ್​ಗಳಾಗಿದ್ದರೆ, ಸ್ಪಿನ್​ ವಿಭಾಗದಲ್ಲಿ ಮೂವರು ಎಡಗೈ ಸ್ಪಿನ್ನರ್​ಗಳಾದ ಕುಲದೀಪ್​ ಯಾದವ್​, ರವೀಂದ್ರ ಜಡೇಜಾ ಮತ್ತು ಅಕ್ಷರ್​ ಪಟೇಲ್​ ಸ್ಥಾನ ಸಂಪಾದಿಸಿದ್ದಾರೆ. ಇದರಿಂದಾಗಿ ಅನುಭವಿ ಲೆಗ್​ ಸ್ಪಿನ್ನರ್​ ಯಜುವೇಂದ್ರ ಚಾಹಲ್​ ಅವಕಾಶ ವಂಚಿತರಾಗಿದ್ದಾರೆ. ಆರ್​. ಅಶ್ವಿನ್​, ವಾಷಿಂಗ್ಟನ್​ ಸುಂದರ್​ಗೂ ಅಚ್ಚರಿಯ ಅವಕಾಶ ಲಭಿಸಿಲ್ಲ. ಇದರಿಂದ ತಂಡದಲ್ಲಿ ಆಫ್​-ಸ್ಪಿನ್ನರ್​ ಇಲ್ಲದಂತಾಗಿದೆ. ಇದು ಹೆಚ್ಚಿನ ಎಡಗೈ ಬ್ಯಾಟರ್​ಗಳಿರುವ ಆಸ್ಟ್ರೆಲಿಯಾ ಮತ್ತಿತರ ಕೆಲ ತಂಡಗಳ ಎದುರು ಭಾರತಕ್ಕೆ ಹಿನ್ನಡೆ ತವರು ಅಪಾಯವಿದೆ. ಇತ್ತೀಚೆಗೆ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್ ಫೈನಲ್​ನಲ್ಲೂ ಈ ವಿಷಯವೇ ಭಾರತಕ್ಕೆ ಹಿನ್ನಡೆಯಾಗಿತ್ತು. ಇನ್ನು ಜಡೇಜಾ-ಅಕ್ಷರ್​ ಒಂದೇ ರೀತಿಯ ಆಟಗಾರರಾಗಿದ್ದು, ಇಬ್ಬರಿಗೂ ಏಕಕಾಲದಲ್ಲಿ 11ರ ಬಳಗದಲ್ಲಿ ಸ್ಥಾನ ಲಭಿಸುವ ಸಾಧ್ಯತೆಗಳಿಲ್ಲ. ಹೀಗಿರುವುವಾಗ ಅಕ್ಷರ್​ ಸೇರ್ಪಡೆಯ ಅಗತ್ಯವೇನಿತ್ತು ಎಂಬ ಪ್ರಶ್ನೆಯೂ ಎದುರಾಗಿದೆ.

ರೋಹಿತ್​ ಶರ್ಮ ಸಮರ್ಥನೆ

ಶಾರ್ದೂಲ್​ ಠಾಕೂರ್​ ಮತ್ತು ಅಕ್ಷರ್​ ಪಟೇಲ್​ಗೆ ತಂಡದಲ್ಲಿ ಸ್ಥಾನ ಕಲ್ಪಿಸಿರುವುದನ್ನು ರೋಹಿತ್​ ಶರ್ಮ ಸಮರ್ಥಿಸಿಕೊಂಡಿದ್ದಾರೆ. ಬ್ಯಾಟಿಂಗ್​ ಮತ್ತು ಬೌಲಿಂಗ್​ ವಿಭಾಗದ ಆಳ ಹೆಚ್ಚಿಸುವ ಸಲುವಾಗಿ ಅವರಿಬ್ಬರನ್ನು ಆರಿಸಲಾಗಿದೆ ಎಂದು ರೋಹಿತ್​, ಹೇಳಿದ್ದಾರೆ. ಶಾರ್ದೂಲ್​, ಅಕ್ಷರ್​ ಬ್ಯಾಟಿಂಗ್​ನಲ್ಲೂ ಮಿಂಚಬಲ್ಲ ಬೌಲರ್​ಗಳಾಗಿದ್ದು, ಕೆಳ ಕ್ರಮಾಂಕದಲ್ಲಿ ಅವರು ಗಳಿಸುವ 10-15 ರನ್​ಗಳೂ ಕೆಲವೊಮ್ಮೆ ವ್ಯತ್ಯಾಸ ತರಬಲ್ಲುದು. ವಿಶ್ವಕಪ್​ನಲ್ಲಿ ಅವರು ನಿಭಾಯಿಸಬೇಕಾದ ಪಾತ್ರದ ಬಗ್ಗೆ ಅವರಿಗೆ ತಿಳಿಸಿದ್ದೇವೆ ಎಂದು ರೋಹಿತ್​ ವಿವರಿಸಿದ್ದಾರೆ.

*ಕೆಎಲ್​ ರಾಹುಲ್​ ಉಪಸ್ಥಿತಿ ವಿಶ್ವಕಪ್​ನಲ್ಲಿ ಭಾರತ ತಂಡಕ್ಕೆ ಅತ್ಯುತ್ತಮ ಸಮತೋಲನ ಒದಗಿಸಲಿದೆ. ಅವರು ಈಗ ಸಂಪೂರ್ಣ ಫಿಟ್ನೆಸ್​ ಕಂಡುಕೊಂಡಿದ್ದಾರೆ. ಇಶಾನ್​ ಕಿಶನ್​ ಇತ್ತೀಚೆಗೆ ಉತ್ತಮ ನಿರ್ವಹಣೆ ತೋರುತ್ತಿದ್ದಾರೆ. ಹೀಗಾಗಿ ಇಬ್ಬರು ಅತ್ಯುತ್ತಮ ಕೀಪರ್​ಗಳು ಲಭ್ಯರಿದ್ದಂತೆ ಆಗಿದೆ.

| ಅಜಿತ್​ ಅಗರ್ಕರ್​, ಆಯ್ಕೆ ಸಮಿತಿ ಅಧ್ಯಕ್ಷ

*ವಿಶ್ವಕಪ್​ನಲ್ಲಿ ಹಾರ್ದಿಕ್​ ಪಾಂಡ್ಯ ಫಾರ್ಮ್​ ನಮ್ಮ ಪಾಲಿಗೆ ನಿರ್ಣಾಯಕ. ಅವರು ಬ್ಯಾಟಿಂಗ್-ಬೌಲಿಂಗ್​ ಎರಡರಲ್ಲೂ ನಮಗೆ ಉಪಯುಕ್ತರಾಗಬಲ್ಲರು. 3 ಆಲ್ರೌಂಡರ್​ಗಳು, 4 ಬೌಲರ್​ಗಳು, 6 ಬ್ಯಾಟರ್​ಗಳು, 2 ಕೀಪರ್​ಗಳ ಸಮತೋಲನದ ತಂಡವನ್ನು ನಾವು ಪಡೆದಿದ್ದೇವೆ. ಇದು ನಮಗೆ ಲಭ್ಯವಿರುವ ಅತ್ಯುತ್ತಮ ಸಂಯೋಜನೆಯ ತಂಡವಾಗಿದೆ.

| ರೋಹಿತ್​ ಶರ್ಮ, ನಾಯಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net